Advertisement
ಅಜೆಕಾರು ಪೇಟೆಯಿಂದ ಕುರ್ಪಾಡಿ ಸಂಪರ್ಕ ರಸ್ತೆಯ ಇಕ್ಕೆಲಗಳಲ್ಲಿ ವಾರದ ಸಂತೆ ನಡೆಯುತ್ತಿದ್ದು, ಇಡೀ ದಿನ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಇನ್ನು ಸಂತೆಗಾಗಿಯೇ ಮಾರುಕಟ್ಟೆ ಪ್ರಾಂಗಣ ಇದ್ದರೂ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ.
2008ರ ಮಾ. 14ರಂದು ಕಾರ್ಕಳ ಕೃಷಿ ಉತ್ಪನ್ನ ಮಾರುಕಟ್ಟೆ ವತಿಯಿಂದ ಮಾರುಕಟ್ಟೆ ಪ್ರಾಂಗಣ ನಿರ್ಮಾಣವಾಗಿದೆ. ಆದರೆ ಅಲ್ಲಿ ವ್ಯವಹಾರ ನಡೆಯುತ್ತಿಲ್ಲ. ಹೊಸ ಕಟ್ಟಡವಾಗಿ 10 ವರ್ಷಗಳಾದರೂ ಪ್ರಯೋಜನವಿಲ್ಲ ಎಂಬಂತಾಗಿದೆ. ಹಲವು ಗ್ರಾಮಗಳ
ಜನ ಸೇರುವ ಸಂತೆ
ಅಜೆಕಾರು ಸುತ್ತಲಿನ ಸುಮಾರು 8 ಗ್ರಾಮಗಳ ಗ್ರಾಮಸ್ಥರು ಪ್ರತಿ ವಾರ ಇಲ್ಲಿ ವ್ಯವಹಾರ ನಡೆಸುತ್ತಾರೆ. ಎಣ್ಣೆಹೊಳೆ, ಕಡ್ತಲ, ದೊಂಡೇರಂಗಡಿ, ಕಾಡುಹೊಳೆ, ಹೆರ್ಮುಂಡೆ, ಅಂಡಾರು, ಶಿರ್ಲಾಲು ಗ್ರಾಮಗಳ ಜನರು ತಮ್ಮ ನಿತ್ಯ ಜೀವನದ ಆವಶ್ಯಕತೆಗಳಿಗಾಗಿ ಶುಕ್ರವಾರ ನಡೆಯುವ ಅಜೆಕಾರು ಸಂತೆಯನ್ನೇ ಅವಲಂಬಿಸಿದ್ದಾರೆ. ಮಾತ್ರವಲ್ಲದೆ ಈ ವ್ಯಾಪ್ತಿಯ ರೈತರೂ ತಾವು ಬೆಳೆದ ತರಕಾರಿಗಳನ್ನು ಇದೇ ಸಂತೆಯಲ್ಲಿ ಮಾರುತ್ತಾರೆ.
Related Articles
ಹೊಸ ಮಾರುಕಟ್ಟೆ ಪ್ರಾಂಗಣದ ಎದುರಿರುವ ಪಂ.ನ ಹಳೆ ಕಟ್ಟಡ ಅಪಾಯಕಾರಿ ಸ್ಥಿತಿಯಲ್ಲಿದ್ದು, ತೆರವಿನ ಬಗ್ಗೆ ನಿರ್ಣಯ ಕೈಗೊಂಡಿದ್ದರೂ ಇನ್ನೂ ಕಾರ್ಯ ನಡೆದಿಲ್ಲ. ಹೊಸ ಮಾರುಕಟ್ಟೆ ಪ್ರಾಂಗಣದಲ್ಲಿ ವ್ಯಾಪಾರ ನಡೆಸದೇ ಇರಲು ಇದೂ ಒಂದು ಕಾರಣವಾಗಿದೆ. ಮಾರುಕಟ್ಟೆ ಪ್ರಾಂಗಣದ ಇನ್ನೊಂದು ಪಾರ್ಶ್ವದಲ್ಲಿಯೂ ಕುಸಿವ ಭೀತಿಯ ಕಟ್ಟಡವಿದೆ. ಇವುಗಳನ್ನು ತೆರವುಗೊಳಿಸಿದರೆ, ವಿಶಾಲ ಮಾರುಕಟ್ಟೆ ಸಿಗಬಹುದು ಎಂಬ ಅಭಿಪ್ರಾಯವಿದೆ. ಇನ್ನು ಅಜೆಕಾರು ಕುರ್ಪಾಡಿ ರಸ್ತೆಯೂ ದುಃಸ್ಥಿತಿಯಲ್ಲಿದ್ದು, ಸಂತೆಯೂ ನಡೆಯುವುದರಿಂದ ಸಂಚಾರ ತೀರ ಕಷ್ಟಕರವಾಗಿದೆ ಎನ್ನುವುದು ಜನರ ಅಳಲು.
