ಮೈಸೂರು: ಮೈಸೂರು ದಕ್ಷಿಣ ವಲಯದ ವತಿಯಿಂದ ಮಕ್ಕಳಿಗೆ ಹೂ ಮತ್ತು ಸಿಹಿ ತಿಂಡಿ ಹಂಚುವ ಮೂಲಕ 2018-19ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಮೈಸೂರು ಜಿಲ್ಲಾಡಳಿತ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಸರ್ಕಾರಿ ಶಾರದ ವಿಲಾಸ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಕನಕಗಿರಿ ಸರ್ಕಾರಿ ಪ್ರೌಢಶಾಲೆ (ಆರ್‌ಎಂಎಸ್‌ಎ)ಯಲ್ಲಿ ಮಂಗಳವಾರ ಜಿಲ್ಲಾ ಮಟ್ಟದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಶಾಲಾ ವಿದ್ಯಾರ್ಥಿಗಳ ನಾಡಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಜಿಲ್ಲಾ ಕಚೇರಿ ಶಿಕ್ಷಣಾಧಿಕಾರಿ ರಾಜಶೇಖರ ಸ್ವಾಗತಿಸಿದರು. ಸರ್ವಶಿಕ್ಷಣ ಅಭಿಯಾನದ ಡಿವೈಪಿಸಿ ಎಸ್.ಪಿ.ನಾಗರಾಜು ಪ್ರಾರಂಭೋತ್ಸವದ ಪ್ರಾಸ್ತಾವಿಕ ನುಡಿಗಳ ಜತೆಗೆ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದ ಉದ್ದೇಶ ಹಾಗೂ ಸರ್ಕಾರಿ ಸೌಲಭ್ಯಗಳ ಬಗ್ಗೆ ನೆರೆದಿದ್ದ ಎಲ್ಲರಿಗೆ ಮಾಹಿತಿಯನ್ನು ತಿಳಿಸಿದರು.
ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್ ಮಾತನಾಡಿ, ವಿದ್ಯಾರ್ಥಿಗಳನ್ನು ಶಾಲೆಗೆ ಸ್ವಾಗತಿಸುತ್ತಾ ತಮ್ಮ ಜೀವನದಲ್ಲಿ ನಯ, ವಿನಯ, ವಿಧೇಯತೆಯನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಂಡು ಉತ್ತಮ ನಾಗರಿಕರಾಗಿ ರಾಷ್ಟ್ರಕ್ಕೆ ಉತ್ತಮ ಸೇವೆಯನ್ನು ನೀಡಬೇಕು. ಜಿಪಂ ಉಪ ಕಾರ್ಯದರ್ಶಿ ಶಿವಕುಮಾರಸ್ವಾಮಿ ಮಾತನಾಡಿ, ಸರ್ಕಾರಿ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಜೀವನವನ್ನು ಉಜ್ವಲಗೊಳಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಡಿಡಿಪಿಐ ಮಮತ ಎಸ್.ಮಾತನಾಡಿ, ಬೆಳೆಯುವ ಸಿರಿ ಮೊಳಕೆಯಲ್ಲೇ ಎಂಬ ಮಾತಿನಂತೆ ಮಕ್ಕಳಲ್ಲಿರುವ ಪ್ರತಿಭೆಯನ್ನು ಪ್ರಾರಂಭದಲ್ಲೇ ಗುರುತಿಸಿ ಅದನ್ನು ಪೋಷಿಸಿ ಉಜ್ವಲಗೊಳಿಸಬೇಕು. ಹಾಗೂ ವಿದ್ಯಾರ್ಥಿ ಹೇಗೆ ಸದಾ ಕಾರ್ಯೋನ್ಮುಖರಾಗಿರಬೇಕೆಂದು ಮಕ್ಕಳಿಗೆ ಮನಮುಟ್ಟುವಂತೆ ಹೇಳಿದರು.
ಇದೇ ವೇಳೆ ವಿದ್ಯಾರ್ಥಿಗಳಿಗೆ ಸರ್ಕಾರಿ ಸವಲತ್ತುಗಳಲ್ಲಿ ಪಠ್ಯಪುಸ್ತಕಗಳನ್ನು ವಿತರಿಸಿದರು. 1 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳನ್ನು ಗುಲಾಬಿ ಹೂ ನೀಡುವುದರೊಂದಿಗೆ ಶಾಲೆಗೆ ಬರಮಾಡಿಕೊಂಡರು. ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ನಾಗೇಶ್ ಇತರರಿದದರು.