ಕಲಬುರಗಿ: ಮಹಾನಗರದ ಹೃದಯ ಭಾಗದಲ್ಲಿರುವ ಸಾರ್ವಜನಿಕ ಉದ್ಯಾನವನಕ್ಕೆ ನಾಲ್ಕು ಸ್ವಾಗತ ಕಮಾನುಗಳನ್ನು ನಿರ್ಮಿಸಲು ಎಚ್‌ಕೆಆರ್ ಡಿಬಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಮಹಾನಗರ ಪಾಲಿಕೆ ವತಿಯಿಂದ 2017-18ನೇ ಸಾಲಿನ ಎಚ್.ಕೆ.ಆರ್.ಡಿ.ಬಿ. ಅನುದಾನದಲ್ಲಿ 33.75 ಲಕ್ಷ ರೂ. ವೆಚ್ಚದಲ್ಲಿ ಜಗತ್ ವೃತ್ತದಲ್ಲಿರುವ ಬಸವೇಶ್ವರ ಪುತ್ಥಳಿಯ ಸುತ್ತಲಿನ ಉದ್ಯಾನವನ ಅಭಿವೃದ್ಧಿ ಕಾಮಗಾರಿಯನ್ನು ಶನಿವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಕಲಬುರಗಿ ನಗರದ ಮಧ್ಯ ಭಾಗದಲ್ಲಿ ಕೇವಲ ಒಂದು ಉದ್ಯಾನವಿದೆ. ಅದರಲ್ಲಿಯೂ ಹಲವು ಕಟ್ಟಡಗಳನ್ನು ನಿರ್ಮಿಸಲಾಗಿದೆ. ಉದ್ಯಾನವನವನ್ನು ಪ್ರೇಕ್ಷಣೀಯ ಸ್ಥಳವನ್ನಾಗಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಪಡಿಸಬೇಕು. ಸಂಸದರ ನಿಧಿಯಿಂದಲೂ ಸಹ ಸಾಧ್ಯವಾದಷ್ಟು ಅನುದಾನ ನೀಡಲಾಗುವುದು. ಜಿಲ್ಲೆಯ ನಾಗರಿಕರು ಸಾರ್ವಜನಿಕ ಆಸ್ತಿಗಳನ್ನು ಉಳಿಸಿಕೊಂಡು ಹೋಗಬೇಕು. ಜಿಲ್ಲೆಯಲ್ಲಿ ಐತಿಹಾಸಿಕ ಕಟ್ಟಡ ಹಾಗೂ ವಾಸ್ತುಶಿಲ್ಪವಿದೆ. ಬಹುಕೋಟೆ, ಕೋಟೆಯಲ್ಲಿರುವ ಜಾಮಿಯಾ ಮಸೀದಿ, ಮಳಖೇಡದಲ್ಲಿರುವ ಜೈನ ಮತ್ತು ಹಿಂದೂ ಧರ್ಮದ ಕುರುಹುಗಳು, ಸನ್ನತಿಯಲ್ಲಿರುವ ಶಾತವಾಹನರ ಕಾಲದ ಬೌದ್ಧ ಧರ್ಮದ ಪಳಿಯುಳಿಕೆಗಳು ಹಾಗೂ ಆಳಂದನಲ್ಲಿರುವ ಜೈನ ಬಸದಿಗಳನ್ನು ಸಂರಕ್ಷಿಸಬೇಕು.
ಮುಖ್ಯವಾಗಿ ಬಸವಣ್ಣನವರ ಸಾಮಾಜಿಕ ನ್ಯಾಯ ಮತ್ತು ಸುಧಾರಣಾ ತತ್ವಗಳನ್ನು ಎಲ್ಲರೂ ಒಪ್ಪಿಕೊಂಡು ಆಧುನಿಕ ಸಮಾಜ ನಿರ್ಮಿಸಬೇಕಾಗಿದೆ. ಎಲ್ಲರೂ ಶಾಸ್ತ್ರೀಯವಾಗಿ ಚಿಂತನೆ ಮಾಡಿ ನವ ಯುಗವನ್ನು ನಿರ್ಮಿಸಬೇಕು ಎಂದು ಹೇಳಿದರು.
