Advertisement

ಸ್ಯಾಂಡಲ್‌ವುಡ್‌ನ‌ಲ್ಲಿ ವೆಬ್‌ ಸೀರಿಸ್‌ ಟ್ರೆಂಡ್‌

12:01 PM Oct 19, 2019 | mahesh |

ಕನ್ನಡದಲ್ಲಿ ಇನ್ನೂ ವೆಬ್‌ ಸೀರಿಸ್‌ಗಳಿಗೆ ಮಾರುಕಟ್ಟೆ, ಪ್ರೇಕ್ಷಕ ವರ್ಗ ಸೃಷ್ಟಿಯಾಗಿಲ್ಲ. ಇವೆಲ್ಲದರ ನಡುವೆಯೂ ಇತ್ತೀಚೆಗೆ ಕನ್ನಡದಲ್ಲೂ ಅನೇಕ ಹೊಸ ಪ್ರತಿಭೆಗಳು ವೆಬ್‌ ಸೀರಿಸ್‌ನತ್ತ ಮುಖ ಮಾಡುತ್ತಿದ್ದು, ಒಂದಷ್ಟು ಹೊಸ ಪ್ರಯೋಗಗಳಿಗೆ ಮುಂದಾಗುತ್ತಿದ್ದಾರೆ…

Advertisement

ಇತ್ತೀಚೆಗೆ ಹಿಂದಿ, ತೆಲುಗು, ತಮಿಳಿನಲ್ಲಿ ಸಿನಿಮಾಗಳಷ್ಟೇ ದೊಡ್ಡ ಪ್ರಮಾಣದಲ್ಲಿ ಸದ್ದು ಮಾಡುತ್ತಿರುವುದು ವೆಬ್‌ ಸೀರಿಸ್‌ಗಳು. ಅದರಲ್ಲೂ ಹಿಂದಿ ಮತ್ತು ತೆಲುಗಿನಲ್ಲಿ ಕಳೆದ ಎರಡು ಮೂರು ವರ್ಷಗಳಿಂದ ಈಚೆಗೆ ಯಾವ ಸಿನಿಮಾಗಳಿಗೂ ಕಡಿಮೆಯಿಲ್ಲದೆ, ಸ್ಟಾರ್ ಸಿನಿಮಾಗಳಿಗೇ ಪೈಪೋಟಿ ನೀಡುವಷ್ಟರ ಮಟ್ಟಿಗೆ ವೆಬ್‌ ಸೀರಿಸ್‌ಗಳು ಜನಪ್ರಿಯವಾಗುತ್ತಿವೆ. ಈಗಾಗಲೇ ಹಿಂದಿ, ತೆಲುಗು, ತಮಿಳು ಭಾಷೆಗಳ ವೆಬ್‌ ಸೀರಿಸ್‌ಗಳತ್ತ ಬಹುದೊಡ್ಡ ಸಂಖ್ಯೆಯಲ್ಲಿ ಪ್ರೇಕ್ಷಕರು ಆಕರ್ಷಿತರಾಗುತ್ತಿದ್ದು, ಈ ಎಲ್ಲಾ ಭಾಷೆಗಳಲ್ಲಿ ವೆಬ್‌ ಸೀರಿಸ್‌ಗಳು ತಮ್ಮದೇ ಆದ ಮಾರುಕಟ್ಟೆಯನ್ನು ಸೃಷ್ಟಿಸಿಕೊಳ್ಳಲು ಯಶಸ್ವಿಯಾಗಿವೆ.

ಆದರೆ ಕನ್ನಡದ ಮಟ್ಟಿಗೆ, ವೆಬ್‌ ಸೀರಿಸ್‌ಗಳಿಗೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮಾರುಕಟ್ಟೆ ಇಲ್ಲವಾದರೂ, ಕಳೆದ ಎರಡು ವರ್ಷಗಳಿಂದ ನಿಧಾನವಾಗಿ ಈ ಮಾರುಕಟ್ಟೆ ವಿಸ್ತರಣೆಯಾಗುತ್ತಿದೆ ಅನ್ನೋದೆ ಸಮಾಧಾನಕರ ಸಂಗತಿ. ಐದಾರು ವರ್ಷಗಳ ಹಿಂದೆ ಶಾರ್ಟ್‌ಫಿಲ್ಮ್ಸ್ ಮೂಲಕ ತಮ್ಮ ಪ್ರತಿಭೆಯನ್ನು ಓರೆಗೆ ಹಚ್ಚುತ್ತಿದ್ದ ಹೊಸ ಪ್ರತಿಭೆಗಳು, ಈಗ ವೆಬ್‌ ಸೀರಿಸ್‌ ನಿರ್ಮಾಣದತ್ತ ಆಸಕ್ತರಾಗುತ್ತಿದ್ದಾರೆ.
ಮೂರ್‍ನಾಲ್ಕು ವರ್ಷಗಳ ಹಿಂದೆ ಕನ್ನಡ ವೆಬ್‌ ಸೀರಿಸ್‌ಗಳ ಸಂಖ್ಯೆ ಬೆರಳೆಣಿಕೆಯಷ್ಟಿದ್ದರೆ, ಈಗ ಈ ವೆಬ್‌ ಸೀರಿಸ್‌ಗಳ ಸಂಖ್ಯೆ ವರ್ಷಕ್ಕೆ ಎರಡಂಕಿವರೆಗೆ ತಲುಪಿದೆ.

ಇನ್ನು ಬಾಲಿವುಡ್‌ನ‌ಲ್ಲೂ ಈಗಾಗಲೇ ಅನೇಕ ನಿರ್ಮಾಪಕರು, ನಿರ್ದೇಶಕರು ವೆಬ್‌ ಸೀರಿಸ್‌ಗಳ ನಿರ್ಮಾಣದತ್ತ ಆಸಕ್ತರಾಗುತ್ತಿದ್ದು, ಹಿಂದಿಯಲ್ಲಿ ಒಂದರ ಹಿಂದೊಂದು ವೆಬ್‌ ಸೀರಿಸ್‌ಗಳು ರಿಲೀಸ್‌ ಆಗುತ್ತಿವೆ. ಕನ್ನಡದಲ್ಲಿ ಕೂಡ ನಟ ಶಿವರಾಜಕುಮಾರ್‌ ಪುತ್ರಿ ನಿರ್ಮಾಣದಲ್ಲಿ ಈಗಾಗಲೇ ವೆಬ್‌ ಸೀರಿಸ್‌ ನಿರ್ಮಾಣಗೊಂಡಿದ್ದು, ನಿರ್ದೇಶಕ ಪವನ್‌ ಒಡೆಯರ್‌, ಯೋಗರಾಜ್‌ ಭಟ್‌ ಸೇರಿದಂತೆ ಅನೇಕರು ವೆಬ್‌ ಸೀರಿಸ್‌ ನಿರ್ಮಾಣದತ್ತ ಆಸಕ್ತರಾಗಿದ್ದಾರೆ.

ಒಟ್ಟಾರೆ ಸದ್ಯದ ಮಟ್ಟಿಗಂತೂ ಕನ್ನಡದಲ್ಲಿ ಇನ್ನೂ ಹೇಳಿಕೊಳ್ಳುವಷ್ಟರ ಮಟ್ಟಿಗೆ ವೆಬ್‌ ಸೀರಿಸ್‌ಗಳಿಗೆ ಮಾರುಕಟ್ಟೆ, ಪ್ರೇಕ್ಷಕ ವರ್ಗ ಸೃಷ್ಟಿಯಾಗಿಲ್ಲ. ಇವೆಲ್ಲದರ ನಡುವೆಯೂ ಇತ್ತೀಚೆಗೆ ಕನ್ನಡದಲ್ಲೂ ಅನೇಕ ಹೊಸ ಪ್ರತಿಭೆಗಳು ವೆಬ್‌ ಸೀರಿಸ್‌ನತ್ತ ಮುಖ ಮಾಡುತ್ತಿದ್ದು, ಒಂದಷ್ಟು ಹೊಸ ಪ್ರಯೋಗಗಳಿಗೆ ಮುಂದಾಗುತ್ತಿದ್ದಾರೆ. ವೆಬ್‌ ಸೀರಿಸ್‌ಗಳ ಮಹತ್ವ ಅರಿತಿರುವ ಕನ್ನಡ ಹಲವು ಕಲಾವಿದರು, ನಿರ್ಮಾಪಕರು, ನಿರ್ದೇಶಕರು ಇವುಗಳ ಬಗ್ಗೆ ಆಸಕ್ತಿ ತೋರಿಸುತ್ತಿರುವುದು, ಭವಿಷ್ಯದಲ್ಲಿ ಕನ್ನಡ ವೆಬ್‌ ಸೀರಿಸ್‌ಗಳಿಗೂ ದೊಡ್ಡ ಮಾರುಕಟ್ಟೆ, ಪ್ರೇಕ್ಷಕ ವರ್ಗ ಸೃಷ್ಟಿಯಾಗಲಿದೆ ಅನ್ನೋ ಭರವಸೆಯ ಮಾತುಗಳನ್ನಾಡುತ್ತಾರೆ.

