ಇದುವರೆಗೆ ಗೀತೆಗಳನ್ನು ಬರೆಯುತ್ತ, ಸಂಗೀತ ನಿರ್ದೇಶನ ಮಾಡಿಕೊಂಡಿದ್ದ ಕೆ.ಕಲ್ಯಾಣ್, ನಿರ್ದೇಶಕರಾಗಿಯೂ ಗುರುತಿಸಿಕೊಂಡಿದ್ದು ಗೊತ್ತೇ ಇದೆ. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ ಕಲ್ಯಾಣ್. ಹೌದು, ಕೆ.ಕಲ್ಯಾಣ್ ಈಗ ಗಾಯಕರೂ ಆಗಿದ್ದಾರೆ. ಚಿತ್ರರಂಗಕ್ಕೆ ಬಂದು ಸುಮಾರು ಎರಡು ದಶಕಗಳನ್ನೇ ಕಳೆದಿರುವ ಕಲ್ಯಾಣ್, ಇದುವರೆಗೆ ಅವರು ಬರೆದ ಹಾಡುಗಳ ಸಂಖ್ಯೆ ಬರೋಬ್ಬರಿ ಮೂರು ಸಾವಿರಕ್ಕೂ ಹೆಚ್ಚು!
ಅವರು ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ ಚಿತ್ರಗಳು ಈಗ ಅರ್ಧಸೆಂಚುರಿ ದಾಟಿವೆ. ಅಷ್ಟೇ ಅಲ್ಲ, ಸುಮಾರು 725 ಕ್ಕೂ ಹೆಚ್ಚು ಚಿತ್ರಗಳಿಗೆ ಕೆ.ಕಲ್ಯಾಣ್ ಗೀತೆಗಳನ್ನು ಬರೆದುಕೊಟಿದ್ದಾರೆ. ಈಗ ಹೊಸ ಸುದ್ದಿ ಏನೆಂದರೆ, ಅವರು ಗಾಯಕರಾಗಿದ್ದಾರೆ. ಸಾಮಾನ್ಯವಾಗಿ ಹಾಡು ಬರೆಯೋರು ಸಂಗೀತ ನಿರ್ದೇಶಕರಾಗೋದು ವಿರಳ. ಕೆ.ಕಲ್ಯಾಣ್ ಹಾಡು ಬರೆಯುತ್ತಲೇ ಸಂಗೀತ ನಿರ್ದೇಶನ ಮಾಡಿದವರು. ಈಗ ಇದೇ ಮೊದಲ ಸಲ ಚಿತ್ರವೊಂದಕ್ಕೆ ಹಾಡಿದ್ದಾರೆ.
ಹೊಸಬರೇ ಸೇರಿ ಮಾಡಿರುವ “ಜೊತೆಯಾಗಿರು’ ಎಂಬ ಸಿನಿಮಾದಲ್ಲಿ ಕೆ.ಕಲ್ಯಾಣ್ ಹಾಡುವ ಮೂಲಕ ತಾನೂ ಗಾಯಕ ಎನಿಸಿಕೊಂಡಿದ್ದಾರೆ. ಸತೀಶ್ ರೇ ನಿರ್ದೇಶನದ “ಜೊತೆಯಾಗಿರು’ ಚಿತ್ರದಲ್ಲಿ ವಿರಾಟ್ ವೆಂಕಟೇಶ್ ನಾಯಕರಾದರೆ, ರಶ್ಮಿ ನಾಯಕಿ. ಸುನೀಲ್ ಕಾಂಚನ್ ಸೇರಿದಂತೆ ಬಹುತೇಕ ಹೊಸ ಕಲಾವಿದರೇ ನಟಿಸಿದ್ದಾರೆ. ಚಿತ್ರಕ್ಕೆ ವಿನು ಮನಸು ಸಂಗೀತವಿದೆ. ಅವರ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದ ಹಾಡಿಗೆ ಕೆ.ಕಲ್ಯಾಣ್ ದನಿಯಾಗಿದ್ದಾರೆ.
ನಿರ್ದೇಶಕ ಸತೀಶ್ ರೇ ಅವರು ಬರೆದ, “ಊರ್ ತುಂಬ ಹುಡುಗೀರು, ನಮಗಂತ ಯಾರವರೊ, ಯಾವುದೂನು ಗೊತ್ತಾಗ್ತಿಲ್ವಲ್ಲ …’ ಎಂಬ ಟಪ್ಪಾಂಗುಚ್ಚಿ ಹಾಡಿಗೆ ಕೆ.ಕಲ್ಯಾಣ್ ತಮ್ಮ ದನಿ ಕೊಟ್ಟಿದ್ದಾರೆ. ಸ್ವತಃ ಸಂಗೀತ ನಿರ್ದೇಶಕರಾಗಿದ್ದರೂ ಕಲ್ಯಾಣ್, ಎಂದೂ ಹಾಡುವ ಪ್ರಯತ್ನ ಮಾಡಿರಲಿಲ್ಲ. ಟ್ರ್ಯಾಕ್ ಹಾಡಿ, ಗಾಯಕರಿಗೆ ಹೇಳಿ ಕೊಡುತ್ತಿದ್ದ ಕಲ್ಯಾಣ್‌ಗೆ, ಈ ಹೊಸಬರ ತಂಡ, ಒಮ್ಮೆಲೆ ಹಾಡಿ ಅಂತ ಪೀಡಿಸಿದ್ದರಿಂದ, “ಒಂದು ಪ್ರಯತ್ನ ಮಾಡುತ್ತೇನೆ,
ಚೆನ್ನಾಗಿಲ್ಲ ಎನಿಸಿದರೆ, ತೆಗೆದು ಬೇರೆ ಗಾಯಕರಿಂದ ಹಾಡಿಸಿ’ ಅಂದಿದ್ದರಂತೆ ಕಲ್ಯಾಣ್. ಕೊನೆಗೆ ಕಲ್ಯಾಣ್ ದನಿ ಕೇಳಿದ ತಂಡ, ಅವರ ವಾಯ್ಸ ಫಿಕ್ಸ್ ಮಾಡಿಬಿಟ್ಟಿದೆ. ಅಂದಹಾಗೆ, ಈ ಹಾಡು ಹಾಡುತ್ತಿದ್ದಂತೆಯೇ, ಈಗ ಇನ್ನೂ ಎರಡು ಸಿನಿಮಾಗಳಲ್ಲಿ ಹಾಡುವ ಕೋರಿಕೆಯೂ ಕಲ್ಯಾಣ್‌ಗೆ ಬಂದಿದೆ. ಈ ಚಿತ್ರಕ್ಕೆ ವೆಂಕಟೇಶ್ ನಿರ್ಮಾಪಕರು. ರಾಜಾ ಶಿವಶಂಕರ್ ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದಾರೆ.