ಕೋಲಾರ: ಶಿವಾಜಿ ಸ್ವತಂತ್ರವಾಗಿ ರಾಜ್ಯವನ್ನು ಕಟ್ಟಿ ದೇಶ ಪ್ರೇಮ ಮೆರೆದ ಮಹಾನ್ ನಾಯಕ ಆಗಿದ್ದು ಭಾರತದ ಹೆಮ್ಮೆಯ ಪುತ್ರ. ಹಾಗೂ ಇತಿಹಾಸದ ಮೇರು ವ್ಯಕ್ತಿ ಎಂದು ತಾಪಂ ಅಧ್ಯಕ್ಷ ಸೂಲೂರು ಎಂ.ಆಂಜಿನಪ್ಪ ಬಣ್ಣಿಸಿದರು. ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೋಲಾರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ, ಛತ್ರಪತಿ ಶಿವಾಜಿ ಜಯಂತಿ ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ಸ್ವಾತಂತ್ರ ಪೂರ್ವದಲ್ಲಿ ಹರಿದು ಹಂಚಿಹೋಗಿರುವ ರಾಜ್ಯಗಳು ಇಂದು ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಎಂದು ಗುರ್ತಿಸಲಾಗುತ್ತಿದೆ. ಆದರೆ ಹಿಂದೆ 50 ರಿಂದ 60 ರಾಜ್ಯಗಳು ಪ್ರಾಂತ್ಯಗಳಾಗಿ ವಿಂಗಡಣೆಯಾಗಿದ್ದವು.
ಬ್ರಿಟಿಷರು ನಮ್ಮ ದೇಶವನ್ನು ಆಳುತ್ತಿದ್ದ ವೇಳೆ ಪ್ರತಿ ರಾಜ ಮನೆತನಗಳನ್ನು ಒಡೆದು ನಮ್ಮಲ್ಲೇ ಪಿತೂರಿ ಮಾಡಿ ದೇಶದ ಆಡಳಿತ ನಡೆಸಿದರು. ಅಲ್ಲದೇ, ಸಂಪತ್ತನ್ನು ಲೂಟಿ ಮಾಡಿದರು. ಆ ವೇಳೆ ಜಾತಿ, ಧರ್ಮಗಳನ್ನು ಮೀರಿ ವೀರ, ಶೌರ್ಯ, ಸಾಹಸ ಮೆರೆದ ವ್ಯಕ್ತಿಗಳ ಸಾಲಿನಲ್ಲಿ ಛತ್ರಪತಿ ಶಿವಾಜಿ ಹೆಸರು ಕೇಳಿ ಬರುತ್ತದೆ ಎಂದು ತಿಳಿಸಿದರು.
ಶಿವಾಜಿ ಹರಿದು ಹಂಚಿಹೋಗಿರುವ ಸಾಮ್ರಾಜ್ಯಗಳನ್ನು ಒಟ್ಟುಗೂಡಿಸಲು ಅನೇಕ ಯುದ್ಧಗಳನ್ನು ಮಾಡಿದರು. ಜಾತ್ಯತೀತ ಆಡಳಿತ ನಡೆಸುವುದರ ಮೂಲಕ ಉತ್ತಮ ಆಡಳಿತ ವ್ಯವಸ್ಥೆ ರೂಪಿಸಿದ್ದರು. ಸಾಮ್ರಾಜ್ಯದ ಉಳಿವಿಗಾಗಿ ತ್ಯಾಗ, ಬಲಿದಾನ ಮಾಡುವುದಕ್ಕೆ ಸದಾ ಸಿದ್ಧವಿರುತ್ತಿದ್ದರು ಎಂದರು.
ಸಮುದಾಯವರು ಉನ್ನತ ಶಿಕ್ಷಣ, ರಾಜಕೀಯಕ್ಕೆ ಹೆಚ್ಚು ಒತ್ತನ್ನು ಕೊಡಬೇಕು. ಚುನಾವಣೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಆದರ್ಶ ವ್ಯಕ್ತಿಗಳು ಒಂದು ಕಡೆ ಸೇರಿ ಸಂಘಟನೆಗೊಂಡು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸೌಲಭ್ಯಗಳನ್ನು ದೊರಕಿಸಿಕೊಡಬೇಕು. ಶಿವಾಜಿಯ ಆದರ್ಶ ಗುಣಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಗಾನಂದ ಕೆಂಪರಾಜು, ನಮ್ಮ ದೇಶದ ಶಕ್ತಿ, ಸಂಸ್ಕೃತಿ, ಗತ್ತು ಶಿವಾಜಿ ಚಿತ್ರದ ಮೂಲಕ ಪ್ರತಿಬಿಂಬಿಸುತ್ತದೆ. ಶಿವಾಜಿ 17ನೇ ಶತಮಾನದಲ್ಲಿ ಹೊಸ ಅಧ್ಯಾಯ ಸೃಷ್ಟಿಸಿದ್ದಾರೆಂದರು. ಗೆರಿಲ್ಲಾ ಯುದ್ಧ ಶಿವಾಜಿ ಅವರನ್ನು ಯಶಸ್ವಿ ವ್ಯಕ್ತಿಯನ್ನಾಗಿ ರೂಪುಗೊಳಿಸಿತು.
ಶಿವಾಜಿ ಹಿಂದೂ ಸಂಸ್ಕೃತಿಯ ನೇತಾರರಾಗಿದ್ದು, ಭಾರತೀಯ ಪರಿಕಲ್ಪನೆ ಪ್ರತಿಬಿಂಬಿಸುತ್ತಿದ್ದರು. ಸಾಹಸ ಧೈರ್ಯಶಾಲಿ, ಚಾಣಾಕ್ಷ ವ್ಯಕ್ತಿತ್ವ, ಉತ್ತಮ ಆಡಳಿತಗಾರರಾಗಿ ಪ್ರಸಿದ್ಧಿಯಾಗಿದ್ದರು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್ ಮತ್ತಿತರರು ಇದ್ದರು.