Advertisement

ಇತ್ತೀಚೆಗೆ ಕನ್ನಡದಲ್ಲಿ ಹೊಸಬರು ವೆಬ್‌ ಸೀರಿಸ್‌ಗಳತ್ತ ಆಸಕ್ತರಾಗುತ್ತಿರುವುದು ಒಳ್ಳೆಯ ಬೆಳವಣಿಗೆ. ಒಂದು ಸಿನಿಮಾ ಮಾಡೋದಕ್ಕೆ ಸಾಕಷ್ಟು ಕಟ್ಟುಪಾಡುಗಳಿರುತ್ತವೆ. ಅದನ್ನೆಲ್ಲ ದಾಟಿ ಹೊಸಬರು ಏಕಾಏಕಿ ಸಿನಿಮಾ ಮಾಡೋದು ಕಷ್ಟ. ಅಂಥವರಿಗೆ ವೆಬ್‌ ಸೀರಿಸ್‌ಗಳು ತಮ್ಮನ್ನು ಗುರುತಿಸಿಕೊಳ್ಳೋದಕ್ಕೆ, ತಮ್ಮ ಪ್ರೊಫೈಲ್‌ ಬಿಲ್ಡ್‌ ಮಾಡಿಕೊಳ್ಳೋದಕ್ಕೆ ಒಳ್ಳೆಯ ಪ್ಲಾಟ್‌ಫಾರ್ಮ್. ಆದ್ರೆ ಇಲ್ಲಿ ಪಾಸಿಟಿವ್‌, ನೆಗೆಟಿವ್‌ ಎರಡೂ ಇದೆ. ಒಳ್ಳೆಯ ಕಟೆಂಟ್‌ ಇಟ್ಟುಕೊಂಡು ಗೆಲ್ಲಲೂಬಹುದು, ಲಂಗು-ಲಗಾಮಿಲ್ಲದೆ ಮಾಡಿದ್ರೆ ಬೀಳಲೂಬಹುದು. ಆದಷ್ಟು ಇರುವ ಇಂಥ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳುವುದು ಒಳ್ಳೆಯದು.
ರಿಷಭ್‌ ಶೆಟ್ಟಿ, ನಿರ್ದೇಶಕ ಮತ್ತು ನಿರ್ಮಾಪಕ

