ದೇವನಹಳ್ಳಿ: ನೆಚ್ಚಿನ ನಾಯಕನ ಕರೆದುಕೊಂಡು ಹೋಗಲು ಸೇಬಿನಿಂದ ಸಿಂಗಾರಗೊಂಡಿರೋ ಕಾರು. ವಿಮಾನ ನಿಲ್ದಾಣದ ಹೊರಗೆ ಬರುತ್ತಿದ್ದಂತೆ ಡಿಕೆಶಿಯನ್ನ ಕಂಡ ಕಾರ್ಯಕರ್ತರಿಂದ ಸ್ವಾಗತದ ಕಹಳೆ. ವಿಮಾನ ನಿಲ್ದಾಣದಲ್ಲಿ ಡಿ.ಕೆ. ಶಿವಕುಮಾರ್ ಅವರನ್ನು ಎತ್ತಿಕೊಂಡು ಕರೆತರುವ ಅಭಿಮಾನಿಗಳು. ಇವು ವೈಭವದ ಸ್ವಾಗತಕ್ಕೆ ಸಾಕ್ಷಿಯಾದವು.
ದೆಹಲಿಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ಗೆ ಕಾರ್ಯಕರ್ತರು ಅದ್ಧೂರಿ ಸ್ವಾಗತ ಮಾಡಿದರು. ಇಡಿ ಕುಣಿಕೆಯಲ್ಲಿ ಸಿಲುಕಿದ್ದ ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ಗೆ ದೆಹಲಿ ಹೈಕೊರ್ಟ್ ಬುಧವಾರ ಜಮೀನು ಮಂಜೂರು ಮಾಡಿತ್ತು. ಸುಮಾರು 50ಕ್ಕೂ ಹೆಚ್ಚು ದಿನ ಇಟಿ ವಿಚಾರಣೆಯನ್ನ ಎದುರಿಸಿ ಬಂಧನಕ್ಕೊಳಗಾಗಿ ಜಾಮೀನು ಪಡೆದ ಡಿ.ಕೆ. ಶಿವಕುಮಾರ್ ಇಂದು ಬೆಂಗಳೂರಿಗೆ ವಾಪಸ್ಸಾದರು.
ಇನ್ನೂ ಡಿ.ಕೆ. ಶಿವಕುಮಾರ್ ಆಗಮನದ ಹಿನ್ನೆಲೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕಾರ್ಯಕರ್ತರು ಡಿಕೆಶಿ ಪರ ಘೋಷಣೆಯಲ್ಲಿ ತೊಡಗಿದ್ದರು. ಮದ್ಯಾಹ್ನ 2.40 ಕ್ಕೆ ದೆಹಲಿಯಿಂದ ಸ್ಪೈಸ್ ಜೆಟ್ ವಿಮಾನದಲ್ಲಿ ಕೆಐಎಎಲ್‌ಗೆ ಬಂದಿಳಿದ ಡಿ.ಕೆ.ಶಿವಕುಮಾರ್ ಇನ್ನೂ ವಿಮಾನ ನಿಲ್ದಾಣದ ಒಳಗೆ ಬರುತ್ತಿದ್ದಂತೆ ಬೆಳಗಾವಿಗೆ ತೆರಳುತ್ತಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ಶಿವಕುಮಾರ್ ಬಳಿ ತೆರಳಿ ಗುಡ್‌ಲಕ್ ಹೇಳಿ ಸ್ವಾಗತಿಸಿದ್ದು ವಿಶೇಷವಾಗಿತ್ತು.
