ನವದೆಹಲಿ: ಕೋವಿಡ್ 19 ಮಹಾಮಾರಿ ತೀವ್ರಗತಿಯಲ್ಲಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ವಾರಾಂತ್ಯದ ಕರ್ಫ್ಯೂ ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗುರುವಾರ(ಏಪ್ರಿಲ್ 15) ಘೋಷಿಸಿದ್ದಾರೆ.
ವೀಕೆಂಡ್ ಕರ್ಫ್ಯೂ ವೇಳೆ ಮದುವೆ ಸಮಾರಂಭ ಹಾಗೂ ತುರ್ತು ಸೇವೆಗಳಿಗೆ ಕರ್ಫ್ಯೂ ಪಾಸ್ ಮೂಲಕ ಅವಕಾಶ ನೀಡಲಾಗುವುದು ಎಂದು ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ. ಆದರೆ ವೀಕೆಂಡ್ ಕರ್ಫ್ಯೂ ಜಾರಿ ವೇಳೆ ಆಡಿಟೋರಿಯಂ, ಮಾಲ್ಸ್, ಜಿಮ್, ಮಾರುಕಟ್ಟೆ ಸಂಪೂರ್ಣ ಬಂದ್ ಮಾಡಲಾಗುವುದು ಎಂದು ವಿವರಿಸಿದ್ದಾರೆ.
ಶುಕ್ರವಾರ ರಾತ್ರಿಯಿಂದಲೇ ವಾರಾಂತ್ಯದ ಕರ್ಫ್ಯೂ ಜಾರಿಯಾಗಲಿದ್ದು, ಸಿನಿಮಾ ಥಿಯೇಟರ್ ಗಳಲ್ಲಿ ಶೇ.30ರಷ್ಟು ಮಾತ್ರ ಅವಕಾಶ ನೀಡಲಾಗುವುದು ಎಂದು ಸಿಎಂ ಕೇಜ್ರಿವಾಲ್ ತಿಳಿಸಿದ್ದಾರೆ.
ಕೋವಿಡ್ 2ನೇ ಅಲೆ ಆರಂಭವಾದ ನಂತರ ಬುಧವಾರ ಒಂದೇ ದಿನ ದೆಹಲಿಯಲ್ಲಿ ದಾಖಲೆಯ 17, 282 ಕೋವಿಡ್ ಪ್ರಕರಣ ಪತ್ತೆಯಾಗಿತ್ತು. 24ಗಂಟೆಯಲ್ಲಿ ನೂರಕ್ಕೂ ಅಧಿಕ ಮಂದಿ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದರು.
ದೆಹಲಿಯಲ್ಲಿ 50,736 ಸಕ್ರಿಯ ಕೋವಿಡ್ ಪ್ರಕರಣಗಳು ವರದಿಯಾಗಿದೆ. ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಲಾಕ್ ಡೌನ್ ಜಾರಿಗೊಳಿಸಲ್ಲ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಈ ಮೊದಲು ತಿಳಿಸಿದ್ದರು. ಕಠಿಣ ನಿರ್ಬಂಧಗಳ ಮೂಲಕ ಕೋವಿಡ್ ಹರಡುವಿಕೆ ತಡೆಯಲು ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದರು.