“ವೆಡ್ಡಿಂಗ್ ಗಿಫ್ಟ್’ ಹೀಗೊಂದು ಚಿತ್ರ ಸಖತ್ ಫಾಸ್ಟ್ ಆಗಿ ಒಂದೇ ಶೆಡ್ನೂಲ್ ನಲ್ಲಿ ಒಂದೂವರೆ ತಿಂಗಳಲ್ಲಿ ತನ್ನ ಚಿತ್ರೀಕರಣವನ್ನು ಮುಗಿಸಿದೆ. ಈಗ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಮೊದಲ ಹಂತವಾಗಿ ಚಿತ್ರತಂಡ ಚಿತ್ರದ ಆಡಿಯೋ ಬಿಡುಗಡೆ ಮಾಡಿದೆ.
ವಿಕ್ರಂ ಪ್ರಭು ನಿರ್ಮಿಸಿ, ನಿರ್ದೇಶಿಸುತ್ತಿರುವ ಮೊದಲ ಚಿತ್ರ ಇದಾಗಿದ್ದು, ನಟಿ ಪ್ರೇಮಾ ಚಿತ್ರದ ಆಡಿಯೋ ಲಾಂಚ್ ಮಾಡಿದರು. “ವೆಡ್ಡಿಂಗ್ ಗಿಫ್ಟ್’ನಲ್ಲಿ ನಟಿ ಪ್ರೇಮಾ ಡೈನಾಮಿಕ್ ಲಾಯರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
“ಪ್ರತಿಯೊಂದು ಚಿತ್ರವನ್ನು ಮಾಡುವಾಗಲೂ ನಾನು ಒಬ್ಬ ಹೊಸ ಕಲಾವಿದೆ ಅನ್ನುವ ರೀತಿ ಕೆಲಸವನ್ನು ನಿರ್ವಹಿಸುತ್ತೇನೆ. ಇದು ಹೊಸಬರ ತಂಡವಾದರು ಅಚ್ಚುಕಟ್ಟಾಗಿ ನಿರ್ವಹಿಸಿದೆ. ಇವರ ಜೊತೆಗಿನ ಕೆಲಸ, ಚಿತ್ರ ಕಥೆ ಎಲ್ಲವೂ ನನಗೆ ತುಂಬಾ ಇಷ್ಟವಾಯಿತು. ಓರ್ವ ವಕೀಲೆಯಾಗಿ ನಾನು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಕೋರ್ಟ್ ಡ್ರಾಮಾ, ವಾಗ್ವಾದವನ್ನು ಚಿತ್ರದಲ್ಲಿ ಕಾಣಬಹುದು’ ಎಂಬುದು ಪ್ರೇಮಾ ಅವರ ಮಾತು.
ಇನ್ನು ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ವಿಕ್ರಂ ಪ್ರಭು “ಕನ್ನಡ ಚಿತ್ರವನ್ನು ನಿರ್ಮಿಸುವ ಮಹದಾಸೆ ನನ್ನನ್ನು ಪುಣೆಯಿಂದ ಬೆಂಗಳೂರಿನವರೆಗೆ ಕರೆತಂದಿತು. ಚಿತ್ರಕ್ಕೆ ಕಾನೂನಿನ ಅಡಿಪಾಯವನ್ನಿಟ್ಟು ಕಥೆಯನ್ನು ಹೆಣೆದಿದ್ದೇವೆ. ಮಹಿಳೆಯರಿಗಾಗಿ ಮೀಸಲಾದ ಕಾನೂನುಗಳನ್ನು ಕೆಲ ಹೆಣ್ಣು ಮಕ್ಕಳು ಹೇಗೆ ಅದರ ನ್ಯೂನ್ಯತೆಯನ್ನು ಗಂಡಂದಿರ ವಿರುದ್ಧ ದುರುಪಯೋಗ ಪಡಿಸಿಕೊಳ್ಳುತ್ತಾರೆ ಎಂಬುದು “ವೆಡ್ಡಿಂಗ್ ಗಿಫ್ಟ್’ನ ಒಂದು ಎಳೆ ಎಂದರು. ಚಿತ್ರ ವಿಭಿನ್ನವಾದ ಕಥೆಯನ್ನು ಹೊಂದಿದ್ದು, ಪ್ರೇಮ ಕಥೆಯಿಂದ ಥ್ರಿಲ್ಲರ್ ಕಥೆಯಾಗಿ ಪರಿವರ್ತನೆಗೊಳ್ಳಲಿದೆ’ ಎಂದರು.
ನಿಶಾನ್ ನಾಣಯ್ಯ, ಸೋನು ಗೌಡ, ನಾಯಕ, ನಾಯಕಿಯಾಗಿ ಕಾಣಿಸಿ ಕೊಂಡಿದ್ದಾರೆ. ಪ್ರೇಮಾ, ಅಚ್ಯುತ್ ಕುಮಾರ್, ಪವಿತ್ರ ಲೊಕೇಶ್ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದಾರೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು, ಬಾಲಚಂದ್ರ ಪ್ರಭು ಸಂಗೀತ ಸಂಯೋಜನೆ ಮಾಡಿದ್ದಾರೆ. ಉದಯ್ ಲೀಲಾ ಛಾಯಾಗ್ರಹಣ, ವಿಜೇತ್ ಚಂದ್ರಾ ಸಂಕಲನ, ಸಂಜಯ್ ಶರ್ಮ, ಅಭಯ್ ದೇವ್ ಪುರಿ, ಆಶಿಶ್ ಪವಾಸ್ಕರ್ ಸಂಭಾಷಣೆ ಚಿತ್ರಕ್ಕಿದೆ.
ಬೆಂಗಳೂರು ಸೇರಿದಂತೆ ತುಮಕೂರು, ದೇವರಾಯನ ದುರ್ಗ, ಉಡುಪಿ, ಮಂಗಳೂರಿನಲ್ಲಿ ಚಿತ್ರೀಕರಣ ನಡೆದಿವೆ. ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಚಿತ್ರವನ್ನು ಜೂನ್ ಮೊದಲ ವಾರದಲ್ಲಿ ಬಿಡುಗಡೆ ಮಾಡುವ ಯೋಚನೆ ಚಿತ್ರತಂಡದ್ದು.
ವಾಣಿ ಭಟ್ಟ