Advertisement
ಹವಾಮಾನ ವೈಪರೀತ್ಯದ ಪರಿಣಾಮ ಮುಂದಿನ ದಿನಗಳಲ್ಲಿ ಬಿಸಿಲ ಝಳ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಆಗಸ್ಟ್‌ನಲ್ಲಿ ಸಾಮಾನ್ಯವಾಗಿ 30 ಡಿ.ಸೆ. ಆಸುಪಾಸಿನಲ್ಲಿ ಗರಿಷ್ಠ ತಾಪಮಾನ ಇರುತ್ತದೆ. ಆದರೆ ಮೂರು ವಾರಗಳಿಂದ ತಾಪಮಾನ ಏರಿಕೆಯಾಗುತ್ತಿದ್ದು, ಸರಾಸರಿ 32ರಿಂದ 33 ಡಿ.ಸೆ. ದಾಖಲಾಗುತ್ತಿದೆ. ವಾಡಿಕೆಗಿಂತ 3ರಿಂದ 4 ಡಿ.ಸೆ. ಹೆಚ್ಚುತ್ತಿರುವ ಉಷ್ಣಾಂಶ ಮಳೆ ಬರುವಿಕೆಯನ್ನು ಮತ್ತಷ್ಟು ದೂರ ಮಾಡಿದೆ. ಜೂನ್‌ನಲ್ಲಿ ಕರಾವಳಿಗೆ ಕಾಲಿಟ್ಟ ಮುಂಗಾರು ಕೆಲವೇ ದಿನಗಳಲ್ಲಿ ದುರ್ಬಲಗೊಂಡಿತ್ತು. ಇದರಿಂದಾಗಿ ವಾತಾವರಣದಲ್ಲಿ ನೀರಿನ ಅಂಶ ಕಡಿಮೆಯಾಗಿದ್ದು, ಉಷ್ಣಾಂಶ ಜಾಸ್ತಿಯಾಗಲು ಕಾರಣವಾಗಿದೆ.
ಹವಾಮಾನ ಇಲಾಖೆ ತಜ್ಞರ ಪ್ರಕಾರ ಇತ್ತೀಚಿನ ಕೆಲವು ವರ್ಷಗಳಿಗೆ ಹೋಲಿಸಿದರೆ ಆಗಸ್ಟ್‌ನಲ್ಲಿ ಮಳೆ ದೂರವಾಗಿ ಗರಿಷ್ಠ ಉಷ್ಣಾಂಶ ವಾಡಿಕೆಗಿಂತ ಹೆಚ್ಚಾಗುತ್ತಿರುವುದು ಇದೇ ಮೊದಲು. ಗರಿಷ್ಠ ಉಷ್ಣಾಂಶ ಕಡಿಮೆಯಾಗಲು ಮತ್ತು ಉತ್ತಮ ಮಳೆ ಸುರಿಯಲು ಹಿಂದೂ ಮಹಾಸಾಗರದಿಂದ ಅರಬಿ ಸಮುದ್ರದ ಮೂಲಕ ಮೋಡ ಸೃಷ್ಟಿಯಾಗಬೇಕು. ಆದರೆ ಕಳೆದೆರಡು ತಿಂಗಳಿನಿಂದ ಈ ಪ್ರಕ್ರಿಯೆ ನಡೆಯುತ್ತಿಲ್ಲ. ಸ್ಥಳೀಯ ಮೋಡ ಸೃಷ್ಟಿ ಸಾಧ್ಯತೆ
ವಾತಾವರಣದಲ್ಲಾದ ಬದಲಾವಣೆ ಯಿಂದಾಗಿ ಮುಂದಿನ ಕೆಲವು ದಿನಗಳ ಬಳಿಕ ಸ್ಥಳೀಯವಾಗಿ ಮೋಡ ಸೃಷ್ಟಿಯಾಗಿ ಮಳೆ ಸುರಿಯುವ ಸಾಧ್ಯತೆ ಇದೆ. ಕರಾವಳಿಯಲ್ಲಿ ಕಳೆದ ವರ್ಷವೂ ಇದೇ ರೀತಿಯ ವಾತಾವರಣ ನಿರ್ಮಾಣ ಆಗಿತ್ತು. ಜಿಲ್ಲೆಯ ಹೋಬಳಿ, ತಾಲೂಕು ವ್ಯಾಪ್ತಿಯೊಳಗೆ ವ್ಯಾಪಕ ಮಳೆಯಾಗುವ ಸನ್ನಿವೇಶ ಸೃಷ್ಟಿಯಾಗಿತ್ತು. ಗಾಳಿಯಲ್ಲಿ ವಾತಾವರಣದ ತೇವಾಂಶದಲ್ಲಾಗುವ ಬದಲಾವಣೆಯಿಂದ “ಲೋಕಲೈಸ್ಡ್ ಎಫೆಕ್ಟ್’ ಉಂಟಾಗಿತ್ತು.ಈ ಬಾರಿಯೂ ಇದೇ ರೀತಿಯ ವಾತಾವರಣ ಸೃಷ್ಟಿಯಾಗುವ ಸಾಧ್ಯತೆಯನ್ನು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
