Advertisement

ಆ.20 ಬಳಿಕ ಮತ್ತೆ ಭಾರೀ ಮಳೆ ಸಂಭವ

06:00 AM Aug 19, 2018 | Team Udayavani |

ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ಇತ್ತೀಚೆಗೆ ಉಂಟಾದ ವಾಯುಭಾರ ಕುಸಿತದ ಪರಿಣಾಮ ಸುರಿದ ಭಾರೀ ಮಳೆ ತಗ್ಗುವ ಮುನ್ನವೇ ಮತ್ತೂಮ್ಮೆ ವಾಯುಭಾರ ಕುಸಿತದ ಮನ್ಸೂಚನೆ  ಬಂದಿದೆ.

Advertisement

ಇನ್ನೆರಡು ದಿನಗಳಲ್ಲಿ ಆ ಮಾರುತಗಳು ಕರ್ನಾಟಕ-ಕೇರಳ ಭಾಗದ ಕಡೆಗೆ ಚಲಿಸಿದರೆ ರಾಜ್ಯದಲ್ಲಿ ಮತ್ತೆ ಭಾರಿ ಮಳೆಯಾಗುವ ಸಾಧ್ಯತೆಯಿದೆ ಆ.12 ಹಾಗೂ 13ರಂದು ಸೃಷ್ಟಿಯಾದ ವಾಯುಭಾರ ಕುಸಿತದಿಂದಾಗಿ ಮುಂಗಾರು ತೀವ್ರತೆ ಪಡೆದು ಈಶಾನ್ಯ ಭಾಗದ ಕಡೆಗೆ ಚಲಿಸಿತ್ತು. ಅದಾದ ಬಳಿಕ ಮತ್ತೆ ಸೃಷ್ಟಿಯಾದ “ಆಸ್ಟ್ರೋ ಟ್ರಫ್’ (ಕಡಿಮೆ ಒತ್ತಡದ ತಗ್ಗು) ಹಾಗೂ ಪಶ್ಚಿಮ ದಿಕ್ಕಿನಿಂದ ಬೀಸಿದ ಜೋರಾದ ಗಾಳಿಯ ಪರಿಣಾಮ ಮಡಿಕೇರಿ ಭಾಗಗಳಲ್ಲಿ ವಾಡಿಕೆಗಿಂತಲೂ ಶೇ.45ರಷ್ಟು ಹೆಚ್ಚು ಮಳೆಯಾಗಿದೆ.  ಇದು ಐದು ದಶಕಗಳ ದಾಖಲೆ ಮಳೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಬಂಗಾಳಕೊಲ್ಲಿಯಲ್ಲಿ ಎರಡು ಬಾರಿ ವಾಯುಭಾರ ಕುಸಿತ ಉಂಟಾಗಿದ್ದರಿಂದ ಸೃಷ್ಟಿಯಾದ ಮಾರುತಗಳು ಸದ್ಯ ಪೂರ್ವ ರಾಜಸ್ಥಾನದ ಸುತ್ತಮುತ್ತಲಿನ ಭಾಗಗಳ ಕಡೆಗೆ ಚಲಿಸಿವೆ. ಹೀಗಾಗಿ ನಾಲ್ಕೈದು ದಿನಗಳಲ್ಲಿ ರಾಜ್ಯದಲ್ಲಿ ಮಳೆ ಪ್ರಮಾಣ ತಗ್ಗುವ ಸಾಧ್ಯತೆಯಿದೆ. ಆದರೆ, ಆ.20ರ ಬಳಿಕ ಬಂಗಾಳ ಕೊಲ್ಲಿಯಲ್ಲಿ ಉಂಟಾಗಲಿರುವ ನಿರೀಕ್ಷಿತ ವಾಯುಭಾರ ಕುಸಿತದ ಸೃಷ್ಟಿಯಾಗುವ ಮಾರುತಗಳು ಕರ್ನಾಟಕ-ಕೇರಳ ಭಾಗದ ಕಡೆಗೆ ಚಲಿಸಿದರೆ ಭಾರಿ ಮಳೆಯಾಗಬಹುದು. ಆದರೆ, ವಾಯುವ್ಯದತ್ತ ಆ ಮಾರುತ ಚಲಿಸಿದರೆ ಗುಜರಾತ್‌ ಮತ್ತು ರಾಜಸ್ತಾನದ ಕಡೆ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕಚೇರಿ ನಿರ್ದೇಶಕಿ ಗೀತಾ ಅಗ್ನಿಹೋತ್ರಿ ವಿವರಿಸಿದ್ದಾರೆ.

