ಉಡುಪಿ: ರಾಜ್ಯ ಸರಕಾರ ಹಾಸನ, ಕೊಡಗು, ದ.ಕ. ಜಿಲ್ಲೆಗಳೊಂದಿಗೆ ಉಡುಪಿ ಜಿಲ್ಲೆಗೂ ವಾರಾಂತ್ಯ ಕರ್ಫ್ಯೂ ವಿಧಿಸಿರುವುದು ಅವೈಜ್ಞಾನಿಕವೆ? ಇಂತಹ ಚರ್ಚೆಗಳು ಎರಡು ದಿನಗಳಿಂದ ನಡೆಯುತ್ತಿವೆ. ಇತ್ತೀಚೆಗಷ್ಟೇ ಲಾಕ್‌ಡೌನ್‌ನಿಂದ ವಿನಾಯಿತಿ ಪಡೆದು ನಿಧಾನಗತಿಯಲ್ಲಿ ಚಿಗುರುತ್ತಿದ್ದ ಆರ್ಥಿಕ ಚಟುವಟಿಕೆಗಳು ವಾರಾಂತ್ಯ ಕರ್ಫ್ಯೂ ಆದೇಶದಿಂದ ಮತ್ತೆ ಕಮರುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗಿದೆ.
ಉಡುಪಿ ಜಿಲ್ಲೆಯಲ್ಲಿ ಪಾಸಿಟಿವಿಟಿ ಪ್ರಮಾಣ ಶೇ. 2ಕ್ಕಿಂತ ಹೆಚ್ಚಿಗೆ ಇರುವಾಗ ಶಾಲಾ ಕಾಲೇಜುಗಳನ್ನು ಆರಂಭಿಸಲು ಅವಕಾಶ ನೀಡಿರಲಿಲ್ಲ. ಶೇ. 2ಕ್ಕಿಂತ ಕಡಿಮೆ ಯಾಗುತ್ತಿದ್ದಂತೆ ಶಾಲಾ ಕಾಲೇಜುಗಳನ್ನು ತೆರೆಯಲು ಅನುಮತಿ ನೀಡಲಾಯಿತು. ಈಗಿನ ಪಾಸಿಟಿವಿಟಿ ಪ್ರಮಾಣ 14 ದಿನಗಳಲ್ಲಿ ಶೇ. 1.54 ಮತ್ತು ಏಳು ದಿನಗಳಲ್ಲಿ ಶೇ. 1.27ಕ್ಕೆ ಇಳಿದಿದೆ. ಹೀಗಿರುವಾಗಲೂ ವಾರಾಂತ್ಯ ಕರ್ಫ್ಯೂ ಅಗತ್ಯವೇನು ಎಂಬ ಪ್ರಶ್ನೆ ಕೇಳಿಬರುತ್ತಿದೆ.
ರಾಜ್ಯದ ಸರಾಸರಿಗಿಂತ ಉಡುಪಿ ಜಿಲ್ಲೆಯ ಸರಾಸರಿ ಪಾಸಿಟಿವಿಟಿ ಪ್ರಮಾಣ ಹೆಚ್ಚಿಗೆ ಇರುವುದರಿಂದ ಕೊರೊನಾ ಸೋಂಕು ಪ್ರಸರಣ ತಡೆಯಲು ಸರಕಾರ ವಾರಾಂತ್ಯ ಕರ್ಫ್ಯೂ ಜಾರಿಗೊಳಿಸಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್ ಅಭಿಪ್ರಾಯಪಟ್ಟರೆ, ಶಾಸಕ ಕೆ. ರಘುಪತಿ ಭಟ್ ವಾರಾಂತ್ಯ ಕರ್ಫ್ಯೂ ಸೂಕ್ತವಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಜಿಲ್ಲೆಯ ಪರೀಕ್ಷಾ ದರ, ವ್ಯಾಕ್ಸಿನೇಶನ್ ಪ್ರಮಾಣ ಉತ್ತಮವಿದೆ. ಪಾಸಿಟಿವಿಟಿ ದರವೂ ಕಡಿಮೆಯಾಗಿದೆ. ಉಡುಪಿ ಜಿಲ್ಲೆ ಗಡಿ ಜಿಲ್ಲೆಯಲ್ಲ. ಹೀಗಾಗಿ ವಾರಾಂತ್ಯ ಕರ್ಫ್ಯೂ ಸಮಂಜಸವಲ್ಲ. ಸಚಿವ ಸುನಿಲ್ ಅವರಲ್ಲಿ ಮಾತನಾಡಿದ್ದು ಅವರೂ ನನ್ನ ಅಭಿಪ್ರಾಯವನ್ನು ಸಮ್ಮತಿಸಿದ್ದಾರೆ; ಬೆಂಗಳೂರಿನಲ್ಲಿ ರವಿವಾರ ಮತ್ತೆ ಸಭೆ ನಡೆಯಲಿದ್ದು, ಮುಂದಿನ ವಾರದಿಂದ ರಿಯಾಯಿತಿ ಲಭಿಸಬಹುದು ಎಂದು ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ.
ಮಾಲ್, ದಿನಸಿ ಅಂಗಡಿಗಳು ಮಧ್ಯಾಹ್ನದವರೆಗೆ ತೆರೆದಿರಬಹುದು. ಫ್ಯಾನ್ಸಿ ಅಂಗಡಿ, ಚಪ್ಪಲಿ ಅಂಗಡಿ ಮುಂತಾದುವು ಏನು ಮಾಡಿವೆ ಎಂಬ ಪ್ರಶ್ನೆ ಜಿಲ್ಲಾ ವರ್ತಕರ ಸಂಘದ ಅಧ್ಯಕ್ಷ ಐರೋಡಿ ಸಹನಶೀಲ ಪೈ ಅವರದು.