ನಮ್ಮ ಸುತ್ತಮುತ್ತ ನಡೆಯುತ್ತಿರುವ ಹವಾಮಾನ -ವಾತಾವರಣ ಸಂಬಂಧಿ ವಿದ್ಯಮಾನಗಳನ್ನು ಗಮ ನಿಸುತ್ತ ಹೋದರೆ ಸೂಕ್ಷ್ಮಪ್ರಜ್ಞೆಯುಳ್ಳವರಿಗೆ ದಿಗಿಲಾ ಗುವುದು ಖಚಿತ. ಏಕೆಂದರೆ ಭೂಮಿ ಈಗ ನಮ್ಮ ಅಂಗೈ ಮೇಲಿದೆ. ದೂರದ ಸುಡಾನ್, ಸೊಮಾಲಿಯಾ, ಅಂಟಾರ್ಟಿಕಾ, ಐಸ್‌ಲ್ಯಾಂಡ್- ಎಲ್ಲೇ ಏನೇ ಆದರೂ ಅದರ ಸುದ್ದಿ ನಮಗೆ ತಿಳಿಯುತ್ತದೆ. ಈ ವಿದ್ಯಮಾನಗಳ ಪರಿಣಾಮಗಳೂ ಅಷ್ಟೇ ವೇಗವಾಗಿ ನಮ್ಮ ಅನುಭವಕ್ಕೆ ಬರುತ್ತಿರುವುದು ನಮ್ಮ ದುರದೃಷ್ಟ ಹಾಗೂ ವಿಪರ್ಯಾಸ -ಎರಡೂ ಹೌದು!
ಭೂಮಿಯ ವಾತಾವರಣ ಬದಲಾವಣೆ, ಭೂಮಿ ಬಿಸಿಯೇರುತ್ತಿರುವುದರಿಂದ ಆಗುತ್ತಿರುವ ದುಷ್ಪರಿ ಣಾಮಗಳಿಂದ ಯಾರೂ ತಪ್ಪಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂಬುದು ಖಂಡಿತ. ಇದನ್ನು ಪಾರಿಸರಿಕ ನ್ಯಾಯ ಎಂದು ವ್ಯಾಖ್ಯಾನಿಸಬಹುದೇನೋ. ಸಿರಿವಂತ ರಾಷ್ಟ್ರಗಳು, ಸಿರಿವಂತರು ಕೆಲವು ವರ್ಷ, ಕೆಲವು ತಿಂಗಳು, ಕೆಲವು ದಿನಗಳ ಕಾಲ ಇದರಿಂದ ಏನೇನೋ ಮಾಡಿ ಪಾರಾಗಬಲ್ಲರು. ಆದರೆ ಅಂತಿಮವಾಗಿ ಮಾಡಿದ್ದುಣ್ಣೋ ಮಹರಾಯ ಎಂಬಂತೆ ಎಲ್ಲರೂ ಅನುಭವಿಸಲೇಬೇಕಾದ ಪರಿಣಾಮಗಳು ಇವು.
ಭೂಮಿಯ ಮೇಲಿರುವ ಕೋಟ್ಯಂ ತರ ಮಂದಿಯ ಬದುಕು ಹವಾ ಮಾನ ಬಿಕ್ಕಟ್ಟಿನ ದುಷ್ಪರಿ ಣಾಮಗಳನ್ನು ಎದುರಿಸುತ್ತಿದೆ ಎಂದು ಇದೇ ವಾರದಲ್ಲಿ ಬಿಡು ಗಡೆಯಾಗಿರುವ ಲ್ಯಾನ್ಸೆಟ್ ಕೌಂಟ್‌ಡೌನ್ ವರದಿಯಲ್ಲಿ ತಜ್ಞರು ಎಚ್ಚರಿ ಸಿದ್ದಾರೆ. ಸೌರವ್ಯೂಹದ ಈ ಏಕಮಾತ್ರ ಜೀವಿ ವಾಸಯೋಗ್ಯ ಗ್ರಹ ಬಿಸಿಯೇರುತ್ತಿರುವುದರ ಪರಿಣಾಮವಾಗಿ ಮೂಲೆ ಮೂಲೆ ಯಲ್ಲಿ ರೋಗ ರುಜಿನಗಳು ಇನ್ನಷ್ಟು ವೇಗವಾಗಿ, ತೀವ್ರವಾಗಿ ಹಬ್ಬುತ್ತವೆ ಎಂಬುದು ವಿಜ್ಞಾನಿಗಳ, ಹವಾಮಾನ ತಜ್ಞರ ಎಚ್ಚರಿಕೆ. ವಾತಾವರಣ ಬಿಸಿಯಾ ಗುವುದರಿಂದ ಮನುಷ್ಯರು, ಪ್ರಾಣಿಗಳು ಮತ್ತು ಸಸ್ಯ ರಾಶಿಗೆ ಬದುಕು ಅಸಹನೀಯವಾಗುತ್ತದೆ. ಆದರೆ ಇದು ರೋಗಕಾರಕ ಸೂಕ್ಷ್ಮಜೀವಿಗಳಿಗೆ ಹೇಳಿ ಮಾಡಿಸಿದ ವಾತಾವರಣ. ಹೀಗಾಗಿ ಮನುಕುಲಕ್ಕೆ ಈಗ ತಿಳಿದಿರುವ ಸೋಂಕು ರೋಗಗಳಲ್ಲಿ ಅರ್ಧಕ್ಕಿಂತ ಹೆಚ್ಚು ಕಾಯಿಲೆಗಳು ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದಲ್ಲಿ ಬಾಧಿಸಲಿವೆ ಎಂಬುದು ತಜ್ಞರ ಪ್ರತಿಪಾದನೆ. ಉದಾಹರಣೆಗೆ ಹೆಚ್ಚು ಬಿಸಿಯಾದ ವಾತಾವರಣವು ಕಾಲರಾ, ಅತಿಸಾರ, ಟೈಫಾಯ್ಡ, ಪೋಲಿಯೋದಂತಹ ರೋಗಗಳನ್ನು ಉಂಟು ಮಾಡುವ ಸೂಕ್ಷ್ಮ ಜೀವಿಗಳಿಗೆ ಹಬ್ಬವಾಗುತ್ತದೆ. ಅತಿ ವೃಷ್ಟಿ, ಅನಾವೃಷ್ಟಿಯಂತಹ ಪ್ರಾಕೃತಿಕ ವಿಕೋಪಗಳು ಉಂಟಾದಾಗ ಮೂಲಸೌಕರ್ಯಗಳಿಗೆ ಹಾನಿಯಾಗಿ ಕಲುಷಿತ ನೀರನ್ನು ಉಪಯೋಗಿಸುವುದು ಅನಿವಾ ರ್ಯ ವಾಗುತ್ತದೆ. ಆಗ ಇಂತಹ ಕಾಯಿಲೆಗಳ ಹಾವಳಿ ಉಂಟಾಗಲೇಬೇಕಲ್ಲ! ಇದು ಊಹೆಯ ಮಾತಂತೂ ಅಲ್ಲವೇ ಅಲ್ಲ. ಉದಾಹರಣೆಗೆ, ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ ಅಂಶಗಳ ಪ್ರಕಾರ 2022ರಲ್ಲಿ 2021ಕ್ಕಿಂತ ದುಪ್ಪಟ್ಟು ಪ್ರಮಾಣದಲ್ಲಿ ಕಾಲರಾ ರೋಗ ಪ್ರಕರಣಗಳು ದಾಖಲಾಗಿವೆ. ಯೆಮೆನ್, ಲೆಬನಾನ್ ಸಹಿತ ಹಿಂದೆ ಕಾಲರಾ ನಿಯಂತ್ರಣದಲ್ಲಿದ್ದ ದೇಶ ಗಳಲ್ಲಿಯೂ ಈ ಅವಧಿಯಲ್ಲಿ ಅದರ ಹಾವಳಿ ಕಂಡುಬಂದಿದೆ.
