ಕಾರ್ಕಳ: ಲಾಕ್ ಡೌನ್ ಎಲ್ಲರನ್ನೂ ಮನೆಯಲ್ಲೇ ಇರುವಂತೆ ಮಾಡಿದೆ. ಈ ಸಮಯದಲ್ಲಿ ಕೆಲವರು ಮೊಬೈಲ್ ನಲ್ಲೋ, ಮನೆಯ ಅಂಗಳದಲ್ಲೋ ಆಡುತ್ತಾ ಕುಳಿತರೆ, ಮತ್ತೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಚಾಲೆಂಜ್ ಗಳನ್ನು ಹಾಕಿ ಸಮಯ ಕಳೆಯುತ್ತಿದ್ದಾರೆ. ಅಂದ ಹಾಗೆ ಇಲ್ಲೊಂದು ಕುಟುಂಬ ಲಾಕ್ ಡೌನ್ ಸಮಯದಲ್ಲಿ ಹೊರಗಿನ ಯಾರ ಸಹಾಯವೂ ಇಲ್ಲದೇ 25 ಅಡಿ ಆಳದ ಬಾವಿ ತೋಡಿ, ನೀರು ಜಿನುಗಿಸಿ ಸಂತಸ ಪಟ್ಟಿದೆ.
ಅಂತಾರಾಷ್ಟ್ರೀಯ ಖ್ಯಾತಿಯ ಪವರ್ ಲಿಫ್ಟರ್ ಅಕ್ಷತಾ ಪೂಜಾರಿ ಮತ್ತು ಅವರ ಮನೆಯವರು ಸೇರಿ ಲಾಕ್ ಡೌನ್ ಸಮಯದಲ್ಲಿ ಈ ಬಾವಿ ತೋಡಿದ್ದಾರೆ. ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಬೋಳ ಗ್ರಾಮದಲ್ಲಿರುವ ಇವರ ಮನೆಯ ಅಂಗಳದಲ್ಲಿ ಈ 25 ಅಡಿ ಆಳದ ಬಾವಿ ತೋಡಲಾಗಿದೆ. ಅಕ್ಷತಾ ಪೂಜಾರಿ, ಅವರ ಸಹೋದರರಾದ ಅಶೋಕ್ ಮತ್ತು ಅರುಣ್ ಮತ್ತು ಸಹೋದರಿಯ ಮಕ್ಕಳು ಸೇರಿ ಈ ಪ್ರಯತ್ನ ಮಾಡಿದ್ದು, ಸದ್ಯ ಬಾವಿಯಲ್ಲಿ ನೀರು ದೊರಕಿದ್ದು, ಪ್ರಯತ್ನ ಸಾಫಲ್ಯದ ಖುಷಿಯಲ್ಲಿದ್ದಾರೆ.
ಯಾವುದೇ ಅನುಭವವಿಲ್ಲ
ಈ ಹಿಂದೆ ಇದ್ದ ಬಾವಿ ತುಂಬಾ ಹಳೆಯದು. ಇತ್ತೀಚಿನ ವರ್ಷಗಳಲ್ಲಿ ಅದನ್ನು ಬಳಸುವುದು ಕಷ್ಟಸಾಧ್ಯವಾಗಿತ್ತು. ಲಾಕ್ ಡೌನ್ ನಲ್ಲಿ ಮನೆಯಲ್ಲಿ ಸುಮ್ಮನೆ ಕುಳಿತಿದ್ದಾಗ ಹೊಸ ಬಾವಿ ನಿರ್ಮಿಸುವ ಯೋಚನೆ ಬಂತು ಎನ್ನುತ್ತಾರೆ ಅಕ್ಷತಾ. ಲಾಕ್ ಡೌನ್ ಆದ್ದರಿಂದ ಕೆಲಸಕ್ಕೆ ಯಾರೂ ಸಿಗುವುದಿಲ್ಲ. ಹಾಗಾಗಿ ನಾವೇ ಕೆಲಸ ಮಾಡಲು ಹೊರಟೆವು. ನಮಗೆ ಯಾವುದೇ ಅನುಭವವವಿಲ್ಲ. ಆದರೂ ಮಕ್ಕಳೊಂದಿಗೆ ಸೇರಿ ನಾವು ಗುದ್ದಲಿ, ಸಲಾಕೆ ಹಿಡಿದು ಕೆಲಸ ಆರಂಭಿಸಿದೆವು ಎನ್ನುತ್ತಾರೆ ಅರುಣ್.
ಮನೆಯವರೆ ಏಳು ಜನ ಸುಮಾರು ಒಂದು ವಾರ ಕೆಲಸ ಮಾಡಿ ಬಾವಿ ನಿರ್ಮಾಣ ಮಾಡಿದ್ದಾರೆ. ಮನೆ ಮಕ್ಕಳಾದ ಸುಶಾಂತ್, ಸುಜಿತ್ ಮತ್ತು ಸಮಿತ್ ಕೂಡಾ ಬಹಳಷ್ಟು ಕೆಲಸಕ್ಕೆ ನೆರವಾಗಿದ್ದಾರೆ. ರಜಾ ಸಮಯದಲ್ಲಿ ನಮಗೆ ಬದುಕಿನ ಪಾಠ ಕಲಿತ ಅನುಭವವಾಗಿದೆ ಎನ್ನುತ್ತಾರೆ ಇವರು.
ಕೆಲಸ ಆರಂಭಿಸಿದಾಗ ಇಷ್ಟು ದೊಡ್ಡ ಬಾವಿ ನಿರ್ಮಿಸಲು ನಮ್ಮಿಂದ ಸಾಧ್ಯ ಎಂದು ಗೊತ್ತಿರಲಿಲ್ಲ. ಈ ಪ್ರಯತ್ನ ಮಾಡದೇ ಇದ್ದರೆ ಬಹುಷಃ ಇಂತಹದೊಂದು ಸಾಧನೆ ಮಾಡುವ ಕಲ್ಪನೆಯೂ ನಮಗಿರಲಿಲ್ಲ. ಸುಮ್ಮನೆ ಕಾಲಕಳೆಯುವ ಬದಲು ಉತ್ತಮ ಕಾರ್ಯಕ್ಕೆ ಸಮಯ ವಿನಿಯೋಗ ಮಾಡಿದ ಸಂತಸ ನಮಗಿದೆ ಎನ್ನುತ್ತಾರೆ ಅಕ್ಷತಾ ಪೂಜಾರಿ.