Advertisement

ಗ್ರಾಮದ ಸಮಸ್ಯೆ ಪರಿಹಾರಕ್ಕೆ  ಜಾಲತಾಣ

10:48 AM Nov 25, 2018 | |

ಬೆಳಂದೂರು: ತಮ್ಮ ಆಸುಪಾಸಿನಲ್ಲಿ ಯಾವುದಾದರೂ ಸಮಸ್ಯೆ ಇದ್ದರೆ ಯಾರಿಗೆ ತಿಳಿಸುವುದು, ಸಮಸ್ಯೆ ಪರಿಹಾರಕ್ಕೆ ಏನು ಮಾಡಬಹುದು, ತಮ್ಮೂರಿನ ಗ್ರಾ.ಪಂ.ನಲ್ಲಿ ಏನೆಲ್ಲ ಚಟುವಟಿಕೆ ನಡೆಯುತ್ತಿದೆ, ಯಾವ ಸೌಲಭ್ಯಗಳಿವೆ, ಅದನ್ನು ಪಡೆಯಲು ಯಾವ ದಾಖಲೆ ಬೇಕು ಎನ್ನುವ ಮಾಹಿತಿ ಎಲ್ಲರಿಗೂ ದೊರಕುವುದು ಹಾಗೂ ಮಾಹಿತಿ ನೀಡುವುದು ಸ್ವಲ್ಪ ಕಷ್ಟವೇ ಇದಕ್ಕಾಗಿ ಬೆಳಂದೂರು ಗ್ರಾ.ಪಂ. ಹೊಸ ಅವಕಾಶವೊಂದನ್ನು ಸೃಷ್ಟಿಸಿದೆ.

Advertisement

ಸಾಮಾನ್ಯ ಜನರೂ ಬಳಸುತ್ತಿರುವ ಸಾಮಾಜಿಕ ಜಾಲತಾಣವಾದ ವಾಟ್ಸ್‌ ಆ್ಯಪ್‌ ಮೂಲಕ ಗ್ರಾ.ಪಂ. ವ್ಯಾಪ್ತಿಯ ಸಂಘ ಸಂಸ್ಥೆಗಳ ಪ್ರಮುಖರು, ಗ್ರಾ.ಪಂ. ಸದಸ್ಯರು, ಅಭಿವೃದ್ಧಿ ಅಧಿಕಾರಿಗಳು, ಗ್ರಾ.ಪಂ. ಸಿಬಂದಿ, ಮಾಧ್ಯಮ ಪ್ರತಿನಿಧಿಗಳ ಸಹಿತ ಸಾಮಾನ್ಯರನ್ನೂ ಸೇರಿಸಿಕೊಂಡು “ನಮ್ಮ ಬೆಳಂದೂರು ಗ್ರಾಮ ಪಂಚಾಯತ್‌’ ಎನ್ನುವ ಗ್ರೂಪ್‌ ಮಾಡಿ ಸಾರ್ವಜನಿಕರಿಗೆ ಹೊಸ ಅವಕಾಶ ಕಲ್ಪಿಸಲಾಗಿದೆ.

ವೇಗದ ಯುಗದಲ್ಲಿ ಇಂಟರ್ನೆಟ್‌ ಮೂಲಕ ರಾಜ್ಯದ, ಜಿಲ್ಲೆಯ ಪ್ರಮುಖ ಬೆಳವಣಿಗೆಗಳು ಗ್ರಾಮೀಣ ಭಾಗಕ್ಕೂ ತಲುಪುತ್ತದೆ. ಆದರೆ ಗ್ರಾ.ಪಂ. ವ್ಯಾಪ್ತಿಯ ಸಮಸ್ಯೆಯನ್ನು ಗ್ರಾ.ಪಂ. ಆಡಳಿತಕ್ಕೆ ತಿಳಿಸಲು ಮುಖತಃ ಭೇಟಿ, ದೂರವಾಣಿ ಮೂಲಕ ತಿಳಿಸಬೇಕಾಗುತ್ತದೆ. ಆದರೆ ಬೆಳಂದೂರು ಗ್ರಾ.ಪಂ.ನ ಆಡಳಿತ ವಾಟ್ಸ್‌ ಆ್ಯಪ್‌ ಗುಂಪಿನ ಮೂಲಕ ಸಮಸ್ಯೆ ತಿಳಿಸಲು ಅವಕಾಶ ಮಾಡಿಕೊಟ್ಟಿದೆ. ಅದರಂತೆ ಗ್ರಾ.ಪಂ.ವ್ಯಾಪ್ತಿಯ ಕುಡಿಯುವ ನೀರಿನ ಸಮಸ್ಯೆ, ಬೀದಿ ದೀಪಗಳ ನಿರ್ವಹಣೆ, ರಸ್ತೆ ಸಮಸ್ಯೆಯನ್ನು ಈ ಗ್ರೂಪ್‌ನಲ್ಲಿ ತಿಳಿಸಿದರೆ ತತ್‌ಕ್ಷಣ ಸಮಸ್ಯೆ ಪರಿಹಾರಕ್ಕೆ ಗ್ರಾ.ಪಂ. ಆಡಳಿತ ಮುಂದಾಗುತ್ತದೆ. ಸಂಬಂದಪಟ್ಟ ವಾರ್ಡ್‌ನ ಸದಸ್ಯರೂ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುತ್ತಾರೆ. ಗ್ರಾಮಸ್ಥರು ಸಮಸ್ಯೆ ಕುರಿತು ಫೋಟೋ ಸಹಿತ ವಿವರಣೆ ನೀಡಿದರೆ ಸಮಸ್ಯೆ ಪರಿಹಾರವಾದ ಕೂಡಲೇ ಗ್ರಾ.ಪಂ. ಕಡೆಯಿಂದ ಸಮಸ್ಯೆ ಪರಿಹಾರದ ಫೋಟೋ ಸಹಿತ ವಿವರಣೆ ನೀಡಲಾಗುತ್ತದೆ.

