ಗಂಗಾವತಿ: ಕಲ್ಯಾಣ ಕರ್ನಾಟಕದ ಪ್ರೌಢಶಾಲಾ ಮುಖ್ಯಶಿಕ್ಷಕರ ಹುದ್ದೆಗಳಿಗೆ ಶಿಕ್ಷಣ ಇಲಾಖೆ ಬಹು ವರ್ಷಗಳ ನಂತರ ಬಡ್ತಿ ನೀಡಿ ನಿಯೋಜನೆ ಮಾಡಲು ನಿರ್ಧರಿಸಿದ್ದು, ಬಡ್ತಿ ನೀಡುವ ಮಾನದಂಡ ಮಾತ್ರ ಸ್ಥಳೀಯ ಶಿಕ್ಷಕರಲ್ಲಿ ಆಕ್ರೋಶ ಮೂಡಿಸಿದೆ.
ಕಲ್ಯಾಣ ಕರ್ನಾಟಕದ 6 ಜಿಲ್ಲೆಗಳಲ್ಲಿ ಖಾಲಿ ಇರುವ ಮುಖ್ಯಶಿಕ್ಷಕರ ಹುದ್ದೆಗಳಿಗೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿರುವ ಹಿರಿಯ ಶಿಕ್ಷಕರಿಗೆ ಎಸ್‌ಸಿ, ಎಸ್‌ಟಿ ಮತ್ತು ಮೆರಿಟ್ ಆಧಾರದಲ್ಲಿ ಮತ್ತು ಕಲ್ಯಾಣ ಕರ್ನಾಟಕ 371(ಜೆ) ಆಧಾರದ ಶೇ. 20 ಅನ್ಯ ಜಿಲ್ಲೆಯವರಿಗೆ ಬಡ್ತಿ ನೀಡಿ ಮುಖ್ಯಶಿಕ್ಷಕರ ಹುದ್ದೆಗಳಿಗೆ ನೇಮಕ ಮಾಡಲು ಶಿಕ್ಷಣ ಇಲಾಖೆ ನಿರ್ಧರಿಸಿ ಪ್ರಕ್ರಿಯೆ ಆರಂಭಿಸಿದೆ.
ಮೊದಲಿಗೆ ಹೈ.ಕ. ಕಲಂ 371(ಜೆ) ಶೇ. 20 ಮೀಸಲಾತಿಯಂತೆ ಕಲ್ಯಾಣ ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಅನ್ಯ ಜಿಲ್ಲೆಯ ಶಿಕ್ಷಕರಿಗೆ ಖಾಲಿ ಇರುವ ಹುದ್ದೆ ನೀಡಲು ನಿರ್ಧರಿಸಲಾಗಿದೆ. ಇದು ಸ್ಥಳೀಯರಿಗೆ ತೀವ್ರ ಅಸಮಧಾನ ಮೂಡಿಸಿದೆ. ಆರು ಜಿಲ್ಲೆಯಲ್ಲಿ ಜನಿಸಿ ಹಿರಿತನ ಇರುವವರಿಗೆ ಬಡ್ತಿ ನೀಡಿದ ನಂತರ ಅನ್ಯ ಜಿಲ್ಲೆಯವರನ್ನು ನೇಮಕ ಮಾಡುವುದು ಸರಿಯಾದ ಕ್ರಮ. ಶಿಕ್ಷಣ ಇಲಾಖೆ ಮಾತ್ರ ಅನ್ಯ ಜಿಲ್ಲೆಯವರಿಗೆ ಆದ್ಯತೆ ನೀಡುತ್ತಿರುವುದು ಸರಿಯಾದ ಕ್ರಮವಲ್ಲ. ಇದರಿಂದ ಸ್ಥಳೀಯರಿಗೆ ಅನ್ಯಾಯವಾಗುತ್ತದೆ. ಪ್ರತಿ ಸಲ ಬಡ್ತಿ ನೀಡುವ ಸಂದರ್ಭದಲ್ಲಿ ಎಸ್ಸಿ, ಎಸ್ಟಿಯವರಿಗೆ ಮೊದಲ ಆದ್ಯತೆ ನೀಡಲಾಗುತ್ತಿದ್ದು, ಇದು ಸಂವಿಧಾನ ಬದ್ಧವಾಗಿ ಸರಿಯಾದ ಪ್ರಕ್ರಿಯೆಯಾಗಿದೆ. ಕಲ್ಯಾಣ ಕರ್ನಾಟಕದ ಪ್ರೌಢಶಾಲಾ ಮುಖ್ಯಶಿಕ್ಷಕರ ಬಡ್ತಿ ವಿಷಯದಲ್ಲಿ ಎಸ್ಸಿ, ಎಸ್ಟಿ ರೋಸ್ಟರ್ ಪಾಲನೆ ಮಾಡದೇ ಅವೈಜ್ಞಾನಿಕ ಮತ್ತು ಸಂವಿಧಾನ ವಿರೋಧಿ ಕ್ರಮ ಅನುಸರಿಸಲಾಗುತ್ತಿದೆ. ಈ ಕುರಿತು ಎಸ್ಸಿ, ಎಸ್ಟಿ ನೌಕರರ ಸಂಘದವರು ಆಕ್ಷೇಪವೆತ್ತಿದ್ದರೂ ಮೀಸಲಾತಿ ಶೇ. 80 ದಾಟಿದ್ದು, ಬಿಂದು ಆಧಾರದಲ್ಲಿ ಎಸ್ಸಿ, ಎಸ್ಟಿಯವರಿಗೆ ಆದ್ಯತೆ ನೀಡುವ ಅಗತ್ಯವಿಲ್ಲ ಎಂದು ಇಲಾಖೆಯವರು ಹೇಳುತ್ತಿದ್ದಾರೆ ಎನ್ನಲಾಗಿದೆ.
