ದೊಡ್ಡಬಳ್ಳಾಪುರ: ಲಾಕ್‌ಡೌನ್ ಹಿನ್ನೆಲೆಯಲ್ಲಿ ನೇಕಾರರು ಸಂಕಷ್ಟಕ್ಕೀಡಾಗಿದ್ದು, ಸರ್ಕಾರ ಈ ಕೂಡಲೇ ತುರ್ತು ಪರಿಹಾರಕ್ಕೆ ಕ್ರಮಕೈಗೊಳ್ಳಬೇಕು. ಜೊತೆಗೆ ನೇಕಾರರ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ, ನೇಕಾರರ ಹಿತರಕ್ಷಣೆ ಸಮಿತಿ ನೇತೃತ್ವದಲ್ಲಿ ಉಪವಿಭಾಗಾಧಿಕಾರಿ ಅರುಳ್ ಕುಮಾರ್‌ಗೆ ಮನವಿ ಸಲ್ಲಿಸಲಾಯಿತು.
ನೇಕಾರರನ್ನು ತಡೆದ ಪೊಲೀಸರು: ಸೋಮವಾರ ಬೆಳಿಗ್ಗೆ 11 ಗಂಟೆಗೆ ಬೀರಸಂದ್ರದ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಲು ವಿವಿಧ ವಾಹನಗಳಲ್ಲಿ ತೆರಳುತ್ತಿದ್ದ ನೂರಾರು ನೇಕಾರರು ಹಾಗೂ ಮುಖಂಡರನ್ನು ರಘುನಾಥಪುರದ ಬಳಿ ಪೊಲೀಸರು ತಡೆದರು. ಕೊರೊನಾ ಲಾಕ್‌ಡೌನ್ ವಿಸ್ತರಣೆ ಇರುವುದರಿಂದ ಇಷ್ಟೊಂದು ಮಂದಿಯನ್ನು ತೆರಳಲುಬಿಡುವುದಿಲ್ಲ ಎಂದು ಅಡ್ಡ ಹಾಕಿದರು.
ಉಪವಿಭಾಗಾಧಿಕಾರಿಗೆ ಮನವಿ: ಇದಕ್ಕೆ ಪ್ರತಿಕ್ರಿಯಿಸಿದ ನೇಕಾರ ಮುಖಂಡರು, ನಾವು ಮನವಿ ಸಲ್ಲಿಸುವ ಕುರಿತಂತೆ ಸಭೆ ಸೇರಿದ್ದ ವೇಳೆ ಮೇ 17ಕ್ಕೆ ಲಾಕ್‌ಡೌನ್ ಅವಧಿ ಮುಗಿಯುವು ದಾಗಿ ಘೋಷಣೆಯಾಗಿತ್ತು. ಹೀಗಾಗಿ ಮನವಿ ಸಲ್ಲಿಸಲು ತೆರಳುತ್ತಿದ್ದೇವೆ. ನಿಯಮ ಮೀರಿಲ್ಲ ಎಂದು ಸ್ಪಷ್ಟಪಡಿಸಿದರು. ನೂರಾರು ನೇಕಾರರು ರಸ್ತೆಯಲ್ಲಿ ಸೇರಿದ್ದರಿಂದ ಕೆಲಕಾಲ ವಾಹನ ಸಂಚಾರಕ್ಕೆ ಅಡ್ಡಿಯಾಯಿತು.