ರಾಜಕೀಯ ವಿಚಾರ ಇಲ್ಲ
ಈ ಗ್ರೂಪ್‌ನಲ್ಲಿ ಯಾವುದೇ ರಾಜಕೀಯ ಸಂಬಂಧಿತ ವಿಚಾರಗಳನ್ನು ಹಾಕುವಂತಿಲ್ಲ ಎನ್ನುವ ಕಟ್ಟಪ್ಪಣೆ ಇದೆ. ಸಾರ್ವಜನಿಕರೂ ಅದನ್ನು ಪಾಲನೆ ಮಾಡಬೇಕು. ರಾಜಕೀಯ ವಿಚಾರ ಹಾಕಿದರೆ ಇತರರೂ ಗ್ರೂಪಿನ ಉದ್ದೇಶವನ್ನು ಪುನರ್‌ ಉಚ್ಚರಿಸುತ್ತಾರೆ.

ಇಲಾಖೆ, ಸಭೆಯ ಮಾಹಿತಿ
ಈ ವಾಟ್ಸ್‌ ಆ್ಯಪ್‌ ಗ್ರೂಪ್‌ನಲ್ಲಿ ಸಮಸ್ಯೆ ಪರಿಹಾರದ ಜತೆಗೆ ಇಲಾಖಾ ಮಾಹಿತಿ, ಗ್ರಾಮಸಭೆ, ವಾರ್ಡ್‌ ಸಭೆ ಸಹಿತ ಗ್ರಾ.ಪಂ.ಗೆ ಸಂಬಂಧಪಟ್ಟ ಎಲ್ಲ ಮಾಹಿತಿಗಳನ್ನೂ ತಿಳಿಸಲಾಗುತ್ತದೆ. ಈ ಮೂಲಕ ಮಾಹಿತಿ ಒಬ್ಬರಿಂದ ಇನ್ನೊಬ್ಬರಿಗೆ ತಿಳಿಯಲು ಸಹಕಾರಿಯಾಗುತ್ತದೆ ಎನ್ನುವುದು ಗ್ರಾ.ಪಂ. ಆಡಳಿತದ ಆಲೋಚನೆಯಾಗಿದೆ. 

Advertisement

ಜನ ಸ್ಪಂದನೆಯ ಗ್ರೂಪ್‌
ಜನರ ಸಮಸ್ಯೆ ತಿಳಿಯಲು ಹಾಗೂ ಗ್ರಾ.ಪಂ.ಗೆ ಒಳಪಟ್ಟ ವಿಚಾರಗಳ ಕುರಿತು, ಸಭೆ, ಸವಲತ್ತುಗಳು ಎಲ್ಲರಿಗೂ ತಿಳಿಯುವಂತಾಗಲು ಸಾಮಾಜಿಕ ಜಾಲತಾಣ ವಾಟ್ಸ್‌ ಆ್ಯಪ್‌ ಅನ್ನು ಬಳಸಿಕೊಳ್ಳುತ್ತಿದ್ದೇವೆ. ಸಾರ್ವಜನಿಕರು ಪೂರಕವಾಗಿ ಸ್ಪಂದಿಸುತ್ತಿದ್ದಾರೆ. ಈ ಗ್ರೂಪ್‌ ಮೂಲಕ ತಿಳಿಸಿದ ಸಮಸ್ಯೆಗಳನ್ನು ಪರಿಹಾರ ಮಾಡಲಾಗಿದೆ.
ಉಮೇಶ್ವರಿ ಅಗಳಿ
 ಬೆಳಂದೂರು ಗ್ರಾ.ಪಂ. ಅಧ್ಯಕ್ಷರು 

 ಪ್ರವೀಣ್‌ ಚೆನ್ನಾವರ 

Advertisement

Udayavani is now on Telegram. Click here to join our channel and stay updated with the latest news.

Next