ನಂತರ ವಿಮಾನ ನಿಲ್ದಾಣದ ಹೊರಗೆ ಬರುತ್ತಿದ್ದಂತೆ ಕಾರ್ಯಕರ್ತರ ಘೋಷಣೆಗಳಿಂದ ವಿಮಾನ ನಿಲ್ದಾಣವೇ ಡಿ.ಕೆ. ಹೆಸರಿನಲ್ಲಿ ಮೊಳಗಿತ್ತು. ಅಲ್ಲದೆ ಡಿಕೆಶಿಯನ್ನ ಕರೆದುಕೊಂಡು ಹೋಗಲು ವೊಲ್ವೊ ಕಾರನ್ನ ಸುಮಾರು 200 ಕೆ.ಜಿ. ಸೇಬಿನಿಂದ ಅಲಂಕಾರ ಮಾಡಲಾಗಿತ್ತು. ಈ ವೇಳೆ ಡಿ.ಕೆ. ಶಿವಕುಮಾರ್ ಕಾರು ಬಳಿ ಬರಲು ಸಾಕಷ್ಟು ಹರಸಹಾಸವೇ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಜತೆಗೆ ಪೊಲೀಸರಿಗೆ ಡಿಕೆಶಿ ಅಭಿಮಾನಿಗಳನ್ನ ನಿಯಂತ್ರಿಸಲು ದೊಡ್ಡ ಸಾಹಸವನ್ನೇ ಮಾಡಬೇಕಾಯಿತು.
ಅಲ್ಲದೆ ಡಿ.ಕೆ.ಯವರ ಸ್ವಾಗತದ ವೇಳೆ ಹಲವಾರು ಜನ ತಮ್ಮ ಮೊಬೈಲ್‌ಗಳನ್ನು, ಚಪ್ಪಲಿಗಳನ್ನು ಕಳೆದುಕೊಂಡರು. ಡಿಕೆಶಿಗಾಗಿ ಮನೆಯಲ್ಲಿ ಪ್ರಾರ್ಥನೆಯನ್ನ ಸಲ್ಲಿಸುತ್ತಿದ್ದ ಅಭಿಮಾನಿಯೊಬ್ಬ ಡಿ.ಕೆ. ಶಿವಕುಮಾರ್‌ಗಾಗಿ ತಿರುಪತಿಯಲ್ಲಿ ವಿಶೇಷ ಪೂಜೆಯನ್ನ ಸಲ್ಲಿಸಿ ಲಾಡುಗಳನ್ನು ತಂದಿದ್ದು ವಿಶೇಷವಾಗಿತ್ತು. ಅಲ್ಲದೆ ಡಿ.ಕೆ.ಯವರನ್ನ ರಾಜಕೀಯ ದುರುದ್ದೇಶದಿಂದ ಬಂಧನ ಮಾಡಿರುವ ಕೇಂದ್ರ ಸರ್ಕಾರದ ವಿರುದ್ಧ ಕಾರ್ಯಕರ್ತರು ಕಿಡಿಕಾರಿದರು.
ಶಾಸಕರಾದ ಕೃಷ್ಣ ಬೈರೇಗೌಡ, ವೆಂಕಟ ರಮಣಯ್ಯ ನಂಜೇಗೌಡ, ಲಕ್ಷ್ಮೀ ಹೆಬ್ಬಾಳ್ಕರ್, ಮಾಜಿ ಸಂಸದ ಶಿವ ರಾಮೇಗೌಡ, ವಿಧಾನ ಪರಿಷತ್ ಸದಸ್ಯರಾದ ಎಸ್ ರವಿ, ನಾರಾಯಣಸ್ವಾಮಿ ಸೇರಿದಂತೆ ಹಲವು ಮುಖಂಡರಿದ್ದರು.
ಪ್ರೀತಿಯನ್ನು ಅಳಿಯಲು ಸಾಧ್ಯವಿಲ್ಲ. ನಾನು ಯಾರಿಗೂ ದ್ರೋಹ ಮಾಡಿಲ್ಲ. ನನ್ನ ಜತೆ ಇಡೀ ರಾಜ್ಯದ ಜನರಿದ್ದಾರೆ. ಕಾನೂನಿಗೆ ಗೌರವ ನೀಡಿದ್ದೇನೆ. ಇಷ್ಟು ಜನರು ಬಂದಿರುವುದರಿಂದ ಅಭಿಮಾನಕ್ಕೆ ಚಿರಋಣಿ ಆಗಿರುತ್ತಾನೆ. ಮುಣದಿನ ದಿನಗಳಲ್ಲಿ ರಾಜ್ಯದ ಜನತೆಯ ಮುಂದೆ ಬಿಚ್ಚಿ ಇಡುತ್ತೇನೆ.
-ಡಿ.ಕೆ. ಶಿವಕುಮಾರ್, ಮಾಜಿ ಸಚಿವ