ವೀಕ್ ಎಂಡ್ ಎಂದರೆ ಸಾಕು ಅದೆಷ್ಟೋ ಜನರ ಕಿವಿ ನೆಟ್ಟಗಾಗುತ್ತದೆ. ವಾರವಿಡೀ ದುಡಿದು ದಣಿದ ದೇಹ ಮತ್ತು ಮನಸ್ಸಿಗೆ ಸ್ವಲ್ಪ ರಿಲ್ಯಾಕ್ಸ್ ಮೂಡ್ ಸಿಗುವುದೇ ವೀಕ್ ಎಂಡ್‌ನಲ್ಲಿ ಹಾಗಾಗಿ ವಾರಕ್ಕೊಮ್ಮೆ ಸಿಗುವ ಈ ವೀಕ್ ಎಂಡ್ ಸದಾವಕಾಶವನ್ನು ಯಾರೂ ಮಿಸ್ ಮಾಡಿಕೊಳ್ಳಲು ಇಷ್ಟಪಡುವುದಿಲ್ಲ. ಈಗ ಯಾಕೆ ಈ ವಿಕ್ ಎಂಡ್ ಬಗ್ಗೆ ಹೇಳುತ್ತಿದ್ದೇವೆ ಎನ್ನುತ್ತೀರಾ? ಅದಕ್ಕೂ ಕಾರಣವಿದೆ. ಕನ್ನಡದಲ್ಲಿ ಈಗ ವೀಕ್ ಎಂಡ್ ಎಂಬ ಹೆಸರಿನಲ್ಲಿ ಹೊಸ ಚಿತ್ರವೊಂದು ತೆರೆಗೆ ಬರೋದಕ್ಕೆ ಸಿದ್ಧವಾಗುತ್ತಿದೆ. ಕೆಲ ತಿಂಗಳ ಹಿಂದೆ ಸರಳವಾಗಿ ಸೆಟ್ಟೇರಿದ್ದ ಈ ಚಿತ್ರದ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಇತ್ತೀಚೆಗೆ ಚಿತ್ರದ ಬಗ್ಗೆ ಒಂದಷ್ಟು ಮಾಹಿತಿ ನೀಡಲು ಮಾಧ್ಯಮಗಳು ಮತ್ತು ಪತ್ರಕರ್ತರನ್ನು ಚಿತ್ರೀಕರಣ ನಡೆಯುತ್ತಿದ್ದ ಕಂಠೀರವ ಸ್ಟುಡಿಯೋಗೆ ಆಹ್ವಾನಿಸಿತ್ತು.
ಚಿತ್ರದ ದೃಶ್ಯವೊಂದರ ಚಿತ್ರೀಕರಣದಲ್ಲಿದ್ದ ಹಿರಿಯ ನಟ ಅನಂತನಾಗ್, ಗೋಪಿನಾಥ ಭಟ್, ನಾಯಕ ನಟ ಮಿಲಿಂದ್, ನಾಗಭೂಷಣ್, ರಕ್ಷಾ ಭಾನು ಮೊದಲಾದ ಕಲಾವಿದರು. ನಿರ್ದೇಶಕ ಸುರೇಶ್ ರಾಜ್, ಛಾಯಾಗ್ರಹಕ ಶಶಿ, ನಿರ್ಮಾಪಕ ಮಂಜುನಾಥ್ ನಿರತವಾಗಿದ್ದರು. ಬಳಿಕ ಕೊಂಚ ಬ್ರೇಕ್ ತೆಗೆದುಕೊಂಡು “ವೀಕ್ ಎಂಡ್’ ವಿಶೇಷತೆಗಳ ಕುರಿತು ಪತ್ರಕರ್ತರ ಜೊತೆ ಚಿತ್ರತಂಡ ಮಾತಿಗಿಳಿಯಿತು.
ಮೊದಲು ಮಾತಿಗೆ ಪೀಠಿಕೆ ಹಾಕಿದ ನಿರ್ದೇಶಕ ಸುರೇಶ್, “ಇವತ್ತಿನ ಯುವ ಜನಾಂಗ ಸಾಕಷ್ಟು ಮುಂದುವರೆದಿದೆ. ಅತಿ ಕಡಿಮೆ ವಯಸ್ಸಿನಲ್ಲೇ ಅತಿ ಹೆಚ್ಚು ದುಡಿಯುತ್ತಿದ್ದಾರೆ. ಆದರೆ ತಮ್ಮ ದುಡಿಮೆಯನ್ನು ಹೇಗೆ ಸದುಪಯೋಗಪಡಿಸಿಕೊಳ್ಳಬೇಕು ಎಂಬುದು ಮಾತ್ರ ಅವರಿಗೆ ಸರಿಯಾಗಿ ತಿಳಿದಿಲ್ಲ. ವಯಸ್ಸು ಮತ್ತದರ ಜೊತೆ ಕೈ ತುಂಬಾ ಹಣ ಎರಡೂ ಇದ್ದಾಗ ಏನೇನು ಅನಾಹುತಗಳು ಸಂಭವಿಸಬಹುದು ಎಂಬುದೇ ಈ ಚಿತ್ರದ ಕಥೆ. ಇಂದಿನ ಯುವಕರು “ವೀಕ್ ಎಂಡ್’ನಲ್ಲಿ ಏನೇನು ಮಾಡುತ್ತಾರೆ? ಅವರ ಜೀವನ ಶೈಲಿ ಹೇಗಿರುತ್ತದೆ? ಹೀಗೆ ನಮ್ಮ ಸುತ್ತಮುತ್ತ ನಡೆಯುತ್ತಿರುವ ಹತ್ತಾರು ಸಂಗತಿಗಳ ಸುತ್ತ “ವೀಕ್ ಎಂಡ್’ ಚಿತ್ರ ನಡೆಯುತ್ತದೆ’ ಎಂದರು.