Advertisement
ವ್ಯವಹಾರಕ್ಕೆ ಹಿಂದೇಟುಮಾರುಕಟ್ಟೆ ಪ್ರಾಂಗಣದ ಎದುರು ಹಳೆ ಕಟ್ಟಡವಿರುವುದರಿಂದ ವ್ಯಾಪಾರಸ್ಥರು ಆ ಜಾಗದಲ್ಲಿ ವ್ಯವಹಾರಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಹಳೆ ಕಟ್ಟಡ ತೆರವಿಗೆ ಟೆಂಡರ್ ಕರೆದಿದ್ದರೂ, ಪ್ರಯೋಜನವಾಗಿರಲಿಲ್ಲ. ಈಗ ಸ್ಥಳೀಯರೋರ್ವರು ಕಟ್ಟಡ ತೆರವುಗೊಳಿಸಲು ಮುಂದೆ ಬಂದಿದ್ದು ಚುನಾವಣಾ ಪ್ರಕ್ರಿಯೆ ಅನಂತರ ಮಳೆಗಾಲದ ಮೊದಲು ಕಟ್ಟಡ ತೆರವುಗೊಳಿಸಲಾಗುವುದು.
-ಪುರಂದರ, ಪಿಡಿಒ ಮರ್ಣೆ ಸೂಕ್ತ ಕ್ರಮ ಕೈಗೊಳ್ಳಿ
ಕುರ್ಪಾಡಿ ಭಾಗಕ್ಕೆ ಸಂಪರ್ಕಿಸುವ ರಸ್ತೆ ಕೆಟ್ಟು ಹೋಗಿದೆ. ಅದರಲ್ಲೇ ಸಂತೆಯೂ ನಡೆಯುವುದರಿಂದ ಜನರಿಗೆ ಸಮಸ್ಯೆಯಾಗಿದೆ. ಈ ರಸ್ತೆಯ ಮುಖಾಂತರವೇ ಉದ್ದಿಮೆಗಳ ವಾಹನಗಳು ನಿತ್ಯ ಸಂಚರಿಸುತ್ತವೆ. ರಸ್ತೆ ದುರಸ್ತಿಯೊಂದಿಗೆ ಸಂತೆ ಮಾರುಕಟ್ಟೆ ಪ್ರಾಂಗಣ ದಲ್ಲೇ ನಡೆಯುವಂತಾಗಬೇಕು. ಮಾತ್ರವಲ್ಲದೆ ಹಳೆ ಕಟ್ಟಡವನ್ನು ತೆರವುಗೊಳಿಸಿದಲ್ಲಿ ವಾಹನ ನಿಲುಗಡೆಗೂ ಸ್ಥಳಾವಕಾಶ ಲಭಿಸುತ್ತದೆ.
-ಸತ್ಯೇಂದ್ರ ಕಿಣಿ, ಅಜೆಕಾರು – ಜಗದೀಶ್ ರಾವ್ ಅಂಡಾರು