Advertisement

ಸರಿ ದಾರಿಗೆ ಬಂದ ಈಶಾನ್ಯ ಸಾರಿಗೆ

06:14 PM Apr 22, 2021 | Team Udayavani |

ಕಲಬುರಗಿ: ಆರನೇ ವೇತನ ಆಯೋಗ ಅನ್ವಯ ಸಂಬಳ ಜಾರಿ ಮಾಡಬೇಕೆಂಬ ಬೇಡಿಕೆ ಮುಂದಿಟ್ಟು ಕೊಂಡು ಸಾರಿಗೆ ನೌಕರರು ಮುಷ್ಕರ ಕೈಗೊಂಡಿದ್ದರಿಂದ ಕಳೆದ 15 ದಿನಗಳಿಂದ ಹಳಿ ತಪ್ಪಿದ್ದ ಸರ್ಕಾರಿ ಬಸ್‌ ಗಳು ಬುಧವಾರದಿಂದ ಮತ್ತೆ ಹಳಿಗೆ ಬಂದಿವೆ. ಬಹುಪಾಲು ನೌಕರರು ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಿ ಮೊದಲಿನಂತೆ ಬಸ್‌ಗಳ ಕಾರ್ಯಾಚರಣೆ ನಡೆಸಿದರು.

Advertisement

ವೇತನ ಹೆಚ್ಚಿಸಬೇಕೆಂಬ ಏಕೈಕ ಬೇಡಿಕೆ ಈಡೇರಿಕೆ ಗಾಗಿ ಏ.7ರಿಂದ ಸಾರಿಗೆ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿದ್ದರು. ಆದರೆ, ಮಂಗಳವಾರ ಕೊರೊನಾ ಸಂದರ್ಭದಲ್ಲಿ ಮುಷ್ಕರ ಸರಿಯಲ್ಲ ಎಂದು ಹೈಕೋರ್ಟ್‌ ಹೇಳಿತ್ತು. ನ್ಯಾಯಾಲಯದ ಹೇಳಿಕೆಗೆ ಮನ್ನಣೆ ನೀಡಿ ನೌಕರರು ಬುಧವಾರ ಬೆಳಗ್ಗೆಯೇ ಸ್ವಯಂ ಪ್ರೇರಿತರಾಗಿ ಕರ್ತವ್ಯಕ್ಕೆ ಹಾಜರಾದರು. ಬುಧವಾರ 7500 ಜನ ನೌಕರರು ಕಾರ್ಯ ನಿರ್ವಹಿಸಿದರು.

ಕಲಬುರಗಿ ವಿಭಾಗ -1 ಮತ್ತು ವಿಭಾಗ 2ರ ಸಾರಿಗೆ ಬಸ್‌ಗಳು ಕೇಂದ್ರ ಬಸ್‌ ನಿಲ್ದಾಣದಿಂದ ಸಂಚರಿಸಿದವು. ಸಾರಿಗೆ ನೌಕರರು ತಮ್ಮ-ತಮ್ಮ ಡಿಪೋಗಳಿಗೆ ತೆರಳಿ ಬಸ್‌ಗಳನ್ನು ಬಸ್‌ ನಿಲ್ದಾಣಕ್ಕೆ ತಂದರು. ಇದರಿಂದ 15ದಿನಗಳಿಂದ ನಿಂತಲ್ಲೇ ನಿಂತಿದ್ದ ಅನೇಕ ಬಸ್‌ಗಳು ರಸ್ತೆಗಿಳಿದವು. ಜಿಲ್ಲೆಯ ಬಹುತೇಕ ಭಾಗಗಳು ಮತ್ತು ಹೊರ ಜಿಲ್ಲೆ, ಹೊರ ರಾಜ್ಯಗಳಿಗೆ ಬಸ್‌ಗಳು ಸಂಚರಿಸಿದವು.

