ಚನ್ನರಾಯಪಟ್ಟಣ: ಹಾಸನ ಜಿಲ್ಲೆಯ ಉಸ್ತುವಾರಿ ಸಚಿವ ರಾಗಿ ನೇಮಕಗೊಂಡ ಮೇಲೆ ಜಿಲ್ಲೆಗೆ ಮೊದಲ ಬಾರಿಗೆ ಆಗಮಿಸಿದ ಜಿಲ್ಲಾ ಮಂತ್ರಿ ಕೆ.ಗೋಪಾಲಯ್ಯ ಅವರಿಗೆ ಸೋಮವಾರ ಅದ್ಧೂರಿ ಸ್ವಾಗತ ಕೋರಲಾಯಿತು. ಜಿಲ್ಲೆಯ ಗಡಿಭಾಗದಲ್ಲಿ ಬಿಜೆಪಿ ಕಾರ್ಯಕರ್ತರು, ಮುಖಂಡರು ಶಾಸಕರು ಹಾಗೂ ಅಧಿಕಾರಿಗಳು ಹೂವಿನ ಹಾರ ಹಾಕಿ ಸ್ವಾಗತಿಸಿದರು.
ಹಿರೀಸಾವೆ ಹೋಬಳಿ ಪ್ರವೇ ಶಿದಾಗ ಚನ್ನರಾಯಪಟ್ಟಣ ತಾಲೂಕಿನ ಅಳಿಯನಿಗೆ ಮಹಿಳೆಯರು ಆರತಿ ಬೆಳಗಿ ಸ್ವಾಗತಿಸಿದರು. ಸಾಯಿ ಮಂದಿರದ ಬಳಿ ಸಚಿವ ಗೋಪಾಲಯ್ಯ ಸಂಬಂಧಿಕರಾದ ಎಸ್.ಆರ್.ಶೇಖರ್, ಎಸ್.ಆರ್. ರಮೇಶ್ ಸೇರಿದಂತೆ ಜಯಮ್ಮ ರಂಗಪ್ಪ ಕುಟುಂಬಸ್ಥರು ಸುಮಾರು 150 ಕೇಜಿ ತೂಕದ ಸೇಬಿನ ಹಣ್ಣಿನ ಹಾರವನ್ನು ಹಾಕಿ ಬರ ಮಾಡಿಕೊಂಡರು.
ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಜಿಲ್ಲೆಗೆ ಯಾರೇ ಸಚಿವರಾಗಿ ಬಂದರೂ ಜಿಲ್ಲೆಗೆ ಮೊದಲ ಬಾರಿಗೆ ಆಗಮಿಸುವಾಗ ಗಡಿಭಾಗಕ್ಕೆ ಆಗಮಿಸಿ ಸ್ವಾಗತ ಕೋರುವುದು ಕ್ಷೇತ್ರದ ಶಾಸಕನ ಕರ್ತವ್ಯ ಹಾಗಾಗಿ ಬಂದಿದ್ದೇನೆ ಇದಕ್ಕೆ ರಾಜಕೀಯ ಬಣ್ಣ ಲೇಪಿಸುವುದು ಬೇಡ ಎಂದರು. ಸಾಯಿ ಮಂದಿರದಲ್ಲಿ ಗೋಪಾಲಯ್ಯ ಹಾಗೂ ಪತ್ನಿ ಹೇಮಲತಾ ಅವರು ಗುರುಮೂರ್ತಿ ಗುರೂಜಿ ಯಿಂದ ಆಶೀರ್ವಾದ ಪಡೆದರು.
ಸಚಿವ ಕೆ.ಗೋಪಾಲಯ್ಯ ಹಾಸನ ಜಿಲ್ಲೆಗೆ ಉಸ್ತುವಾರಿ ಸಚಿವರಾಗಿ ನೇಮಕಗೊಂಡ ಬಳಿಕ ಮೊದಲ ಬಾರಿಗೆ ಆಗ ಮಿಸಿದ್ದ ವೇಳೆ ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದಿದ್ದರು. ಶಾಸಕರಾದ ಎಂ.ಎ.ಗೋಪಾಲಸ್ವಾಮಿ, ಪ್ರೀತಂ ಜೆ.ಗೌಡ, ಮಾಜಿ ಸಚಿವ ಎ.ಮಂಜು, ಶ್ರೀ ಸಾಯಿಬಾಬ ಮಂದಿರದ ಗುರುಮೂರ್ತಿ ಗುರೂಜಿ, ಮಾಜಿ ಶಾಸಕ ವಿಶ್ವನಾಥ್, ಜಿಪಂ ಸದಸ್ಯ ಮಂಜೇಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಹುಲ್ಲಳ್ಳಿ ಸುರೇಶ್ ಉಪಸ್ಥಿತರಿದ್ದರು.