ನಂತರ ಜಿಲ್ಲಾಧಿ ಕಾರಿಗಳೇ ಇಲ್ಲಿಗೆ ಬಂದು ನಮ್ಮ ಮನವಿ ಸ್ವೀಕರಿಸಲಿ ಎಂದು ನೇಕಾರ ಮುಖಂಡರು ಒತ್ತಾ ಯಿಸಿದಾಗ ಜಿಲ್ಲಾಧಿಕಾರಿ ಬದಲಿಗೆ ಉಪವಿಭಾಗಾಧಿಕಾರಿ ಅರುಳ್ ಕುಮಾರ್ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದರು. ಮನವಿ ಸಲ್ಲಿಸಿದ ನೇಕಾರ ಮುಖಂಡ ಪಿ.ಎ.ವೆಂಕಟೇಶ್ ಮಾತನಾಡಿ, ಕೊರೊನಾ ಪರಿಣಾಮ ನೇಕಾರಿಕೆಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕಚ್ಚಾ ಸಾಮಗ್ರಿಗಳ ಬೆಲೆ ಏರಿಕೆ, ರೇಷ್ಮೆ ಬೆಲೆ ಹೆಚ್ಚಳ, ನೇಯ್ದ ಬಟ್ಟೆಗಳಿಗೆ ಮಾರುಕಟ್ಟೆ ಇಲ್ಲ.
ನೇಕಾರರು ಆರ್ಥಿಕವಾಗಿ ದಿವಾಳಿಯಾಗುತ್ತಿದ್ದಾರೆ. ನೇಕಾರರಿಗೆ ನೆರವು ನೀಡಬೇಕೆನ್ನುವ ಮನವಿಯನ್ನು ಮುಖ್ಯಮಂತ್ರಿಗಳಾದಿಯಾಗಿ ಸಂಬಂಧಪಟ್ಟವರ ಗಮನಕ್ಕೆ ತರಲಾಗಿದೆ. ಆದರೆ ನೇಕಾರರಿಗೆ ತುರ್ತಾಗಿ ನೆರವು ದೊರೆತಿಲ್ಲ. ನೇಕಾರರ ಕುಟುಂಬಕ್ಕೆ ಮಾಸಿಕ 7.5 ಸಾವಿರ ಧನ ಸಹಾಯ ನೀಡಬೇಕು. ಉದ್ಯಮ ಚೇತರಿಸಿ ಕೊಳ್ಳುವವರೆಗೆ ವಿದ್ಯುತ್ ಬಿಲ್ (ಗೃಹ ಬಳಕೆಯೂ ಸೇರಿ) ಮನ್ನಾ ಸೇರಿ ಹಲವು ಬೇಡಿಕೆ ಈಡೇರಿಸಬೇಕು ಎಂದರು. ಮನವಿ ಸ್ವೀಕರಿಸಿದ ಉಪವಿಭಾಗಾಧಿಕಾರಿ ಅರುಳ್ ಕುಮಾರ್, ನೇಕಾರರ ಸಂಕಷ್ಟ ಮನವರಿಕೆಯಾಗಿದೆ.
ಕೈಗೊಳ್ಳಬಹುದಾದ ಕ್ರಮಗಳ ಕುರಿತು ಚರ್ಚಿಸಿ, ಜಿಲ್ಲಾಧಿಕಾರಿ ಗಳೊಂದಿಗೆ ಸಭೆ ನಡೆಸಿ, ಸಂಬಂಧಪಟ್ಟ ಸಚಿವರ ಹಾಗೂ ಮುಖ್ಯಮಂತ್ರಿ ಗಮನಕ್ಕೆ ತರಲಾಗುವುದು ಎಂದರು. ತಹಶೀಲ್ದಾರ್ ಟಿ.ಎಸ್.ಶಿವರಾಜ್, ನೇಕಾರರ ಹಿತರಕ್ಷಣೆ ಸಮಿತಿ ಕೆ.ಮಲ್ಲೇಶ್, ಎಸ್.ಅಶೋಕ್, ಎಂ.ಮುನಿರಾಜು, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಆರ್. ಚಂದ್ರತೇಜಸ್ವಿ, ಜಿಡಿಎಸ್ ಜಿಲ್ಲಾಧ್ಯಕ್ಷ ಬಿ.ಮುನೇಗೌಡ, ಕನ್ನಡ ಪಕ್ಷದ ಅಧ್ಯಕ್ಷ ಸಂಜೀವ್ ನಾಯಕ್, ಕಾರ್ಯದರ್ಶಿ ಡಿ.ಪಿ.ಆಂಜನೇಯ ಮತ್ತಿತರರು ಇದ್ದರು.