Advertisement

ಹವಾಮಾನ ವೈಪರೀತ್ಯ: ಹೆಚ್ಚುತ್ತಿದೆ ವೈರಲ್‌ ಜ್ವರ

12:42 PM Oct 15, 2022 | Team Udayavani |

ಬೆಂಗಳೂರು: ರಾಜ್ಯಾದ್ಯಂತ ಹವಾಮಾನ ವೈಪರೀತ್ಯದಿಂದಾಗಿ ವೈರಲ್‌ ಜ್ವರಗಳು ಹೆಚ್ಚಾಗುತ್ತಿದ್ದು, ಆರೋಗ್ಯ ಇಲಾಖೆಯು ಸೂಕ್ತ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ಎಲ್ಲ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದೆ.

Advertisement

ಕಳೆದ 3 ವಾರಗಳಿಂದ ಹವಾಮಾನ ಬದಲಾವಣೆ, ಮಳೆ ಮತ್ತಿತರ ಕಾರಣಗಳಿಂದ ರಾಜ್ಯಾದ್ಯಂತ ಎಲ್ಲೆಡೆ ವೈರಲ್‌ ಜ್ವರದ ಹಾವಳಿ ಹೆಚ್ಚುತ್ತಿದೆ. ಕೆಮ್ಮು, ಜ್ವರ, ಶೀತ, ಗಂಟಲು, ತಲೆ ನೋವು, ಹೊಟ್ಟೆ ನೋವು ಮುಂತಾದ ಲಕ್ಷಣದಿಂದ ವೈದ್ಯರನ್ನು ಮೊರೆ ಹೋಗುವವರ ಸಂಖ್ಯೆ ಏರಿಕೆಯಾಗಿದೆ. ಹೀಗಾಗಿ, ಜನ ಸಾಮಾನ್ಯರು ಮುನ್ನೆಚ್ಚರಿಕೆ ವಹಿಸಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಆಯಾ ಹವಾಮಾನಕ್ಕೆ ತಕ್ಕಂತೆ ಹೊಸ-ಹೊಸ ವೈರಸ್‌ ಗಳು ಉತ್ಪತ್ತಿಯಾಗುತ್ತಿದ್ದು, ಕೋವಿಡ್‌ ವೇಳೆ ವಹಿಸುತ್ತಿದ್ದ ಮುನ್ನೆಚ್ಚರಿಕಾ ಕ್ರಮಗಳನ್ನು ಜನ ಸಾಮಾನ್ಯರು ವಹಿಸದಿ ರುವುದೇ ಇದಕ್ಕೆ ಪ್ರಮುಖ ಕಾರಣ. ಮುಖ್ಯವಾಗಿ ವೈರಲ್‌ ಜ್ವರವು ಉಸಿರಾಟದಿಂದ ಹರಡುತ್ತದೆ. ಜ್ವರಕ್ಕೆ ಒಳಗಾದ ವ್ಯಕ್ತಿಗಳು ಮಾಸ್ಕ್ ಧರಿಸದೇ ಮತ್ತೂಬ್ಬ ವ್ಯಕ್ತಿಯ ಬಳಿ ಬಂದು ಉಸಿರಾಡಿದಾಗ ಆತನ ದೇಹದಲ್ಲಿದ್ದ ವೈರಸ್‌ಗಳು ಬೇರೆಯವರಿಗೆ ಹರಡುವ ಸಾಧ್ಯತೆಗಳಿರುತ್ತದೆ ಎಂದು ವೈದ್ಯರು ತಿಳಿಸುತ್ತಾರೆ.

ಮಳೆ, ಚಳಿ, ಸದಾ ಮೋಡ ಇರುವ ಕಾಲದಲ್ಲಿ ಸಾಮಾನ್ಯವಾಗಿ ಹೊಸ ವೈರಸ್‌ಗಳು ಉತ್ಪತ್ತಿಯಾಗುತ್ತವೆ. ಕೆಲವೊಂದು ಹವಾಮಾನದಲ್ಲಿ ಅಷ್ಟು ಸುಲಭವಾಗಿ ವೈರಸ್‌ಗಳು ಸಾಯುವುದಿಲ್ಲ. ಹವಾಮಾನ ಬದಲಾಗುತ್ತಿದ್ದಂತೆ ಹೊಸ ವೈರಸ್‌ಗಳು ಹುಟ್ಟಿಕೊಳ್ಳುವುದು ಸಾಮಾನ್ಯ. ಆದರೆ, ಕೆಲ ಪ್ರತಿಕೂಲ ಹವಾಮಾನದಿಂದ ವೈರಸ್‌ಗಳು ಬೇಗ ಹರಡುತ್ತವೆ ಎಂದು ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯ ಪ್ರೊಫೆಸರ್‌ ಹಾಗೂ ಮಕ್ಕಳ ವೈದ್ಯಶಾಸ್ತ್ರ ವಿಭಾಗದ ವೈದ್ಯ ಡಾ.ಎನ್‌. ನಿಜಗುಣ “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.

