ಹುಬ್ಬಳ್ಳಿ: ಶೀಘ್ರ ಬೆಂಗಳೂರು, ಮಂಗಳೂರು ಮತ್ತು ಧಾರವಾಡದಲ್ಲಿ ಡಾಪ್ಲರ್ ವೆದರ್ ರಾಡಾರ್ ಸ್ಥಾಪನೆಗೊಳ್ಳಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
ಮೊದಲು ಧಾರವಾಡದ ಕೃಷಿ ವಿಜ್ಞಾನ ವಿವಿಯಲ್ಲಿ ರಾಡಾರ್ ಸ್ಥಾಪನೆಗೊಳ್ಳುತ್ತಿದೆ. 2021ರಲ್ಲೇ ಉತ್ತರ ಕರ್ನಾಟಕ ಭಾಗಕ್ಕೆ ಎಕ್ಸ್-ಬ್ಯಾಂಡ್ ಡಾಪ್ಲರ್ ರಾಡಾರ್ನ ತುರ್ತು ಅಗತ್ಯವಿದೆ ಎಂದು ವಿಜ್ಞಾನ, ತಂತ್ರಜ್ಞಾನ ಮತ್ತು ಭೂ ವಿಜ್ಞಾನಗಳ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಅವರಿಗೆ ಪತ್ರ ಬರೆದು ಒತ್ತಾಯಿಸಲಾಗಿತ್ತು. ಅದಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಈ ರಾಡಾರ್ 150ರಿಂದ 175 ಕಿಮೀಗಳಿಗೂ ಹೆಚ್ಚು ಪ್ರದೇಶದ ನಿಖರವಾದ ವಾತಾವರಣ ಬದಲಾವಣೆ, ಹವಾಮಾನ ವೈಪರೀತ್ಯದ ಬಗ್ಗೆ ಪರಿಪೂರ್ಣ ಮಾಹಿತಿ ನೀಡುತ್ತದೆ. ಮಳೆ ಮುನ್ಸೂಚನೆ, ಒಣಹವೆ ಮಾಹಿತಿ, ತಾಪಮಾನ ಏರಿಳಿತ ಸೇರಿ ವಾತಾವರಣದ ಏರುಪೇರುಗಳ ನಿಖರ ಮಾಹಿತಿ ನೀಡಲಿದೆ. ಇದು ರೈತರಿಗೆ ಬೆಳೆಹಾನಿ, ಬೆಳೆ ನಷ್ಟದಿಂದ ಪಾರು ಮಾಡುವುದರ ಜತೆಗೆ ಕೃಷಿ ಚಟುವಟಿಕೆಗಳ ಸಿದ್ಧತೆಗೆ ಸಹಾಯ ಮಾಡುತ್ತದೆ ಎಂದು ಜೋಶಿ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನನ್ನ ಮನವಿಗೆ ಕೇಂದ್ರ ತಂತ್ರಜ್ಞಾನ ಮತ್ತು ಭೂ ವಿಜ್ಞಾನಗಳ ರಾಜ್ಯ ಸಚಿವ ಡಾ.ಜಿತೇಂದ್ರ ಸಿಂಗ್ ಸ್ಪಂದಿಸಿ, ಇದೀಗ ಧಾರವಾಡದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ರಾಡಾರ್ (RADAR) ಸ್ಥಾಪನೆಗೊಳ್ಳುತ್ತಿದ್ದು, ಅತಿ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ.
ಈಗಾಗಲೇ ನನ್ನ ಕೋರಿಕೆಯ ಮೇರೆಗೆ ಭಾರತ ಹವಾಮಾನ ಇಲಾಖೆಯ ಕೇಂದ್ರವನ್ನು ಆಗಿನ ಕೇಂದ್ರ ಸಚಿವರಾಗಿದ್ದ ಹರ್ಷವರ್ಧನ ಸಹಕಾರದಿಂದ ಸ್ಥಾಪಿಸಲಾಗಿದ್ದು ಈಗ ಅದರಲ್ಲಿಯೇ X-band Doppler RADAR ನ್ನು ಅಳವಡಿಸಲಾಗುವದು. ಇದು 150 ರಿಂದ 175 ಕಿ.ಮೀ.ಗಳಿಗೂ ಹೆಚ್ಚು ಪ್ರದೇಶದ ನಿಖರವಾದ ಹವಾಮಾನ ಬದಲಾವಣೆ ಮತ್ತು ಹವಾಮಾನ ವೈಪರೀತ್ಯದ ಬಗ್ಗೆ ಪರಿಪೂರ್ಣ ಮಾಹಿತಿ ನೀಡುತ್ತದೆ. ಮಳೆಯ ಮುನ್ಸೂಚನೆ, ಒಣಹವೆಯ ಮಾಹಿತಿ, ತಾಪಮಾನದ ಏರಿಳಿತ ಸೇರಿದಂತೆ ಹವಾಮಾನದ ಏರು-ಪೇರುಗಳ ನಿಖರ ಮಾಹಿತಿ ನೀಡಲಿದೆ ಎಂದು ತಿಳಿಸಿದ್ದಾರೆ.