ಮುಖ್ಯ ಶಿಕ್ಷಕರ ಬಡ್ತಿ ಹುದ್ದೆ ಪಡೆಯಲು ಕೆಲ ಶಿಕ್ಷಕರು ಮೆರಿಟ್ ಹೆಚ್ಚಾಗುವಂತೆ ಮಾಡಲು ಅಂಕ ಪಟ್ಟಿಯಲ್ಲಿರುವ ಅಂಕಗಳನ್ನು ತಿದ್ದಿ ಶೇಕಡವಾರು ಹೆಚ್ಚು ಮಾಡಿದ್ದು ಇದರಿಂದ ಸರಕಾರಕ್ಕೆ ವಂಚನೆ ಮಾಡುವ ಉದ್ದೇಶದ ಕುರಿತು ಪ್ರತಿಯೊಬ್ಬ ಶಿಕ್ಷಕರಿಗೆ ತಿಳಿದರೂ ಶಿಕ್ಷಣ ಇಲಾಖೆ ಮಾತ್ರ ನಿರ್ಲಕ್ಷ ವಹಿಸಿದೆ. ಅಂಕಪಟ್ಟಿ ತಿದ್ದಿದವರ ವಿರುದ್ಧ ಕ್ರಿಮಿನಲ್ ಕೇಸ್ ಹಾಕದೇ ವಂಚನೆ ಮಾಡಿದವರ ಪರವಾಗಿರುವ ಕುರಿತು ಆರೋಪಗಳು ಕೇಳಿ ಬರುತ್ತಿವೆ.
ಮುಖ್ಯ ಶಿಕ್ಷಕರ ಹುದ್ದೆಗಳಿಗೆ ನೀಡಲಾಗುತ್ತಿರುವ ಬಡ್ತಿಯನ್ನು ವೈಜ್ಞಾನಿಕವಾಗಿ ಮಾಡುವ ಜತೆಗೆ ಕಲ್ಯಾಣ ಕರ್ನಾಟಕದಲ್ಲಿ ಜನಿಸಿದವರ ಹಿರಿತನಕ್ಕೆ ಆದ್ಯತೆ ನೀಡಿ ನಂತರ ಅನ್ಯ ಜಿಲ್ಲೆಯವರಿಗೆ ಬಡ್ತಿ ನೀಡಬೇಕು. ಇಲ್ಲವಾದರೆ ಕಲ್ಯಾಣ ಕರ್ನಾಟಕ ಕಲಂ 371(ಜೆ) ಅನುಷ್ಠಾನವೇ ವ್ಯರ್ಥವಾಗುತ್ತದೆ. ಕೂಡಲೇ ಕಲ್ಯಾಣ ಕರ್ನಾಟದ ಜನಪ್ರತಿನಿಧಿಗಳು ಮತ್ತು ಸಂಘ ಸಂಸ್ಥೆಗಳ ಕಾರ್ಯಕರ್ತರು ಎಚ್ಚೆತ್ತುಕೊಂಡು ಹೋರಾಟ ನಡೆಸಬೇಕಿದೆ. ಕಲಂ 371(ಜೆ) ಅನುಷ್ಠಾನಗೊಳ್ಳಲು ಕೆಲ ಅಧಿಕಾರಿಗಳು ನಿರ್ಲಕ್ಷ ವಹಿಸಿದ್ದಾರೆ. ಅನ್ಯ ಜಿಲ್ಲೆಯವರಿಗೆ ಮಣೆ ಹಾಕುವ ಮೂಲಕ ಪ್ರೌಢಶಾಲೆಯ ಮುಖ್ಯಶಿಕ್ಷಕ ಹುದ್ದೆ ನೀಡುವ ಷಡ್ಯಂತ್ರ ನಡೆಸಲಾಗುತ್ತಿದೆ. ಬಡ್ತಿ ಹೊಂದಿದ ಅನ್ಯ ಜಿಲ್ಲೆಯವರು ಪುನಃ ಎರಡು ವರ್ಷಗಳ ನಂತರ ವರ್ಗಾವಣೆ ಹೊಂದಿ ಹೋಗುವುದರಿಂದ ಹುದ್ದೆಗಳು ಖಾಲಿ ಉಳಿಯಲಿದೆ. ಆದ್ದರಿಂದ ಎಚ್ಚೆತ್ತು ಹೋರಾಟ ನಡೆಸಿ ಸ್ಥಳೀಯರಿಗೆ ಮುಖ್ಯ ಶಿಕ್ಷಕ ಹುದ್ದೆಗಳು ದೊರಕುವಂತೆ ನೋಡಿಕೊಳ್ಳಬೇಕಿದೆ.
-ಕೆ. ನಿಂಗಜ್ಜ