Advertisement

ಅಮೃತ್‌ ಯೋಜನೆ ಪೈಪ್‌ಲೈನ್‌ ಅಳವಡಿಕೆಗೆ ವಾರದ ಗಡುವು

09:33 PM Jun 24, 2019 | Lakshmi GovindaRaj |

ಹಾಸನ: ಅಮೃತ್‌ ಯೋಜನೆಯಡಿ ಹಾಸನ ನಗರಕ್ಕೆ ನೀರು ಪೂರೈಸಲು ಕೈಗೊಂಡಿರುವ ಪೈಪ್‌ ಅಳವಡಿಕೆ ಕಾಮಗಾರಿಗಳನ್ನು ಒಂದು ವಾರದೊಳಗೆ ಸಂಪೂರ್ಣಗೊಳಿಸಬೇಕು ಎಂದು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅಕ್ರಂ ಪಾಷಾ ತಾಕೀತು ಮಾಡಿದರು.

Advertisement

ರೈಸಿಂಗ್‌ ಮೇನ್‌ ಪರಿಶೀಲನೆ: ಸಾಲಗಾಮೆ ರಸ್ತೆಯ ಸರ್ಕಾರಿ ವಿಜ್ಞಾನ ಕಾಲೇಜು ಮುಂಭಾಗದಲ್ಲಿ ಅಮೃತ್‌ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಯ ಏರು ಕೊಳವೆ ಮಾರ್ಗ (ರೈಸಿಂಗ್‌ ಮೈನ್‌) ಅಳವಡಿಕೆ ಕಾಮಗಾರಿ ಪರಿಶೀಲಿಸಿದ ಜಿಲ್ಲಾಧಿಕಾರಿಯವರು, ಸ್ಥಳದಲ್ಲಿದ್ದ ಎಂಜಿನಿಯರ್‌ಗಳು, ಕರ್ನಾಟಕ ನಗರ ನೀರುಸರಬರಾಜು ಮತ್ತು ಒಳಚರಂಡಿ ಮಂಡಳಿ ಮತ್ತು ಸಂಬಂಧಪಟ್ಟ ಗುತ್ತಿಗೆದಾರರಿಗೆ ಒಂದು ವಾರದೊಳಗೆ ಕಾಮಗಾರಿಯನ್ನು ಪೂರ್ಣಗೊಳಿಬೇಕು. ಇಲ್ಲದಿದ್ದಲ್ಲಿ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಎಂದು ನಿರ್ದೇಶನ ನೀಡಿದರು.

ಕಪ್ಪುಪಟ್ಟಿಗೆ ಗುತ್ತಿಗೆದಾರರು- ಎಚ್ಚರಿಕೆ: ಮಲೆನಾಡು ಎಂಜಿನಿಯರಿಂಗ್‌ ಕಾಲೇಜು ಮುಂಭಾಗದಲ್ಲಿ ಏರು ಕೊಳವೆ ಮಾರ್ಗದ (ರೈಸಿಂಗ್‌ ಮೈನ್‌) ಕಾಮಗಾರಿ ವೀಕ್ಷಿಸಿ ಸಾರ್ವಜನಿಕರಿಂದ ಯೋಜನೆಯ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿಯವರು, ಸಾಲಗಾಮೆ ರಸ್ತೆಯಲ್ಲಿ ಲೋಕೋಪಯೋಗಿ ಇಲಾಖೆಯಿಂದ ಅನುಷ್ಠಾನಗೊಳ್ಳುತ್ತಿರುವ ರಸ್ತೆ ಕಾಮಗಾರಿಯನ್ನು ಪರಿವೀಕ್ಷಿಸಿ ರಸ್ತೆ ಕಾಮಗಾರಿಯನ್ನು ಒಂದು ವಾರದೊಳಗೆ ಪೂರ್ಣಗೊಳಿಸಬೇಕು. ವಿಳಂಬ ಧೋರಣೆ ತೋರಿದರೆ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ಸ್ಥಳದಲ್ಲಿದ್ದ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಸೂಚನೆ ನೀಡಿದರು.

ಮರದ ದಿಮ್ಮಿ ತೆರವುಗೊಳಿಸಿ: ರಸ್ತೆ ಅಗಲೀಕರಣ ಸಂದರ್ಭದಲ್ಲಿ ಮರಗಳನ್ನು ತೆರವುಗೊಳಿಸಿದ್ದು, ರಸ್ತೆ ಬದಿಯಲ್ಲಿ ಬಿದ್ದಿದ್ದ ಮರಗಳ ದಿಮ್ಮಿಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆಗೆ ತಾಕೀತು ಮಾಡಿದರು. ಉಪವಿಭಾಗಾಧಿಕಾರಿ ಎಚ್‌.ಎಲ್‌. ನಾಗರಾಜ್‌, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಕೃಷ್ಣ ಮೂರ್ತಿ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯಪಾಲಕ ಅಭಿಯಂತರ‌ ಕರಿಯಪ್ಪ, ಸಹಾಯಕ ಕಾರ್ಯಪಾಲಕ ಅಭಿಯಂತರ ಜಗದೀಶ್‌ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next