Related Articles
ಕರಾವಳಿಯಲ್ಲಿ ದಿನನಿತ್ಯದ ಗರಿಷ್ಠ ತಾಪಮಾನದಲ್ಲಿ ಪ್ರತೀ ದಿನ ಏರಿಳಿತವಾಗುತ್ತಿದೆ ಆ. 24ರಂದು 30.6 ಡಿ.ಸೆ. ದಾಖಲಾಗಿ ವಾಡಿಕೆಗಿಂತ 2 ಡಿ.ಸೆ. ಹೆಚ್ಚಳ, ಆ. 25ರಂದು 30.1 ಡಿ.ಸೆ. ದಾಖಲಾಗಿ ವಾಡಿಕೆಗಿಂತ 1 ಡಿ.ಸೆ. ಹೆಚ್ಚಳ, ಆ. 26ರಂದು 30.2 ಡಿ.ಸೆ. ದಾಖಲಾಗಿ 1 ಡಿ.ಸೆ. ಹೆಚ್ಚಳ, ಆ. 27ರಂದು 31.5 ಡಿ.ಸೆ. ದಾಖಲಾಗಿ 3 ಡಿ.ಸೆ. ಹೆಚ್ಚಳ, ಆ. 28ರಂದು 31.1 ಡಿ.ಸೆ. ದಾಖಲಾಗಿ 1 ಡಿ.ಸೆ. ಹೆಚ್ಚಳ ಇತ್ತು. ಆ. 29ರಂದು 30.6 ಡಿ.ಸೆ. ದಾಖಲಾಗಿ 2 ಡಿ.ಸೆ. ವಾಡಿಕೆಗಿಂತ ಹೆಚ್ಚು ಇತ್ತು.
Advertisement
ಮೋಡ ಸೃಷ್ಟಿಗೆ “ಎಲ್‌ನಿನೋ’ ತಡೆಅಟ್ಲಾಂಟಿಕ್ ಮಹಾಸಾಗರ ಮತ್ತು ಹಿಂದೂ ಮಹಾಸಾಗರದಲ್ಲಿ ಎಲ್‌ನಿನೋ ಪ್ರಭಾವದಿಂದ ಉಷ್ಣಾಂಶದಲ್ಲಿ ಏಕೆಯಾಗುತ್ತಿದೆ. ಇದರಿಂದಾಗಿ ಮೋಡಗಳ ಸೃಷ್ಟಿ ಕಡಿಮೆಯಾಗುತ್ತಿದೆ. ಮೋಡಗಳ ಸೃಷ್ಟಿಯೇ ಕಡಿಮೆಯಾದ ಕಾರಣ ಮಳೆ ಸುರಿಯುವ ಪ್ರಮಾಣವೂ ಕ್ಷೀಣಿಸುತ್ತಿದೆ. ಪರಿಣಾಮವಾಗಿ ರಾಜ್ಯದಲ್ಲಿ ನಿರೀಕ್ಷೆಯಂತೆ ವಾಡಿಕೆ ಮುಂಗಾರು ಮಳೆ ಸುರಿದಿಲ್ಲ. ಇದೀಗ ಗರಿಷ್ಠ ಉಷ್ಣಾಂಶದಲ್ಲಿ ಏರಿಕೆಯಾಗುತ್ತಿರುವ ಪರಿಣಾಮ ಸಮುದ್ರದಲ್ಲಿ ನಿಮ್ನ ಒತ್ತಡ ನಿರ್ಮಾಣ ಆಗುವ ಸಾಧ್ಯತೆ ಇರುತ್ತದೆ. ಆಗ ಉತ್ತಮ ಮಳೆಸುರಿಯವ ನಿರೀಕ್ಷೆಇರುವುದಾಗಿ ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಕರಾವಳಿ ಸೇರಿದಂತೆ ರಾಜ್ಯದೆಲ್ಲೆಡೆ ಗರಿಷ್ಠ ಉಷ್ಣಾಂಶದಲ್ಲಿ ಏರಿಕೆಯಾ ಗುತ್ತಿದೆ. ಕಳೆದ ಕೆಲವು ವರ್ಷಗಳಿಗೆ ಹೋಲಿಸಿದರೆ ಆಗಸ್ಟ್‌ನಲ್ಲಿ ಈ ಪ್ರಮಾಣದ ಉಷ್ಣಾಂಶ ಇದೇ ಮೊದಲು. ಇದರಿಂದ ಗರಿಷ್ಠ ತಾಪಮಾನವೂ ಸುಮಾರು 2ರಿಂದ 3 ಡಿಗ್ರಿ ಸೆಲ್ಸಿಯಸ್ ಹೆಚ್ಚುತ್ತಿದೆ. ಮುಂದಿನ ಕೆಲವು ದಿನ ಇದೇ ರೀತಿಯ ವಾತಾವರಣದ ಸಾಧ್ಯತೆ ಇದೆ.
– ಡಾ| ರಾಜೇಗೌಡ, ಬೆಂಗಳೂರು ಕೃಷಿ ವಿ.ವಿ. ಹವಾಮಾನ ವಿಜ್ಞಾನಿ ನವೀನ್ ಭಟ್ ಇಳಂತಿಲ