ಚಿಕ್ಕಬಳ್ಳಾಪುರ: ಜಿಲ್ಲೆಯ ಮೂಲಕ ರಾಷ್ಟ್ರ ರಾಜಧಾನಿ ದೆಹಲಿಗೆ ಸಂಚರಿಸುವ 06521 ಸಂಖ್ಯೆಯ ಯಶವಂತಪುರ-ಹಜರತ್ ನಿಜಾಮುದ್ದೀನ್ ಎಕ್ಸ್‌ಪ್ರೆಸ್ ರೈಲು ಇನ್ಮುಂದೆ ಪ್ರತಿ ಗುರುವಾರ ಚಿಕ್ಕಬಳ್ಳಾಪುರ-ಕೋಲಾರದ ಮೂಲಕ ಸಂಚರಿಸಲಿದ್ದು, ನೈರುತ್ಯ ರೈಲ್ವೆ ಇಲಾಖೆ ಅಧಿಕೃತ ಆದೇಶ ಹೊರ ಬಿದ್ದಿದೆ.
ಕಳೆದ ಮಂಗಳವಾರವಷ್ಟೇ ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಕೋಲಾರದ ಸಂಸದ ಕೆ.ಎಚ್.ಮುನಿಯಪ್ಪ ಮತ್ತಿತರರು ಎಕ್ಸ್‌ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಿದ್ದರು. ಈಗ ರೈಲ್ವೆ ಇಲಾಖೆ ಅಧಿಕೃತವಾಗಿ ರೈಲು ಸಂಚಾರದ ಬಗ್ಗೆ ಪ್ರಕಟಣೆ ಹೊರಡಿಸಿದೆ.
ಒಟ್ಟು 14 ಬೋಗಿಗಳು ಲಭ್ಯ: ಎಕ್ಸ್‌ಪ್ರೆಸ್ ರೈಲಿನಲ್ಲಿ ಒಟ್ಟು 14 ಬೋಗಿಗಳು ಲಭ್ಯವಿದ್ದು, 2 ಜಿಎಸ್ ಮತ್ತು 6 ಜಿಎಸ್‌ಸಿಎನ್ ಬೋಗಿಗಳ ಜೊತೆಗೆ 3 ಎಸಿಸಿಎನ್ ಹಾಗೂ 1ಎಸಿಸಿಡಬ್ಲೂ ಹಾಗೂ 2 ಎಸ್‌ಎಲ್‌ಆರ್/ಡಿ ಸೇರಿ ಒಟ್ಟು 14 ಬೋಗಿಗಳು ಇರಲಿವೆ. ಈ ಮೊದಲು ವಾರಕ್ಕೆ ಎರಡು ದಿನ ರೈಲು ಸಂಚಾರ ನಡೆಸಲಿದೆ ಎಂದು ಹೇಳಲಾಗಿತ್ತಾದರೂ ಇದೀಗ ವಾರಕ್ಕೊಮ್ಮೆ ಮಾತ್ರ ಸಂಚರಿಸಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಪ್ರತಿ ಗುರುವಾರ ಸಂಜೆ 6:30ಕ್ಕೆ ಬಿಟ್ಟು ಬರೋಬ್ಬರಿ 2,581 ಕಿ.ಮೀ ಕ್ರಮಿಸಲಿದೆ.
ಎಲ್ಲಿಂದ ಎಲ್ಲಿಗೆ ರೈಲು ಸಂಚಾರ ಮಾರ್ಗ: ಈ ರೈಲು ಯಶವಂತಪುರದಿಂದ ಯಲಹಂಕ, ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಚಿಂತಾಮಣಿ, ಶ್ರೀನಿವಾಸಪುರ, ಕೋಲಾರ, ಬಂಗಾರಪೇಟೆ, ಜೋಲಾರಪೇಟೆ, ಕಟಾಪಡಿ, ರೇಣುಗುಂಟ, ಗುದುರೂ, ವಿಜಯವಾಡ, ವಾರಂಗಲ್, ಬಹರ್ಷದ್, ಚಂದ್ರಾಪುರ, ನಾಗಪುರ, ಟರೀಸ್, ಭೂಪಾಲ್, ಬೀನಾ, ಜಾನ್ಸಿ, ಆಗ್ರಾ, ಪಾಲ್ವಲ್ ಮೂಲಕ ಹಜರತ್ ನಿಜಾಮುದ್ಧೀನ್ ಮೂಲಕ ದೆಹಲಿ ತಲುಪಲಿದೆ.
ಜೂನ್‌ವರೆಗೂ ಸಂಚರಿಸುತ್ತೆ ರೈಲು: ಸದ್ಯ ಅವಿಭಜಿತ ಕೋಲಾರ, ಚಿಕ್ಕಬಳ್ಳಾಪುರದ ಮೂಲಕ ಸಂಚರಿಸಲಿರುವ ಯಶವಂತಪುರ ನಿಜಾಮುದ್ದೀನ್ ಎಕ್ಸ್‌ಪ್ರೆಸ್ ರೈಲು ಮಾರ್ಚ್ ಸೇರಿ ನಾಲ್ಕು ತಿಂಗಳು ಮಾತ್ರ ಸಂಚರಿಸುತ್ತದೆ ಎಂದು ರೈಲ್ವೆ ಇಲಾಖೆ ಅಧಿಕೃತವಾಗಿ ತಿಳಿಸಿದ್ದು, ಜೂನ್ 24 ರಂದು ಕೊನೆ ಸಂಚಾರ ನಡೆಸಲಿದೆ. ಮಾರ್ಚ್, ಏಪ್ರಿಲ್, ಮೇ ಹಾಗೂ ಜೂನ್ ತಿಂಗಳಲ್ಲಿ ರೈಲು ಸಂಚರಿಸುವ ದಿನಾಂಕವನ್ನು ಸಹ ರೈಲ್ವೆ ಪ್ರಯಾಣಿಕರ ಹಿತದೃಷ್ಟಿಯಿಂದ ನೈರುತ್ಯ ರೈಲ್ವೆ ಇಲಾಖೆ ಪ್ರಕಟಿಸಿದೆ. ನಾಲ್ಕು ತಿಂಗಳಲ್ಲಿ ರೈಲ್ವೆ ಇಲಾಖೆಗೆ ಬರುವ ಆದಾಯ ನೋಡಿಕೊಂಡು ಮುಂದಿನ ಸಂಚಾರವನ್ನು ರೈಲ್ವೆ ಇಲಾಖೆ ನಿರ್ಧರಿಸುವ ಸಾಧ್ಯತೆ ಇದೆ.
* ವಾರಕ್ಕೊಮ್ಮೆ ಮಾತ್ರ ಯಶವಂತಪುರ ನಿಜಾಮುದ್ದೀನ್ ರೈಲು
* ಜೂನ್‌ವರೆಗೂ ಸಂಚರಿಸಲು ರೈಲ್ವೆ ಮಂಡಳಿ ಒಪ್ಪಿಗೆ
* ಹವಾನಿಯಂತ್ರಿತ ಸೇರಿ ಒಟ್ಟು 14 ಬೋಗಿಗಳು ಲಭ್ಯ
* ಪ್ರತಿ ಗುರುವಾರ ಸಂಜೆ6:30ಕ್ಕೆ ಬೆಂಗಳೂರು ಬಿಡುವ ರೈಲು
* ಚಿಕ್ಕಬಳ್ಳಾಪುರ, ಕೋಲಾರದ ಮೂಲಕ ದೆಹಲಿ ಪ್ರಯಾಣ