ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಜವಳಿ ಕ್ಷೇತ್ರಕ್ಕೆ ಅಪಾರ ಅನುದಾನ ಒದಗಿಸಿದ್ದು,
ಅದನ್ನು ನೇಕಾರರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಕರೆ
ನೀಡಿದರು.
ನಗರದ ಡಾ| ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ 1039ನೇ ಅದ್ದೂರಿ ದೇವರ ದಾಸಿಮಯ್ಯನವರ ಜಯಂತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಧಾನಿ ಸಮಾಜವನ್ನು ಅಭಿವೃದ್ಧಿಪಡಿಸಲು ಸಾಕಷ್ಟು ಯೋಜನೆಗಳನ್ನು ನೀಡಿದ್ದಾರೆ. ಅಲ್ಲದೆ ಪ್ರತಿ ವರ್ಷ ನೇಕಾರರನ್ನು ಗೌರವಿಸಲು ಆಗಸ್ಟ್ 7 ರಂದು ನೇಕಾರರ ದಿನವೆಂದು ಘೋಷಣೆ ಮಾಡಿದ್ದಾರೆ. ಅಲ್ಲದೆ ಜವಳಿ ಕ್ಷೇತ್ರಕ್ಕೆ ಬಹಳಷ್ಟು ಅನುದಾನವನ್ನು ಕಳೆದ ಮೂರು ವರ್ಷಗಳಿಂದ ನೀಡುತ್ತಿದ್ದಾರೆ. ಅದನ್ನು ಬಳಸಿಕೊಂಡು ಸಮಾಜ ಅಭಿವೃದ್ಧಿ ಹೊಂದಬೇಕೆಂದರು.
ನಾನು ಕೂಡ ಈ ಸಮಾಜದ ಋಣ ತೀರಿಸಲು ಆಗುವುದಿಲ್ಲ. ಈ ಸಮಾಜ ಮಾನ ಮುಚ್ಚುವ ಕಾರ್ಯ ಶ್ಲಾಘನೀಯವಾದದ್ದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಉದ್ಘಾಟನೆ ನೆರವೇರಿಸಿದ ರಾಜ್ಯದ ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಮಾತನಾಡಿ, ಆದ್ಯ ವಚನಕಾರ ದೇವರ ದಾಸಿಮಯ್ಯನವರ ಜೀವನ ನಮಗೆಲ್ಲರಿಗೂ ಮಾದರಿ. ನಮ್ಮ ಸರ್ಕಾರ ಕಳೆದ ನಾಲ್ಕು ವರ್ಷಗಳಿಂದ ಸರಕಾರಿ ಕಾರ್ಯಕ್ರಮವನ್ನಾಗಿಸಿ ಆಚರಿಸುತ್ತಿದೆ. ನೇಕಾರ ಸಮಾಜದ ಸಪ್ತ ಜನಾಂಗಕ್ಕೆ ಸಾಮಾಜಿಕ ನ್ಯಾಯ ನೀಡುವಲ್ಲಿ ರಾಜ್ಯ ಸರ್ಕಾರ ಮೊದಲ ಆದ್ಯತೆ ನೀಡುತ್ತಿದೆ ಎಂದರು.
ಹಿರಿಯ ಸಾಹಿತಿ ಪ್ರೊ| ವಸಂತ್ ಕುಷ್ಟಗಿ ಉಪನ್ಯಾಸ ನೀಡಿ, ನೆರೆಯ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನಲ್ಲಿರುವ ದೇವರ ದಾಸಿಮಯ್ಯನವರ ಜನ್ಮ ಸ್ಥಳವಾದ ಮುದನೂರ ಅಭಿವೃದ್ಧಿಗೆ ಈಗಾಗಲೆ ಪ್ರಾಧಿಕಾರ ರಚನೆ ಆಗಬೇಕಾಗಿತ್ತು. ಇನ್ನು ಮುಂದಾದರೂ ಅಲಕ್ಷಿತ ಆದ್ಯ ವಚನಕಾರನ ಸಾಹಿತ್ಯವನ್ನು ಬೇರೆ ಭಾಷೆಗಳಲ್ಲಿ ಪ್ರಕಟಿಸಿ ಹೆಚ್ಚಿನ ಸಂಘಟನೆಯೊಂದಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಮುದನೂರ ಪ್ರಾಧಿಕಾರ ಹಾಗೂ ಅಧ್ಯಯನ ಕೇಂದ್ರ ಸ್ಥಾಪನೆಯಾಗುವಂತೆ ಒಗ್ಗಟ್ಟಿನಿಂದ ಒತ್ತಾಯಿಸಬೇಕೆಂದರು.
ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಚಂದ್ರಶೇಖರ ಸುಲ್ತಾನಪುರ್, ಒಕ್ಕೂಟದ ಕಾರ್ಯದರ್ಶಿ ರೇವಣಸಿದ್ದಪ್ಪ ಗಡ್ಡದ ಒಕ್ಕೂಟದ ರಾಜ್ಯ ಕಾರ್ಯಕಾರಿಣಿ ಸದಸ್ಯ ಹಾಗೂ ನ್ಯಾಯವಾದಿ ವಿನೋದಕುಮಾರ ಜನೆವರಿ ಹಾಜರಿದ್ದರು. ಇದಕ್ಕೂ ಮೊದಲು ಬೆಳಗ್ಗೆ 11 ಗಂಟೆಗೆ ಚೌಕ್ ಪೊಲೀಸ್ ಠಾಣೆಯಿಂದ ಪಂಡಿತ ರಂಗಮಂದಿರವರೆಗೆ ಅದ್ಧೂರಿ ಮೆರವಣಿಗೆ ಮಾಡಲಾಯಿತು.