ಬೆಳಗ್ಗೆಯಿಂದಲೇ ಬೀದರ್‌, ಯಾದಗಿರಿ, ರಾಯಚೂರು, ವಿಜಯಪುರ, ಬಳ್ಳಾರಿ, ಹೊಸಪೇಟೆ, ಬೆಂಗಳೂರು, ಮಂಗಳೂರು, ಶಿವಮೊಗ್ಗ ಸೇರಿದಂತೆ ಅನೇಕ ಕಡೆಗಳಲ್ಲಿ ಸಾರಿಗೆ ಬಸ್‌ಗಳು ಸೇವೆ ಪುನಾರಂಭಿಸಿದವು. ಮಧ್ಯಾಹ್ನದ ವೇಳೆಗೆ ಕಲಬುರಗಿ 1 ಮತ್ತು 2 ವಿಭಾಗಗಳಿಂದ 120 ಬಸ್‌ಗಳು ಕಾರ್ಯಾಚರಣೆ ನಡೆದಿದ್ದವು. ಅಲ್ಲದೇ, 33 ಬೇರೆ ವಿಭಾಗಗಳ ಸಾರಿಗೆ ಬಸ್‌ಗಳು ಸೇವೆ ನೀಡಿದ್ದವು. ಸಂಜೆ 5ರ ಹೊತ್ತಿಗೆ ಒಟ್ಟಾರೆ ಕಲಬುರಗಿ ವಿಭಾಗ-1ರಿಂದ 140 ಬಸ್‌ಗಳು ಮತ್ತು ವಿಭಾಗ-2ರಿಂದ 124 ಬಸ್‌ ಗಳು ಸಂಚರಿಸಿದ್ದವು.

ಆರನೇ ವೇತನ ಆಯೋಗ ಅನ್ವಯ ಸಂಬಳ ನೀಡಬೇಕೆಂದು ರಾಜ್ಯ ಮಟ್ಟದಲ್ಲಿ ಮುಷ್ಕರ ಕೈಗೊಂಡ ಕಾರಣ ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ಇಷ್ಟು ದಿನವಾದರೂ ನಮ್ಮ ಬೇಡಿಕೆಗೆ ಸರ್ಕಾರ ಸ್ಪಂದಿಸಿಲ್ಲ. ಆದರೂ, ನ್ಯಾಯಾಲಯದ ಅಭಿಪ್ರಾಯಕ್ಕೆ ಮನ್ನಣೆ ನೀಡಿ, ಮುಂದೆ ನ್ಯಾಯಾಲಯವೇ ನಮಗೆ ನ್ಯಾಯ ಒದಗಿಸುವ ಏಕೈಕ ಭರವಸೆಯೊಂದಿಗೆ ಕರ್ತವ್ಯಕ್ಕೆ ಮರಳಿದ್ದೇನೆ ಎಂದು ಸಾರಿಗೆ ಬಸ್‌ ಚಾಲಕರೊಬ್ಬರು ಹೇಳಿದರು.

Advertisement

ಖಾಸಗಿ ಬಸ್‌ಗಳು ವಾಪಸ್‌: ಸಾರಿಗೆ ನೌಕರರ ಮುಷ್ಕರಕ್ಕೆ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ಸರ್ಕಾರ ಖಾಸಗಿ ಬಸ್‌ಗಳು ಮತ್ತು ವಾಹನಗಳಿಗೆ ವಿಶೇಷ ಪರವಾನಗಿ ನೀಡಿ ಸಾರಿಗೆ ಬಸ್‌ ನಿಲ್ದಾಣಗಳಿಂದಲೇ ಸಂಚರಿಸಲು ಅವಕಾಶ ಕಲ್ಪಿಸಿತ್ತು. ಹೀಗಾಗಿ ಕಳೆದ ಎರಡು ವಾರಗಳಿಂದ ಬಸ್‌ ನಿಲ್ದಾಣ ದಲ್ಲಿ ಖಾಸಗಿಯವರ ದರ್ಬಾರ್‌ ಕಾಣಿಸಿತ್ತು. ಬುಧವಾರ ಸಾರಿಗೆ ಬಸ್‌ಗಳು ಬಸ್‌ ನಿಲ್ದಾಣಕ್ಕೆ ಬರುತ್ತಿದ್ದಂತೆ ಖಾಸಗಿ ಬಸ್‌ಗಳು ಮತ್ತು ವಾಹನಗಳ ಮಾಲೀಕರು ತಮ್ಮ ಸೇವೆಯನ್ನು ವಾಪಸ್‌ ಪಡೆದರು.

ಕೇಂದ್ರ ಬಸ್‌ ನಿಲ್ದಾಣದಲ್ಲಿ ಮಧ್ಯಾಹ್ನದ ವೇಳೆಗೆ ಎಲ್ಲ ಖಾಸಗಿ ವಾಹನಗಳು ತೆರವಾಗಿದ್ದವು. ಎಲ್ಲೆಡೆ ಸರ್ಕಾರಿ “ಕೆಂಪು’ ಬಸ್‌ಗಳೇ ಕಾಣಿಸುತ್ತಿದ್ದವು. ಸಾರಿಗೆ ಬಸ್‌ಗಳ ಸಂಖ್ಯೆ ಹೆಚ್ಚಾದಂತೆ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆಯೂ ಅಧಿಕವಾಗಿ ಕಂಡು ಬಂತು.

