ಕುಷ್ಟಗಿ: ಓಮಿಕ್ರಾನ್ ವೈರಸ್ ನಿಯಂತ್ರಿಸಲು ಜಾರಿಯಲ್ಲಿರುವ ವಾರಂತ್ಯದ ಕರ್ಪ್ಯೂ ಹೊರತಾಗಿಯೂ ಭಾನುವಾರ ಬೆಳಗಿನ ಜಾವ ಚುಟುಕು ವ್ಯವಹಾರದ ತರಕಾರಿ ಖರೀದಿ ಪ್ರಕ್ರಿಯೆ ಕಂಡು ಬಂತು.
ಓಮಿಕ್ರಾನ್ ವೈರಸ್ ಭೀತಿಗಿಂತ ಪೊಲೀಸರು ಲಾಠಿ ಹಿಡಿದು ಬರುತ್ತಾರೆನ್ನುವ ಹೆದರಿಕೆಯೇ ಹೆಚ್ಚಿತ್ತು. ಹೀಗಾಗಿ ಬೆಳ್ಳಂ ಬೆಳಗ್ಗೆ ಕೆಲ ರೈತಾಪಿ ವರ್ಗ ತರಕಾರಿ, ಸೊಪ್ಪುಗಳನ್ನು ತಂದು ಅಡ್ಡಾದಿಡ್ಡಿ ಬೆಲೆಗೆ ಖರೀದಿದಾರರಿಗೆ ಮಾರಾಟ ಮಾಡಿ ತಮ್ಮ ಊರುಗಳತ್ತ ಮುಖಮಾಡುತ್ತಿರುವುದು ಬೆಳಗಿನ ಜಾವ 6.30ಕ್ಕೆ ಕಂಡು ಬಂತು.
ರೈತರು- ಮದ್ಯವರ್ತಿಗಳ ಖರೀದಿ ವೇಳೆ ಜನರಲ್ಲಿ ಓಮಿಕ್ರಾನ್ ವೈರಸ್ ಭಯವಿಲ್ಲದೇ ವ್ಯವಹಾರದಲ್ಲಿ ನಿರತರಾಗಿದ್ದರು. ಮಾಸ್ಕ್, ಸಾಮಾಜಿಕ ಅಂತರ ಇದ್ಯಾವುದರ ಬಗ್ಗೆ ಅರಿವಿಲ್ಲದೇ ಓಡಾಡಿಕೊಂಡಿದ್ದರು.
ವಾರಾಂತ್ಯದ ಕರ್ಪ್ಯೂ ಹಿನ್ನೆಲೆಯಲ್ಲಿ ಭಾನುವಾರ ಸಂತೆಯನ್ನು ತಾಲೂಕಾಡಳಿತ ರದ್ದುಗೊಳಿಸಿದ ಹಿನ್ನೆಲೆಯಲ್ಲಿ ಗ್ರಾಹಕರು ಖರೀದಿಗೆ ಬರುವುದಿಲ್ಲ ತಾವು ಬೆಳೆದ ಉತ್ಪನ್ನಕ್ಕೆ ಯೋಗ್ಯ ಬೆಲೆ ಸಿಗುವುದಿಲ್ಲ. ಮದ್ಯವರ್ತಿಗಳು ರೈತರಿಂದ ಕಡಿಮೆ ಬೆಲೆ ಖರೀದಿಸಿ ಹೆಚ್ಚಿನ ಬೆಲೆಗೆ ಗ್ರಾಹಕರಿಗೆ ಮಾರಾಟ ಮಾಡುತ್ತಾರೆ ಎನ್ನುವುದು ಗೊತ್ತಾಗಿಯೇ ಬಹುತೇಕ ರೈತರು, ತರಕಾರಿ ಉತ್ಪನ್ನ ಸಂತೆಗೆ ತರಲು ಇಚ್ಚಿಸಿರಲಿಲ್ಲ ಹೀಗಾಗಿ ಭಾನುವಾರದ ಬದಲಿಗೆ ಸೋಮವಾರದಿಂದ ಶುಕ್ರವಾರದ ಸಡಿಲಿಕೆ ವೇಳೆ ಮಾರಾಟ ಮಾಡಲು ನಿರ್ಧರಿಸಿರುವ ವಿಚಾರ ಗೊತ್ತಾಗಿದೆ.
ಭಾನುವಾರದ ವಾರದ ಸಂತೆ, ಜಾನುವಾರು ಸಂತೆ ರದ್ದಾಗಿದ್ದು, ಅಂಗಡಿ ಮುಗ್ಗಟ್ಟುಗಳು ಮುಚ್ಚಿದ್ದವು. ಕೆಲ ಹೋಟೆಲ್ ನಲ್ಲಿ ಉಪಹಾರ ಪಾರ್ಸೆಲ್ ಮಾರಾಟದ ದೃಶ್ಯ ಕಂಡು ಬಂತು.