ಈ ವರ್ಷದ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಫ್ರೆಡ್ಡಿ ಎಂಬ ಹೆಸರಿನ ಚಂಡಮಾರುತವು ಭೂಮಧ್ಯ ರೇಖೆಯ ದೇಶಗಳ ಗುಂಟ ಹಾಹಾಕಾರ ಉಂಟು ಮಾಡಿತು. ಈ ಪೈಕಿ ಮಲಾವಿ ದೇಶದಲ್ಲಿ 59 ಸಾವಿರ ಕಾಲರಾ ಪ್ರಕರಣಗಳು ವರದಿಯಾಗಿದ್ದು, 1,768 ಮಂದಿ ಸಾವನ್ನಪ್ಪಿದ್ದಾರೆ. ಇದು ಕೇವಲ ಕಲುಷಿತ ನೀರಿನಿಂದ ಹರಡುವ ಕಾಲರಾ, ಅತಿಸಾರ, ವಾಂತಿಭೇದಿಯಂತಹ ರೋಗಗಳಿಗೆ ಮಾತ್ರ ಸೀಮಿತವಲ್ಲ. ಸೊಳ್ಳೆಗಳಿಂದ ಹರಡುವ ಮಲೇರಿಯಾ, ಡೆಂಗ್ಯೂ, ಚಿಕನ್‌ಗುನ್ಯಾ ಮತ್ತಿತರ ರೋಗಗಳ ಕಥೆಯೂ ಹೀಗೆಯೇ. ಉದಾಹರಣೆಗೆ ಸುಡಾನ್ ದೇಶವನ್ನು ತೆಗೆದುಕೊಂಡರೆ ಕಳೆದ ವರ್ಷ ಅಲ್ಲಿ ಅತಿವೃಷ್ಟಿಯಾಗಿ ಹತ್ತು ವರ್ಷಗಳಲ್ಲಿಯೇ ಕಂಡು ಕೇಳರಿಯದಡೆಂಗ್ಯೂ ಹಾವಳಿ ಯುಂಟಾಯಿತು. ಬಾಂಗ್ಲಾ ದೇಶದಲ್ಲಿ ಈ ವರ್ಷದ ಜನವರಿ ಮತ್ತು ಆಗಸ್ಟ್ ತಿಂಗಳುಗಳ ನಡುವೆ 70 ಸಾವಿರ ಡೆಂಗ್ಯೂ ಪ್ರಕರಣಗಳು ವರದಿ ಯಾಗಿ 327 ಮಂದಿ ಮೃತಪಟ್ಟರು.
ಹಳೆಯ ಕಾಯಿಲೆಗಳು ಹೊಸದಾಗಿ ಹಾಹಾಕಾರ ಎಬ್ಬಿಸುವುದು ಒಂದೆಡೆಯಾದರೆ ಮನುಷ್ಯರು- ವನ್ಯಜೀವಿಗಳ ಸಂಪರ್ಕ ಹೆಚ್ಚುವುದರಿಂದ ಹೊಸ ಕಾಯಿಲೆಗಳು ಉದ್ಭವಿಸುವ ಸಾಧ್ಯತೆ ಇನ್ನೊಂ ದೆಡೆ. ತೆರೆದುಕೊಳ್ಳಲಿರುವ ಈ “ಪೆಂಡೊರಾಳ ಪೆಟ್ಟಿಗೆ’ಗೆ ಕೊರೊನಾ, ನಿಫಾ ಒಂದೆರಡು ಉದಾಹರಣೆಗಳು ಮಾತ್ರ. ಇವೆಲ್ಲದರ ಜತೆಗೆ ನಮ್ಮದೇ ರಾಜಧಾನಿ ದಿಲ್ಲಿ, ಮುಂಬಯಿಯಂತಹ ನಗರಗಳಲ್ಲಿ ಉಸಿರಾಡುವ ಗಾಳಿಯೇ ವಿಷಮಯ ಎಂಬಂತಹ ಸ್ಥಿತಿ ಇದೆ.
ನಮ್ಮ ಮುಂದಿರುವ ದಿನಗಳು ಕಠಿನವಾಗಿವೆ. ಪ್ರತಿ ಹೆಜ್ಜೆಯನ್ನೂ ಆಲೋಚಿಸಿ, ಪರಿಸರ ಸಹ್ಯವಾಗಿಯೇ ಮುಂದಿಡುವುದರಿಂದ ಮಾತ್ರ ದುಷ್ಪರಿಣಾಮಗಳನ್ನು ಕೊಂಚವಾದರೂ ಕಡಿಮೆ ಮಾಡಿಕೊಳ್ಳಲು ಸಾಧ್ಯ. ಇದು ವೈಯಕ್ತಿಕ ಹಂತದಿಂದ ತೊಡಗಿ ಜಾಗತಿಕ ಮಟ್ಟದವರೆಗೆ ವಿಸ್ತರಿಸಿಕೊಳ್ಳ ಬೇಕಿದೆ.