ಅಮೀನಗಡ: ಹೆಸ್ಕಾಂನಿಂದ ನೇಕಾರರಿಗೆ ನೀಡಲಾಗುತ್ತಿದ್ದ ರಿಯಾಯ್ತಿ ವಿದ್ಯುತ್ ರದ್ದು ಪಡಿಸಿರುವುದು ನಿಜ. ಈ ವಿಷಯದಲ್ಲಿ ನಾನು ರಾಜಕೀಯದ ದುರುದ್ದೇಶದಿಂದ ಹೇಳಿಕೆ ನೀಡಿಲ್ಲ. ಅನುಮಾನ ಇದ್ದವರು ಹೆಸ್ಕಾಂ ಕಚೇರಿಯ ದಾಖಲಾತಿ ಪರಿಶೀಲಿಸಬಹುದು ಎಂದು ಕೆಎಚ್‌ಡಿಸಿ ನಿಗಮ ಮಂಡಳಿ ಮಾಜಿ ಅಧ್ಯಕ್ಷ ರವೀಂದ್ರ ಕಲಬುರ್ಗಿ ಹೇಳಿದರು.
ಸೂಳೇಭಾವಿ ಗ್ರಾಮದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ನೇಕಾರರ ವಿದ್ಯುತ್ ರಿಯಾಯಿತಿ ರದ್ದು ಮಾಡಿರುವ ಕುರಿತು ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯ ಕಂದಾಯ ಮತ್ತು ಲೆಕ್ಕ ನಿಯಂತ್ರಣಾಧಿಕಾರಿ ಅವರು ಜೂ.1 ರಂದು ಹೊರಡಿಸಿರುವ ಆಂತರಿಕ ಕಚೇರಿ ಟಿಪ್ಪಣಿ ಆದೇಶದ ಅನುಸಾರವಾಗಿ ದಾಖಲಾತಿ ಇಟ್ಟುಕೊಂಡು ಹೇಳಿಕೆ ನೀಡಿದ್ದೇನೆ. ನೇಕಾರರ ವಿದ್ಯುತ್ ರಿಯಾಯತಿ ರದ್ದು ಮಾಡದೆ ಇದ್ದರೇ ಸಂತೋಷದ ವಿಷಯ. ರದ್ದು ಮಾಡದೇ ಇರುವ ಕುರಿತು ದಾಖಲಾತಿ ಬಿಡುಗಡೆ ಮಾಡಲಿ ಎಂದರು.
ಸರ್ಕಾರದ ಮೇಲೆ ಗೂಬೆ ಕೂರಿಸುವ ಉದ್ದೇಶದಿಂದ ಯಾವುದೇ ದಾಖಲಾತಿ ಇಲ್ಲದೇ ರವೀಂದ್ರ ಕಲಬುರ್ಗಿ ಅವರು ಹೇಳಿಕೆ ನೀಡಿದ್ದಾರೆ ಎಂದು ನೇಕಾರ ಮುಖಂಡರಾದ ಜಿ.ಎಸ್. ಗೊಂಬಿ ಮತ್ತು ಮನೋಹರ ಶಿರೋಳ ಅವರ ಹೇಳಿಕೆ ನನಗೆ ನೋವಾಗಿದೆ. ನೇಕಾರರ ಅಭಿವೃದ್ಧಿಗಾಗಿ ನಾನು ಜಿ.ಎಸ್. ಗೊಂಬಿ ಮತ್ತು ಮನೋಹರ ಶಿರೋಳ ಅವರು ಪಕ್ಷಾತೀತವಾಗಿ ಎಲ್ಲ ಸರ್ಕಾರ ಇದ್ದಾಗಲು ಜತೆ-ಜತೆಯಾಗಿ ಹಲವಾರು ಹೋರಾಟ ಮಾಡಿದ್ದೇವೆ. ಈಗ ಅವರಿಗೆ ಗೊಂದಲವಿದ್ದರೆ ಹೆಸ್ಕಾಂ ಕಚೇರಿಯ ದಾಖಲಾತಿ ಪರಿಶೀಲಿಸಬಹುದು. ಅದನ್ನು ಬಿಟ್ಟು ಏಕಾಏಕಿ ನೀಡಿರುವ ಹೇಳಿಕೆ ನನಗೆ ಬೇಸರವಾಗಿದೆ ಎಂದರು.
ಕೈಮಗ್ಗ ನೇಕಾರರ ಸಹಕಾರ ಸಂಘಗಳ ಮಹಾಮಂಡಳ ಜಿಲ್ಲಾಧ್ಯಕ್ಷ ವಿಷ್ಣು ಗೌಡರ ಮಾತನಾಡಿ, ನೇಕಾರರ ವಿಷಯದಲ್ಲಿ ರವೀಂದ್ರ ಕಲಬುರ್ಗಿ ಅವರು ಎಂದು ರಾಜಕಾರಣ ಮಾಡಿಲ್ಲ, ಪಕ್ಷಾತೀತವಾಗಿ ನೇಕಾರರ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಕೆಎಚ್‌ಡಿಸಿ ನಿಗಮ ಮಂಡಳಿ ಅಧ್ಯಕ್ಷರಾಗಿದ್ದಾಗ ಪ್ರತಿ ಹಳ್ಳಿ-ಹಳ್ಳಿಗೆ ಭೇಟಿ ನೀಡಿ ನೇಕಾರರ ಪರವಾಗಿ ಕೆಲಸ ಮಾಡಿದ್ದಾರೆ. ಅವರ ಬಗ್ಗೆ ನೇಕಾರ ಮುಖಂಡರಾದ ಜಿ.ಎಸ್. ಗೊಂಬಿ ಮತ್ತು ಮನೋಹರ ಶಿರೋಳ ಟೀಕೆ ಮಾಡಿದ್ದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದರು.
ನೇಕಾರರ ಮುಖಂಡರಾದ ರವೀಂದ್ರ ರಾಮದುರ್ಗ,ಶಂಕ್ರಣ್ಣ ಜನಿವಾರದ, ಜಗನ್ನಾಥ ಗಾಡಿ ಸೇರಿದಂತೆ ಇನ್ನಿತರರು ಇದ್ದರು.