ಒಂದು ಕಥೆಯನ್ನು ಸಿನಿಮಾದಲ್ಲಿ ಎರಡೂವರೆ ಗಂಟೆಯಲ್ಲಿ ಹೇಳ್ಳೋದನ್ನ, ವೆಬ್‌ ಸೀರಿಸ್‌ನಲ್ಲಿ ಇನ್ನೂ ಕುತೂಹಲಭರಿತವಾಗಿ ಎಂಟು-ಹತ್ತು ಎಪಿಸೋಡ್ಸ್‌ನಲ್ಲಿ ಹೇಳಬಹುದು. ಇವತ್ತು ಕೇಬಲ್‌ ಟಿವಿ ಚಂದದಾರರಿಗಿಂತ, ಮೊಬೈಲ್‌ ಫೋನ್‌ ಚಂದದಾರರ ಸಂಖ್ಯೆನೇ ಜಾಸ್ತಿ ಇರೋದ್ರಿಂದ ಮುಂದಿನ ದಿನಗಳಲ್ಲಿ ಫೋನ್‌ನಲ್ಲೇ ವೆಬ್‌ ಸೀರಿಸ್‌ ನೋಡುವ ದೊಡ್ಡ ಪ್ರೇಕ್ಷಕ ವರ್ಗ ಸೃಷ್ಟಿಯಾಗುತ್ತೆ. ಕನ್ನಡದಲ್ಲಿ ಇಂಥ ಪ್ರಯತ್ನ ಆಗುತ್ತಿರುವುದು ಒಳ್ಳೆಯ ಬೆಳವಣಿಗೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ವೆಬ್‌ ಸೀರಿಸ್‌ಗಳು ನಿರ್ಮಾಣವಾಗಬೇಕು. ಕನ್ನಡದ ಜನಪ್ರಿಯ ಕಥೆ, ಕಾದಂಬರಿಗಳನ್ನು ಇಟ್ಟುಕೊಂಡು ವೆಬ್‌ ಸೀರಿಸ್‌ ಮಾಡಿದ್ರೆ ಅವು ಖಂಡಿತ ಭವಿಷ್ಯದಲ್ಲಿ ಮೈಲಿಗಲ್ಲಾಗಿ ಉಳಿಯಲಿವೆ.
ಯೋಗರಾಜ್‌ ಭಟ್‌, ನಿರ್ದೇಶಕ

ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ಹೇಳ್ಳೋದಾದ್ರೆ, ಮುಂದಿನ ಕೆಲ ವರ್ಷಗಳಲ್ಲಿ ಥಿಯೇಟರ್‌ಗೆ ಹೋಗಿ ಸಿನಿಮಾ ನೋಡುವವರ ಸಂಖ್ಯೆಗಿಂತ, ವೆಬ್‌ ಸೀರಿಸ್‌ ನೋಡುವವರ ಸಂಖ್ಯೆಯೇ ದೊಡ್ಡದಾಗಿರುತ್ತದೆ. ಇವತ್ತು ವೆಬ್‌ ಸೀರಿಸ್‌ಗಳು ಒಳ್ಳೆಯ ಎಂಟರ್‌ಟೈನ್ಮೆಂಟ್‌ ಚಾನೆಲ್ಸ್‌ ಆಗುತ್ತಿವೆ. ಅವುಗಳಿಗೆ ಸ್ಕೋಪ್‌ ಜಾಸ್ತಿಯಾಗ್ತಿದೆ. ಅನೇಕ ಕಾರ್ಪೋರೆಟ್‌ ಕಂಪೆನಿಗಳು ವೆಬ್‌ ಸೀರಿಸ್‌ ಮಾಡೋದಕ್ಕೆ ಮುಂದೆ ಬರುತ್ತಿವೆ. ಇನ್ನು ಸಿನಿಮಾಗಳಿಗೆ ಇರುವಂಥ ಯಾವುದೇ ಚೌಕಟ್ಟುಗಳು ವೆಬ್‌ ಸೀರಿಸ್‌ಗೆ ಇಲ್ಲದಿರುವುದರಿಂದ, ಅಲ್ಲಿ ಒಬ್ಬ ಕ್ರಿಯೇಟರ್‌ನ ಕ್ರಿಯೇಟಿವಿಟಿಗೆ ಹೆಚ್ಚು ಸ್ಕೋಪ್‌ ಇರುತ್ತದೆ. ಪ್ರತಿಭಾನ್ವಿತರಿಗೆ ವೆಬ್‌ ಸೀರಿಸ್‌ ನಿಜಕ್ಕೂ ಒಳ್ಳೆಯ ವೇದಿಕೆ.
ಪವನ್‌ ಒಡೆಯರ್‌, ನಿರ್ದೇಶಕ

ಜಿ.ಎಸ್‌.ಕಾರ್ತಿಕ ಸುಧನ್‌

Advertisement

Udayavani is now on Telegram. Click here to join our channel and stay updated with the latest news.

Next