“ವೀಕ್ ಎಂಡ್’ ಚಿತ್ರದಲ್ಲಿ ನಟ ಅನಂತನಾಗ್, ತಾತನ ಪಾತ್ರವನ್ನು ನಿರ್ವಹಿಸುತ್ತಿದ್ದಾರಂತೆ. ಮೊಮ್ಮಗನನ್ನು ಸುಸಂಸ್ಕೃತನಾಗಿ ಬೆಳೆಸುವುದು ಅವರ ಪಾತ್ರದ ಒಂದು ಭಾಗ. ಚಿತ್ರ ಮತ್ತು ಅದರಲ್ಲಿನ ತಮ್ಮ ಪಾತ್ರದ ಬಗ್ಗೆ ಮಾತನಾಡಿದ ಅನಂತನಾಗ್, “ವೀಕ್ ಎಂಡ್’ ಅನ್ನೋದು ಮೊದಲು ಐಟಿ-ಬಿಟಿ ಜಕನರಿಗೆ ಮಾತ್ರ ಸೀಮಿತ ಎಂಬ ಭಾವನೆಯಿತ್ತು. ಇವತ್ತು ಎಲ್ಲಾ ಥರದ ಕೆಲಸ ಮಾಡುವವರೂ ವಾರಾಂತ್ಯದಲ್ಲಿ “ವೀಕ್ ಎಂಡ್’ ಮೂಡ್‌ನಲ್ಲಿ ಇರುತ್ತಾರೆ. ಇಂದಿನ ದಿನಗಳಲ್ಲಿ ನಾವು ಕಾಣುವ ಅನೇಕ ಸಂಗತಿಗಳ ಸುತ್ತವೇ ಚಿತ್ರ ಸಾಗುತ್ತದೆ. ಇಂದಿನ ಯುವಕರು “ವೀಕ್ ಎಂಡ್’ ಬಂತು ಅಂದ್ರೆ ಮನೆ ಬಗ್ಗೆ ಯೋಚಿಸದೆ ಹಣ ಖರ್ಚು ಮಾಡಿ ಮಜಾ ಮಾಡುತ್ತಾರೆ. ಅವರು ವೆಚ್ಚ ಮಾಡುವ ಹಣವನ್ನು ಕೂಡಿಟ್ಟರೆ ಅವರಿಗೇ ಒಳ್ಳೆಯದು. ಸಾಫ್ಟ್ವೇರ್ ಕೆಲಸ ಯಾವಾಗ ಬೇಕಿದ್ದರೂ ಕಳೆದುಕೊಳ್ಳಬಹುದು. ಆದರೆ ಜೀವನ ಶೈಲಿ ಇದೆಯಲ್ಲ, ಅದು ಕಷ್ಟ ಕಾಲದಲ್ಲೂ ಕಾಪಾಡುತ್ತದೆ. ಅದು ಎಲ್ಲರಿಗೂ ತಿಳಿಯಬೇಕು ಅಂತಲೇ “ವೀಕ್ ಎಂಡ್’ ಚಿತ್ರದಲ್ಲಿ ಸುಸಂಸ್ಕೃತ ತಾತನ ಪಾತ್ರದಲ್ಲಿ ಅಭಿನಯಿಸಲು ಒಪ್ಪಿಕೊಂಡೆ. ಅಲ್ಲದೆ ನಿರ್ದೇಶಕ ಸುರೇಶ್ ರಾಜ್ ಶಂಕರ ನಾಗ್ ಜೊತೆ ಸಹಾಯಕ ನಿರ್ದೇಶಕರಾಗಿ ಬಹಳ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದರು. ಅದೂ ಕೂಡ ಚಿತ್ರ ಒಪ್ಪಿಕೊಳ್ಳಲು ಕಾರಣವಾಯಿತು’ ಎನ್ನುತ್ತಾರೆ.
ಇನ್ನು “ವೀಕ್ ಎಂಡ್’ ಚಿತ್ರದಲ್ಲಿ ನವನಟ ಮಿಲಿಂದ್ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ. ಈಗಷ್ಟೇ ಬಿ.ಇ ಮುಗಿಸಿರುವ ಈ ಹುಡುಗ ನೀನಾಸಂ ಸೇರಿದಂತೆ, ಒಂದಷ್ಟು ರಂಗತಂಡಗಳಲ್ಲಿ ತರಬೇತಿ ಪಡೆದುಕೊಂಡು, ಈ ಚಿತ್ರದ ಮೂಲಕ ಸ್ಯಾಂಡಲ…ವುಡ್‌ಗೆ ಪರಿಚಯವಾಗುತ್ತಿದ್ದಾರೆ. ಎಲ್ಲಾ ಅಂದುಕೊಂಡಂತೆ ನಡೆದರೆ ಮುಂದಿನ ಫ್ರೆಬ್ರವರಿ ವೇಳೆಗೆ “ವೀಕ್ ಎಂಡ್’ ಚಿತ್ರವನ್ನು ತೆರೆಗೆ ತರುವ ಯೋಜನೆ ಇದೆ ಎನ್ನುತ್ತಾರೆ ನಿರ್ಮಾಪಕ ಮಂಜುನಾಥ್.