ಸಾರಿಗೆ ಶಿಸ್ತು-ಬದ್ಧತೆ: ಮುಷ್ಕರದಿಂದ ಬಸ್‌ ನಿಲ್ದಾಣಕ್ಕೆ ಎಂಟ್ರಿ ಪಡೆದಿದ್ದ ಖಾಸಗಿಯವರು ಎಲ್ಲೆಂದರಲ್ಲಿ ಬಸ್‌, ವಾಹನಗಳನ್ನು ನಿಲ್ಲಿಸಿದ್ದರು. ಯಾವ ಶಿಸ್ತು ಕಂಡುಬರುತ್ತಿರಲಿಲ್ಲ. ಬಸ್‌ ನಿಲ್ದಾಣದೊಳಗೆ ಹೋದರೆ ಎಲ್ಲವೂ ಅಯೋಮಯ ವಾದಂತೆ ಭಾಸವಾಗುತ್ತಿತ್ತು. ಆದರೆ, ಸಾರಿಗೆ ಬಸ್‌ಗಳು ನಿಲ್ದಾಣದಲ್ಲಿ ತಮ್ಮ ಎಂದಿನ ಶಿಸ್ತು ಬದ್ಧತೆ ಪ್ರದರ್ಶಿಸಿದವು. ಎಲ್ಲ ಬಸ್‌ಗಳು ನಿಗದಿತ ಮಾರ್ಗಗಳಿಗೆ ತೆರಳುವ ಫ್ಲಾಟ್‌ ಫಾರಂಗಳ ಮೇಲೆ ಸಾಲಾಗಿ ನಿಂತಿದ್ದವು. ಪ್ರಯಾಣಿಕರು ಸಲಭವಾಗಿ ಸಾರಿಗೆ ಬಸ್‌ ಹತ್ತಿ ಹೋದರು.

ಅತಂತ್ರ ಸ್ಥಿತಿಯಲ್ಲಿ ನೌಕರರು ಈಶಾನ್ಯ ಸಾರಿಗೆ ವ್ಯಾಪ್ತಿಯಲ್ಲಿ ಸಾರಿಗೆ ಮುಷ್ಕರದಲ್ಲಿ ಪಾಲ್ಗೊಂಡ 77 ನೌಕರರ ವಜಾ ಮತ್ತು 46 ಸಿಬ್ಬಂದಿ ಸೇವೆಯಿಂದ ಅಮಾನತುಗೊಂಡಿದ್ದು, ಇವರೆಲ್ಲರೂ ಈಗ ಅತಂತ್ರ ಸ್ಥಿತಿಗೆ ಸಿಲುಕಿದಂತೆ ಆಗಿದೆ. ಅಲ್ಲದೇ, ಬಸ್‌ಗಳಿಗೆ ಹಾನಿ, ಕರ್ತವ್ಯಕ್ಕೆ ಅಡ್ಡಿ, ಪ್ರಚೋದನೆ ಸಂಬಂಧ ಮತ್ತು ಕೆಸ್ಮಾ ಕಾಯೆx ಅಡಿ 62 ಜನರ ವಿರುದ್ಧ ಒಟ್ಟಾರೆ 33 ಪ್ರಕರಣ ದಾಖಲಾಗಿದೆ. ಬಸ್‌ಗಳಿಗೆ ಹಾನಿ ಮಾಡಿದ ಪ್ರಕರಣದಲ್ಲಿ 15 ಜನರ ಪೈಕಿ 9 ಸಿಬ್ಬಂದಿ ಬಂಧನಕ್ಕೆ ಒಳಗಾಗಿದ್ದಾರೆ.

ಮುಷ್ಕರದ ಸಂದರ್ಭದಲ್ಲಿ ಸೇವೆಯಿಂದ ವಜಾಗೊಂಡವರವನ್ನು ಮತ್ತೆ ಸೇವೆಗೆ ಸೇರಿಸಿಕೊಳ್ಳುವ ಚಿಂತನೆ ಸಂಸ್ಥೆ ಮುಂದೆ ಇಲ್ಲ. ನೌಕರರ ಮುಷ್ಕರದಿಂದ ಈಶಾನ್ಯ ಸಾರಿಗೆ ಸಂಸ್ಥೆಗೆ ಏ.7ರಿಂದ 21ರ ವರೆಗೆ 72.50 ಕೋಟಿ ರೂ. ಆದಾಯ ಖೋತಾ ಆಗಿದೆ.
ಎಂ. ಕೂರ್ಮಾರಾವ್‌, ವ್ಯವಸ್ಥಾಪಕ
ನಿರ್ದೇಶಕ, ಎನ್‌ಇಕೆಆರ್‌ಟಿಸಿ

Advertisement

Udayavani is now on Telegram. Click here to join our channel and stay updated with the latest news.

Next