ಬಂದರು : ವಾರಾಂತ್ಯ ಕರ್ಫ್ಯೂ ಕಾರಣದಿಂದ ಮೀನು ಹೇರಿಕೊಂಡು ಮಂಗಳೂರು ಬಂದರಿಗೆ ಆಗಮಿಸಿ ಲಂಗರು ಹಾಕಿದ್ದ ಬೋಟ್‌ಗಳಿಂದ ಎರಡು ದಿನದ ಬಳಿಕ ಸೋಮವಾರ ಮೀನು ಅನ್‌ಲೋಡ್ ಮಾಡಲಾಯಿತು.
ಶನಿವಾರ ಹಾಗೂ ರವಿವಾರ ಆಗಮಿಸಿದ ಬೋಟ್‌ಗಳಿಂದ ಸೋಮವಾರ ಮುಂಜಾನೆ 6 ಗಂಟೆಯ ಬಳಿಕದಿಂದ ಮೀನು ಅನ್‌ಲೋಡ್ ಮಾಡುವ ಪ್ರಕ್ರಿಯೆ ನಡೆಯಿತು. ಸುಮಾರು 60ಕ್ಕೂ ಅಧಿಕ ಬೊಟ್‌ಗಳು ಆಗಮಿಸಿದ್ದವು. ಹೀಗಾಗಿ ಮಂಗಳೂರು ಬಂದರ್‌ನಲ್ಲಿ ಬಹಳಷ್ಟು ಜನ ನೆರೆದಿದ್ದರು.
ಸುಮಾರು 10 ದಿನದ ಮೊದಲೇ ಮೀನುಗಾರಿಕೆಗೆ ಮಂಗಳೂರಿನಿಂದ ತೆರಳಿದ ಬೋಟ್‌ಗಳು ಶನಿವಾರ-ರವಿವಾರ ಬಂದರಿಗೆ ಆಗಮಿಸಿತ್ತು. ಆದರೆ ಈ ವೇಳೆ ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿರುವ ಕಾರಣದಿಂದ ಬೋಟ್‌ಗಳು ಬಂದರೂ, ಮೀನು ಇಳಿಸಲು ಬಂದರ್‌ನಲ್ಲಿ ಕಾರ್ಮಿಕರು ಇರಲಿಲ್ಲ. ಮೀನುಗಾರಿಕಾ ಬಂದರು ಅಕ್ಷರಶಃ ಸ್ತಬ್ಧವಾಗಿತ್ತು. ಹೀಗಾಗಿ ಮೀನು ತುಂಬಿಕೊಂಡಿರುವ ಬೋಟ್‌ಗಳು ಬಂದರ್‌ನಲ್ಲಿಯೇ ಲಂಗರು ಹಾಕಿತ್ತು. ಬಂದರು ವ್ಯಾಪ್ತಿಯಲ್ಲಿ ರಸ್ತೆ ಸಂಚಾರಕ್ಕೆ ಅವಕಾಶ ಅಥವಾ ಅಂಗಡಿ ಮುಂಗಟ್ಟು ತೆರೆಯದ ಕಾರಣದಿಂದ ಬೋಟ್‌ನಲ್ಲಿ ಬಂದ ಬಹುತೇಕ ಮೀನುಗಾರರು ಕೂಡ ಬೋಟ್‌ನಲ್ಲಿಯೇ ಬಾಕಿಯಾಗಿದ್ದರು. ಕಾರ್ಮಿಕರಿಗೆ ಎರಡು ದಿನ ಕೂಡ ಬೋಟ್‌ನಲ್ಲಿಯೇ ಊಟ-ತಿಂಡಿಗೆ ವ್ಯವಸ್ಥೆ ಇತ್ತು.
ಇದನ್ನೂ ಓದಿ :ಕೆಂಪುಕೋಟೆ ಹಿಂಸೆ ಪ್ರಕರಣ : ನಟ ದೀಪ್ ಸಿಧುಗೆ ಜಾಮೀನು ಮಂಜೂರು
ಮೀನುಗಾರಿಕಾ ಬಂದರು ಪ್ರದೇಶದಲ್ಲಿ ಬಹುತೇಕ ಜನರು ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಜಿಲ್ಲಾಡಳಿತ ಹಾಗೂ ಮೀನುಗಾರ ಮುಖಂಡರು ಹತ್ತಾರು ಬಾರಿ ಮನವಿ ಮಾಡಿದರೂ ಕೂಡ ಇಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಬಹುದೊಡ್ಡ ಸವಾಲಾಗಿದೆ!