Advertisement

ಅಯ್ಯಪ್ಪ ವ್ರತಧಾರಿಗಳಿಗೂ ತೊಡಕು

01:32 AM Jan 10, 2022 | Team Udayavani |

ಉಡುಪಿ: ವಾರಾಂತ್ಯ ಕರ್ಫ್ಯೂ ವರ್ತಕರಿಗೆ, ಉದ್ಯಮಗಳಿಗೆ, ಜನ ಸಾಮಾನ್ಯರಿಗೆ ಮಾತ್ರವಲ್ಲದೇ ಅಯ್ಯಪ್ಪ ಸ್ವಾಮಿ ವ್ರತಧಾರಿಗಳಿಗೂ ಸಮಸ್ಯೆ ನೀಡುತ್ತಿದೆ.

Advertisement

ಸಾಮಾನ್ಯವಾಗಿ ನವಂಬರ್‌ನಿಂದ ಜ.15ರ ವರೆಗೆ ರಾಜ್ಯದಿಂದ ಸಹಸ್ರಾರು ವ್ರತಧಾರಿಗಳು ಶಬರಿಮಲೆಗೆ ಹೋಗುತ್ತಾರೆ. ಅದರಲ್ಲೂ ಮಕರಜ್ಯೋತಿ ನೋಡಲು ಹೋಗುವವರ ಸಂಖ್ಯೆ ಇನ್ನು ಹೆಚ್ಚಿರುತ್ತದೆ. ರಾಜ್ಯದ ವಿವಿಧ ಭಾಗಗಳ ಭಕ್ತರು ಕರಾವಳಿ ಮಾರ್ಗವಾಗಿಯೇ ಹೋಗುವ ವೇಳೆ ಸಿಗುವ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವುದು ವಾಡಿಕೆ. ಆದರೆ ಕಳೆದ ವರ್ಷ ಕೊರೊನಾ ಲಾಕ್‌ಡೌನ್‌ ಮತ್ತು ಕಠಿನ ನಿಯಮದಿಂದ ವಿವಿಧ ಕ್ಷೇತ್ರಗಳ ದರ್ಶನ ಸಾಧ್ಯವಾಗಿಲ್ಲ. ಈ ವರ್ಷವೂ ವಾರಾಂತ್ಯ ಕರ್ಫ್ಯೂ ಜಾರಿ ಮಾಡಿರುವುದರಿಂದ ಅನೇಕ ರೀತಿಯ ಸಮಸ್ಯೆ ಯಾಗುತ್ತಿದೆ ಎಂದು ವ್ರತಧಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

ದರ್ಶನ ಮಾತ್ರ; ಪ್ರಸಾದ ಇಲ್ಲ
ಬಹುತೇಕ ದೇವಸ್ಥಾನಗಳಲ್ಲಿ ದರ್ಶನಕ್ಕೆ ಮಾತ್ರ ಅವಕಾಶ ಇರುವುದರಿಂದ ಪ್ರಸಾದ ನೀಡುತ್ತಿಲ್ಲ. ಸಾಮಾನ್ಯವಾಗಿ ದರ್ಶನದ ಜತೆಗೆ ಮಧ್ಯಾಹ್ನ ಹಾಗೂ ರಾತ್ರಿ ಊಟ ಪ್ರಸಾದಕ್ಕೆ ಸರಿ ಹೊಂದುವಂತೆ ಯೋಜನೆ ರೂಪಿಸಿಕೊಂಡು ಯಾತ್ರೆ ಆರಂಭಿಸುತ್ತೇವೆ. ವಾರಾಂತ್ಯ ಕರ್ಫ್ಯೂನಿಂದ ಪ್ರಸಾದ ಊಟಕ್ಕೂ ಸಮಸ್ಯೆಯಾಗುತ್ತಿದೆ. ಜತೆಗೆ ಹೊಟೇಲ್‌ ಗ‌ಳಲ್ಲಿ ಪಾರ್ಸೆಲ್‌ ಸೇವೆ ಮಾತ್ರ ಇರುವುದರಿಂದ ಹೊಟೇಲ್‌ ಊಟ ಮಾಡುವುದು ಕಷ್ಟವಾಗುತ್ತಿದೆ. ಸಾವಿರಾರು ಸಂಖ್ಯೆಯಲ್ಲಿ ಅಯ್ಯಪ್ಪ ವ್ರತಧಾರಿಗಳು ಕರಾವಳಿಯ ಪ್ರಮುಖ ದೇವಸ್ಥಾನಕ್ಕೆ ಭೇಟಿ ನೀಡಿ, ದರ್ಶನ ಪಡೆದು ಶಬರಿಮಲೆ ಹೋಗುತ್ತಾರೆ. ಆದರೆ ವಾರಾಂತ್ಯ ಕರ್ಫ್ಯೂ ಹಾಗೂ ಕಠಿನ ನಿಯಮದಿಂದ ಅಯ್ಯಪ್ಪ ಭಕ್ತರ ಸಂಖ್ಯೆ ಕಡಿಮೆಯಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರೊಬ್ಬರು ಮಾಹಿತಿ ನೀಡಿದರು.