ಮುನ್ನೆಚ್ಚರಿಕಾ ಕ್ರಮಗಳೇನು?

Advertisement

 ಜ್ವರದಿಂದ ಬಳಲುತ್ತಿರುವವರು ನೀರಿನಾಂಶ ಇರುವ ಆಹಾರ ಪದಾರ್ಥ ಹೆಚ್ಚೆಚ್ಚು ಸೇವಿಸಬೇಕು.

 ವಿಟಮಿನ್‌ ಸಿ ಹಾಗೂ ಎ ಇರುವ ಪದಾರ್ಥಗಳನ್ನು ಸೇವಿಸಿದರೆ ಉತ್ತಮ.

 ಪಪ್ಪಾಯ, ತುಳಸಿ ರಸದಂತಹ ಆಹಾರಗಳು ಉಪಯುಕ್ತ.

 ಜ್ವರದ ಲಕ್ಷಣ ಕಂಡು ಬರುವವರು ಆಗಾಗ ಸ್ಟೀಮ್‌ ತೆಗೆದುಕೊಳ್ಳುತ್ತಿರಬೇಕು.

 ಮನೆಯಲ್ಲಿ ಒಬ್ಬರಿಗೆ ಜ್ವರದ ಲಕ್ಷಣ ಕಾಣಿಸಿಕೊಂಡರೆ ಮಾಸ್ಕ್ ಧರಿಸಿ ಮತ್ತೂಬ್ಬರ ಜತೆ ಅಂತರ ಕಾಯ್ದುಕೊಳ್ಳಿ

 ಜ್ವರ ಇದ್ದವರ ಜತೆಗೆ ಹ್ಯಾಂಡ್‌ ಶೇಕ್‌ ಮಾಡೋದು, ಪಕ್ಕದಲ್ಲೇ ಕೂರುವುದು ಮಾಡಬಾರದು.

 ಜ್ವರ ಬಂದಾಗ ವೈದ್ಯರನ್ನು ಭೇಟಿಯಾಗಿ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳುವುದು ಉತ್ತಮ.

 ಮಕ್ಕಳಿಗೆ ಕೆಮ್ಮು, ನೆಗಡಿ ಲಕ್ಷಣಗಳಿದ್ದಾಗ ಶಾಲೆಗೆ ಕಳಿಸದೇ ಇರುವುದು ಒಳಿತು. ಇದರಿಂದ ಇತರೆ ಮಕ್ಕಳಿಗೆ ಜ್ವರ ಹರಡಬಹುದು.

 ಮಳೆ ಬಂದಾಗ ಬೆಚ್ಚಗಿನ ಉಡುಪು ಧರಿಸುವುದು.

 ಆದಷ್ಟು ಹೊರಗಿನ ಎಣ್ಣೆಯುಕ್ತ ಪದಾರ್ಥ ಸೇವಿಸಬೇಡಿ

ಮನುಷ್ಯನು ಒಮ್ಮೆ ಉಸಿರಾಡಿದಾಗ ಆತನ ದೇಹದಿಂದ ಲಕ್ಷಾಂತರ ವೈರಸ್‌ ಗಳು ಹೊರಗೆ ಬರುತ್ತವೆ. ಕೋವಿಡ್‌ ಭೀತಿಯ ಬಳಿಕ ಜ್ವರದ ಲಕ್ಷಣ ಕಂಡು ಬಂದರೂ ಸಾಮಾಜಿಕ ಅಂತರವಿಲ್ಲದೇ ಓಡಾಡುತ್ತಿದ್ದಾರೆ. ಜತೆಗೆ, ಹವಾಮಾನದಲ್ಲಿ ದಿನಕ್ಕೊಂದು ವೈಪರೀತ್ಯ ಕಾಣುತ್ತೇವೆ. ಈ ಎಲ್ಲ ಕಾರಣ ಗಳಿಂದಾಗಿ ವೈರಲ್‌ ಜ್ವರಗಳು ಹೆಚ್ಚುತ್ತಿವೆ. ● ಡಾ.ಎನ್‌. ನಿಜಗುಣ, ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ.

 

Advertisement

Udayavani is now on Telegram. Click here to join our channel and stay updated with the latest news.

Next