ಶಾಸಕಿ ಖನೀಜ್ ಫಾತೀಮಾ, ಮಾಜಿ ಶಾಸಕ ಬಿ.ಆರ್. ಪಾಟೀಲ, ಮಹಾನಗರ ಪಾಲಿಕೆ ಮಹಾಪೌರ ಶರಣುಕುಮಾರ ಮೋದಿ, ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ, ಪಾಲಿಕೆ ಆಯುಕ್ತ ಪಿ. ರಘನಂದನಮೂರ್ತಿ, ಪಾಲಿಕೆ ಸದಸ್ಯೆ ಲಲಿತಾ ರವಿ ರಾಠೊಡ, ಮುಖಂಡರಾದ ಜಗದೇವ ಗುತ್ತೇದಾರ, ಸುಶೀಲಾ ಮಾಮಡಿ, ಅರುಣಕುಮಾರ ಪಾಟೀಲ, ಮಹಾನಗರ ಪಾಲಿಕೆ ಕಾರ್ಯನಿರ್ವಾಹಕ ಇಂಜಿನಿಯರ್ ಆರ್.ಪಿ. ಜಾಧವ ಹಾಗೂ
ಮುಂತಾದವರಿದ್ದರು.
ಮಕ್ಕಳ ಸ್ನೇಹಿ ಉದ್ಯಾನವನ ಉದ್ಘಾಟನೆ: ಇದಕ್ಕೂ ಮುಂಚೆ ಹೈಕೋರ್ಟ್ ಪಕ್ಕದ ಕೆ.ಹೆಚ್.ಬಿ. ಅಕ್ಕಮಹಾದೇವಿ ಕಾಲೋನಿಯಲ್ಲಿ 2016-17ನೇ ಸಾಲಿನ ಕೇಂದ್ರ ಸರ್ಕಾರಿ ಪುರಸ್ಕೃತ ಅಮೃತ ಯೋಜನೆಯಡಿ 82 ಲಕ್ಷ ರೂ. ಗಳಿಂದ ನಿರ್ಮಿಸಿದ ಮಕ್ಕಳ ಸ್ನೇಹಿ ಉದ್ಯಾನವನವನ್ನು ಡಾ| ಮಲ್ಲಿಕಾರ್ಜುನ ಖರ್ಗೆ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಅಭಿವೃದ್ಧಿಪಡಿಸಲಾದ ಉದ್ಯಾನವನಗಳನ್ನು ಆಯಾ ಕಾಲೋನಿಯವರು ನಿರ್ವಹಣೆ ಮಾಡಿ ಸಂರಕ್ಷಿಸಿದರೆ ಅಭಿವೃದ್ಧಿಗೆ ಪೂರಕವಾಗಿರುತ್ತದೆ ಎಂದು ಹೇಳಿದರು.
ಉದ್ಯಾನವನಗಳಲ್ಲಿ ಮಕ್ಕಳಿಗಾಗಿ ಆಟಿಕೆ ಸಾಮಾನುಗಳನ್ನು ಅಳವಡಿಸಲಾಗಿದೆ. ಅವುಗಳ ಮೇಲೆ ವಯಸ್ಕರು ಕುಳಿತು ಹಾಳು ಮಾಡಬಾರದು. ಎಲ್ಲ ಹಂತದಲ್ಲಿಯೂ ಅಭಿವೃದ್ಧಿಯಾಗಿ ನಗರ ತುಂಬಾ ಚೆನ್ನಾಗಿದೆ ಎಂಬ ಭಾವನೆ ಮೂಡುವಂತಾಗಬೇಕು ಎಂದು ಹೇಳಿದರು.