ಊಟದ ವ್ಯವಸ್ಥೆ ನಾವೇ ಮಾಡಿಕೊಳ್ಳುತ್ತೇವೆ ವಾರಾಂತ್ಯ ಕರ್ಫ್ಯೂ ಹಾಗೂ ಕಠಿನ ನಿಯಮ ಇರುವುದರಿಂದ ಮಧ್ಯಾಹ್ನ ಹಾಗೂ ಸಂಜೆ ನಾವೇ ಊಟ ಸಿದ್ಧಮಾಡಿಕೊಳ್ಳುತ್ತೇವೆ. ಎಂದು ಬಾಗಲಕೋಟೆ ಮೂಲಕ ಅಯ್ಯಪ್ಪ ವ್ರತಧಾರಿಗಳ ತಂಡ ಉದಯವಾಣಿಗೆ ಮಾಹಿತಿ ನೀಡಿತು.

ಇದನ್ನೂ ಓದಿ:ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಉಲ್ಬಣ : 340 ಮಂದಿಗೆ ಪಾಸಿಟಿವ್‌; ಶೇ.3.86 ಪಾಸಿಟಿವಿಟಿ ದರ

Advertisement

ಅಲ್ಲಲ್ಲಿ ತಪಾಸಣೆ
ಅಯ್ಯಪ್ಪ ಸ್ವಾಮಿ ವ್ರತಧಾರಿಗಳಿಗೆ ಜಿಲ್ಲೆಯ ಪ್ರಮುಖ ಚೆಕ್‌ ಪೋಸ್ಟ್ ಗಳಲ್ಲಿ ತಪಾಸಣೆ ಮಾಡಲಾಗುತ್ತಿದೆ. ಗಡಿ ಭಾಗದ ಚೆಕ್‌ ಪೋಸ್ಟ್‌ ಗಳಲ್ಲಿ ಆರ್‌ಟಿಪಿಸಿಆರ್‌ ಟೆಸ್ಟ್‌ ಮಾಹಿತಿ, ಎರಡು ಡೋಸ್‌ ಪಡೆದಿರುವ ಮಾಹಿತಿ ಸೇರಿ ವಿವಿಧ ದಾಖಲೆ ಕೇಳುತ್ತಾರೆ. ಇದು ಕೂಡ ಕಿರಿಕಿರಿಯಾಗುತ್ತಿದೆ ಎಂದು ಅಯ್ಯಪ್ಪ ವ್ರತಧಾರಿಗಳು ಹೇಳಿದರು.

ಜಿಲ್ಲೆಗಳಲ್ಲಿ ವಾರಾಂತ್ಯ ಕರ್ಫ್ಯೂ ಹೇರಿರುವುದು ಸರಿಯಲ್ಲ. ಇದರಿಂದ ಅಯ್ಯಪ್ಪ ವ್ರತಧಾರಿಗಳಿಗೆ ತೀರ್ಥಕ್ಷೇತ್ರ ಸಂದರ್ಶನ ಹಾಗೂ ಕೆಲವು ಕಡೆ ದೇವರ ದರ್ಶನಕ್ಕೂ ಸಮಸ್ಯೆಯಾಗುತ್ತಿದೆ. ಕೊರೊನಾ ನಿಯಂತ್ರಣಕ್ಕೆ ಸೂಕ್ತ ನಿಯಮ ಅನುಷ್ಠಾನ ಮಾಡಬೇಕು. ವಾರಾಂತ್ಯ ಕರ್ಫ್ಯೂ, ಲಾಕ್‌ಡೌನ್‌ ಪರಿಹಾರ ಅಲ್ಲ. ಇದರಿಂದ ಎಲ್ಲ ವರ್ಗಕ್ಕೂ ಸಮಸ್ಯೆಯಾಗಲಿದೆ.
-ರಾಧಾಕೃಷ್ಣ ಮೆಂಡನ್‌, ಜಿಲ್ಲಾಧ್ಯಕ್ಷ,
ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ

Advertisement

Udayavani is now on Telegram. Click here to join our channel and stay updated with the latest news.

Next