ಐದು ದಶಕಗಳ ದಾಖಲೆ ಮಳೆ
ಹವಾಮಾನ ಇಲಾಖೆ ಅಂಕಿ-ಅಂಶಗಳ ಪ್ರಕಾರ ಆ.17ರಂದು ಸುರಿದ ಮಳೆಯು ಮಡಿಕೇರಿ ಭಾಗದಲ್ಲಿ ಕಳೆದ ಐದು ದಶಕಗಳಲ್ಲಿ ಆಗಸ್ಟ್‌ ತಿಂಗಳ ದಾಖಲೆ ಮಳೆಯಾಗಿದೆ. ಈ ಹಿಂದೆ 1964ರ ಆಗಸ್ಟ್‌ನಲ್ಲಿ 279 ಮಿ.ಮೀ. ಮಳೆ ಈವರೆಗಿನ ದಾಖಲೆಯಾಗಿತ್ತು. ಜತೆಗೆ 1931ರ ಆಗಸ್ಟ್‌ ತಿಂಗಳಲ್ಲಿ 1559.3 ಮಿ.ಮೀ. ಮಳೆಯಾಗಿರುವುದು ಆಗಸ್ಟ್‌ ತಿಂಗಳಲ್ಲಿ ಸುರಿದ ಒಟ್ಟಾರೆ ದಾಖಲೆ ಮಳೆಯಾಗಿದೆ. ಆದರೆ, ಕಳೆದ ಐದು ದಿನಗಳಲ್ಲಿಯೇ 997.6 ಮಿ.ಮೀ. ಮಳೆಯಾಗಿದ್ದು, ಮಳೆ ಮುಂದುವರಿದರೆ ಆಗಸ್ಟ್‌ನಲ್ಲಿ ಸುರಿದ ದಾಖಲೆಯಾಗುವ ಸಾಧ್ಯತೆಯಿದೆ.

ಪ್ರತಿವರ್ಷ ಮುಂಗಾರು ಸಮಯದಲ್ಲಿ ಬಂಗಾಳಕೊಲ್ಲಿಯಲ್ಲಿ 6-7 ಬಾರಿ ವಾಯುಭಾರ ಕುಸಿತ ಉಂಟಾಗಿ ಉತ್ತಮ ಮಳೆಯಾಗುವುದು ಸಹಜ. ಆದರೆ, ಈ ಬಾರಿ ಸಂಭವಿಸಿದ ವಾಯುಭಾರ ಕುಸಿತದಿಂದ ಭಾರಿ ಮಳೆ ಸುರಿದಿದೆ. ಆಗಸ್ಟ್‌ 20ರ ನಂತರ ಮತ್ತೆ ವಾಯುಭಾರ ಕುಸಿತ ಸಾಧ್ಯತೆಯಿದ್ದು, ಅದು ರಾಜ್ಯದ ಕಡೆಗೆ ಚಲಿಸಿದರೆ ಮತ್ತೆ ಈ ಭಾಗದಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ.
– ಗೀತಾ ಅಗ್ನಿಹೋತ್ರಿ, ನಿರ್ದೇಶಕಿ, ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ.

Advertisement

ಮಡಿಕೇರಿ ಭಾಗದಲ್ಲಿ ಕಳೆದ 5 ದಿನಗಳಲ್ಲಿ ಸುರಿದ ಮಳೆಯ ಪ್ರಮಾಣ
ದಿನಾಂಕ    ಮಳೆ ಪ್ರಮಾಣ (ಮಿಲಿ ಮೀಟರ್‌ಗಳಲ್ಲಿ)
ಆ.14    82
ಆ.15    206.4
ಆ.16    262
ಆ.17    300.2
ಆ.18    147

– ವೆಂ. ಸುನೀಲ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next