Advertisement

ಹೊರಗೆ ತಳಕು, ಒಳಗೆ ಕೊಳಕು

04:42 PM May 14, 2019 | Suhan S |

ಅಫಜಲಪುರ: ಅಧಿಕಾರಿಗಳ ಬೇಜವಾಬ್ದಾರಿತನ ಮತ್ತು ನಿಷ್ಕಾಳಜಿಯಿಂದ ಇಲ್ಲಿನ ಬಸ್‌ ನಿಲ್ದಾಣದಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಕುಡಿಯುವ ನೀರು ಪೋಲಾಗುತ್ತಿದೆ. ಪ್ರಯಾಣಿಕರಿಗೆ ತೊಂದರೆಯಾದರೂ ಗೋಳು ಕೇಳುವವರಿಲ್ಲ. ಹೀಗಾಗಿ ಅಫಜಲಪುರ ಬಸ್‌ ನಿಲ್ದಾಣ ನೋಡಲು ಹೈಟೇಕ್‌ವಾದರೂ ಒಳಗೆ ಅವ್ಯವಸ್ಥೆಯ ಆಗರವಾಗಿದೆ.

Advertisement

ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡಿ ಪಟ್ಟಣದ ಮಧ್ಯೆ ಭಾಗದಲ್ಲಿ ಹೈಟೇಕ್‌ ಬಸ್‌ ನಿಲ್ದಾಣ ನಿರ್ಮಿಸಲಾಗಿದೆ. ಆದರೆ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ನಾಯಿಗಳ ಕಾಟ ಹೆಚ್ಚಾಗಿದ್ದು ನಾಯಿ ಕಡಿತದ ಭೀತಿಯಲ್ಲಿ ಪ್ರಯಾಣಿಕರು ಅದರಲ್ಲೂ ಮಹಿಳೆಯರು, ಮಕ್ಕಳು ಅಂಜಿ ಬಸ್‌ ನಿಲ್ದಾಣದೊಳಗೆ ಬರಬೇಕಾಗಿದೆ.

ಕುಡಿಯುವ ನೀರು ಪೋಲು: ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರಿಗಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಆದರೆ ಈ ನೀರು ಪ್ರಯಾಣಿಕರ ಉಪಯೋಗಕ್ಕೆ ಬಾರದೆ ವ್ಯರ್ಥವಾಗಿ ಪೋಲಾಗುತ್ತಿದೆ. ನಲ್ಲಿಯನ್ನು ಸದಾ ತೆರೆದಿರುವುದರಿಂದ ನೀರು ನಿರಂತರ ಹರಿಯುತ್ತದೆ. ಈ ನೀರು ಹರಿದು ಹೋರ ಹೋಗಲು ಹಾಕಿರುವ ಪೈಪ್‌ ಕಸ ಕಡ್ಡಿಗಳಿಂದ ತುಂಬಿದೆ. ಹೀಗಾಗಿ ಬಸ್‌ ನಿಲ್ದಾಣ ಆವರಣದಲ್ಲೇ ನೀರು ಸಂಗ್ರಹವಾಗುತ್ತಿದೆ. ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗಿದೆ.

ದುರಸ್ತಿಯಾಗದ ಸಿಸಿ ಕ್ಯಾಮೆರಾ: ಬಸ್‌ ನಿಲ್ದಾಣದಲ್ಲಿ ದಿನಪೂರ್ತಿ ನಡೆಯುವ ವಿದ್ಯಾಮಾನಗಳ ಬಗ್ಗೆ ನೀಗಾ ಇಡಲು ಸಿಸಿ ಕ್ಯಾಮೆರಾ ಅಳವಡಿಸಲಾಗಿತ್ತು. ಆದರೆ ಸಿಸಿ ಕ್ಯಾಮೆರಾ ಕೆಟ್ಟು ಬಹಳ ತಿಂಗಳು ಕಳೆದಿವೆ. ಇದುವರೆಗೂ ಸಂಬಂಧಪಟ್ಟವರು ದುರಸ್ತಿ ಮಾಡಿಸುವ ಗೋಜಿಗೆ ಹೋಗಿಲ್ಲ. ಹೀಗಾಗಿ ಬಸ್‌ ನಿಲ್ದಾಣದಲ್ಲಿ ಬಹಳಷ್ಟು ಸರಗಳ್ಳತನದಂತಹ ಪ್ರಕರಣಗಳು ನಡೆಯುತ್ತಿವೆ. ಅಲ್ಲದೆ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಅಳವಡಿಸಿದ್ದ ಆಸನವನ್ನು ಸಹ ಕಳ್ಳರಿದ್ದಾರೆ. ಹೀಗಾಗಿ ಕ್ಯಾಮೆರಾ ಇಲ್ಲದಿರುವುದು ಕಳ್ಳರಿಗೆ ವರದಾನವಾದಂತಾಗಿದೆ.

Advertisement

ಪಾರ್ಕಿಂಗ್‌ ಸಮಸ್ಯೆ: ಇನ್ನೂ ಬಸ್‌ ನಿಲ್ದಾಣದಲ್ಲಿ ಪಟ್ಟಣ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಂದ ಬಂದ ಜನ ಅಡ್ಡಾದಿಡ್ಡಿಯಾಗಿ ಬೈಕ್‌ ಪಾರ್ಕಿಂಗ್‌ ಮಾಡುತ್ತಾರೆ. ಇದರಿಂದ ಬಸ್‌ಗಳ ಸುಗಮ ಸಂಚಾರಕ್ಕೆ ಅಡಚಣೆ ಆಗುತ್ತಿದೆ. ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಿ ಗಂಟೆಗಟ್ಟಲೆ ಜನ ಹೋಗುತ್ತಾರೆ. ಇನ್ನೂ ರಾತ್ರಿ ವೇಳೆ ಬಸ್‌ ನಿಲ್ದಾಣ ಆವರಣದಲ್ಲಿ ಬೆಳಕಿನ ದ್ವೀಪಗಳ ವ್ಯವಸ್ಥೆ ಇಲ್ಲ. ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜನರು ಆಗ್ರಹಿಸಿದ್ದಾರೆ.

•ಮಲ್ಲಿಕಾರ್ಜುನ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next