Advertisement

ಜನರ ಎಚ್ಚರಿಸಲು “ಮತ್ತೆ ಕಲ್ಯಾಣ’ಅಭಿಯಾನ

04:58 PM Jul 30, 2019 | Lakshmi GovindaRaj |

ಬೆಂಗಳೂರು: ಧರ್ಮ- ದೇವರ ಹೆಸರಿನಲ್ಲಿ ನಡೆಯುತ್ತಿರುವ ಮೌಡ್ಯ ಕುರಿತು ಜನರನ್ನು ಎಚ್ಚರಗೊಳಿಸಲು ಸಾಣೇಹಳ್ಳಿಯ ತರಳಬಾಳು ಮಠ ಹಾಗೂ ಸಹಮತ ವೇದಿಕೆ ವತಿಯಿಂದ ಆ.1ರಿಂದ ರಾಜ್ಯಾದ್ಯಂತ “ಮತ್ತೆ ಕಲ್ಯಾಣ’ ಅಭಿಯಾನ ನಡೆಯಲಿದೆ.

Advertisement

ನಯನ ಸಭಾಂಗಣದಲ್ಲಿ ಸೋಮವಾರ ನಡೆದ ಕುರಿತು ಸುದ್ದಿಗೋಷ್ಠಿಯಲ್ಲಿ ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸಮಾಜದಲ್ಲಿರುವ ಅಜ್ಞಾನ, ಮೂಢನಂಬಿಕೆ, ಲಿಂಗ ತಾರತಮ್ಯ, ಭ್ರಷ್ಟಾಚಾರ, ಶೋಷಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ರಾಜ್ಯದ ವಿವಿಧೆಡೆ ಒಂದು ತಿಂಗಳು ಮತ್ತೆ ಕಲ್ಯಾಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಪ್ರಮುಖವಾಗಿ ಯುವ ಪೀಳಿಗೆಯನ್ನು ಗಮನದಲ್ಲಿರಿಸಿಕೊಂಡು ಅಭಿಯಾನ ಆರಂಭಿಸಿದೆ. ಪ್ರಸ್ತುತ ದಿನಗಳಲ್ಲಿ ರಾಜಕೀಯ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳು ಹದಗೆಟ್ಟಿದ್ದು, ಅವುಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಸ್ವತ್ಛ ಮಾಡುವ ಉದ್ದೇಶವೂ ಇದೆ ಎಂದರು.

ಆ.1ರಂದು ಅಕ್ಕನಾಗಲಾಂಬಿಕೆ ಐಕ್ಯ ಸ್ಥಳವಾದ ತರೀಕೆರೆಯಲ್ಲಿ ಚಿಂತಕ ಗೊ.ರು. ಚನ್ನಬಸಪ್ಪ ಅವರು ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಅಂದು ಸಾಹಿತಿ ಪ್ರೊ. ರಹಮತ್‌ ತರೀಕೆರೆ ಹಾಗೂ ಶರಣೆ ಗಂಗಾಂಬಿಕಾ ಬಸವರಾಜು ಉಪನ್ಯಾಸ ನೀಡಲಿದ್ದಾರೆ. ಆ.30ರಂದು ಬಸವಕಲ್ಯಾಣದಲ್ಲಿ ಸಮಾರೋಪ ನಡೆಯಲಿದ್ದು, ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ ಭಾಷಣ ಮಾಡಲಿದ್ದಾರೆ.

ಪ್ರತಿ ದಿನ ಒಂದೊಂದು ಜಿಲ್ಲೆಯಲ್ಲಿ ಆಯಾ ಕಾಲೇಜು ವಿದ್ಯಾರ್ಥಿಗಳೊಂದಿಗೆ ಬಸವಾದಿ ಶರಣರ ವಿಷಯಗಳನ್ನು ಚರ್ಚಿಸಲಾಗುತ್ತಿದೆ. ಸಂಜೆ ವಿವಿಧ ಧಾರ್ಮಿಕ ಗುರುಗಳ ಜತೆ ಚರ್ಚೆ, ಸಂವಾದ ನಡೆಸಲಾಗುತ್ತದೆ. ಸಾರ್ವಜನಿಕ ಸಮಾವೇಶ, ವಚನಗೀತೆ, ಉಪನ್ಯಾಸ, ಆಶೀರ್ವಚನ ನಡೆಯಲಿದೆ ಎಂದು ತಿಳಿಸಿದರು. ಈ ವೇಳೆ ನಿವೃತ್ತ ಐಎಎಸ್‌ ಅಧಿಕಾರಿ ಚಿರಂಜೀವಿಸಿಂಗ್‌ ಅವರು “ಮತ್ತೆ ಕಲ್ಯಾಣ’ ವೆಬ್‌ಸೈಟ್‌ಗೆ ಚಾಲನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next