Advertisement

ಮಾಸ್ಕ್ ಧರಿಸುವುದು ನಿತ್ಯದ ರೂಢಿಯಾಗಲಿ: ಡಿಸಿ ಕೂರ್ಮಾರಾವ್‌

09:33 AM Jun 30, 2020 | Suhan S |

ಯಾದಗಿರಿ: ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ಹಾಗೂ ಸೋಪು ಅಥವಾ ಸ್ಯಾನಿಟೈಸರ್‌ನಿಂದ ಕೈ ತೊಳೆದುಕೊಳ್ಳುವುದು ದಿನನಿತ್ಯದ ರೂಢಿಯಾಗಬೇಕು. ಈ ಮೂರು ಸೂತ್ರಗಳನ್ನು ಪ್ರತಿಯೊಬ್ಬರೂ ಪಾಲಿಸಿದರೆ ಯಾದಗಿರಿ ಜಿಲ್ಲೆ ಕೋವಿಡ್ ಮುಕ್ತವಾಗುವುದರಲ್ಲಿ ಸಂದೇಹವಿಲ್ಲ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್‌ ಹೇಳಿದರು.

Advertisement

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ಕೋವಿಡ್‌-19 ಮುಕ್ತ ಜಿಲ್ಲೆಯನ್ನಾಗಿಸಲು ಸಾರ್ವಜನಿಕರು, ಸಂಘ-ಸಂಸ್ಥೆಗಳಿಂದ ಸಲಹೆ ಸೂಚನೆಗಳನ್ನು ಆಲಿಸಲು ಹಮ್ಮಿಕೊಂಡಿದ್ದ ನೇರ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜಿಲ್ಲೆಯ ನಗರ, ಸ್ಥಳೀಯ ಸಂಸ್ಥೆಗಳು, ಗ್ರಾಮ ಪಂಚಾಯಿತಿಗಳ ವತಿಯಿಂದ ಹಾಗೂ ಸಂಘ-ಸಂಸ್ಥೆಗಳ ವತಿಯಿಂದ ಜಾಗೃತಿ ಮೂಡಿಸಲಾಗುತ್ತಿದೆ. ಈ ಬಗ್ಗೆ ತಿಳಿವಳಿಕೆ ಇದ್ದರೂ ಹೆಚ್ಚಿನ ಜನರು ಮಾಸ್ಕ್ ಧರಿಸುತ್ತಿಲ್ಲ. ಅಗತ್ಯ ಕೆಲಸಕ್ಕಾಗಿ ಮನೆಯಿಂದ ಹೊರಗಡೆ ಬರುವ ಸಾರ್ವಜನಿಕರು ಕಡ್ಡಾಯವಾಗಿ ಮುಖಗವಸು ಧರಿಸಬೇಕು. ಬಟ್ಟೆಯಿಂದ ತಯಾರಿಸಿದ ಮಾಸ್ಕ್ ಕೂಡ ಧರಿಸಬಹುದಾಗಿದೆ. ಕರವಸ್ತ್ರ ಅಥವಾ ಇನ್ಯಾವುದೇ ವಸ್ತ್ರದಿಂದ ಸಹ ಮುಖಕ್ಕೆ ಕಟ್ಟಿಕೊಳ್ಳಬಹುದು ಎಂದು ಸಲಹೆ ನೀಡಿದರು.

ಜನಜೀವನ ಸುಧಾರಿಸಲು ಸರ್ಕಾರ ಹಂತಹಂತವಾಗಿ ಲಾಕ್‌ಡೌನ್‌ ಸಡಿಲಿಕೆ ಮಾಡುತ್ತಿದೆ. ಕೋವಿಡ್ ವೈರಸ್‌ ಗೆ ಔಷಧ  ಕಂಡುಹಿಡಿದಿಲ್ಲ. ಮುಂಜಾಗ್ರತಾ ಕ್ರಮಗಳೇ ವೈರಸ್‌ ನಿಯಂತ್ರಣಕ್ಕೆ ಸದ್ಯದ ಔಷಧಿಯಾಗಿದೆ ಎಂಬುದನ್ನು ಜನರು ಅರಿತುಕೊಳ್ಳಬೇಕಿದೆ ಎಂದು ಹೇಳಿದರು.

ನೇರ ಫೋನ್‌-ಇನ್‌ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧೆಡೆಯಿಂದ 10ಕ್ಕೂ ಹೆಚ್ಚು ಗ್ರಾಮ/ ನಗರಗಳಿಂದ ಜನ ಕರೆ ಮಾಡಿದ್ದರು. ಆರೋಗ್ಯ ಕೇಂದ್ರಕ್ಕೆ ವೈದ್ಯರುಸಮಯಕ್ಕೆ ಸರಿಯಾಗಿ ಬರದಿರುವುದು, ಗುಟ್ಕಾ ಸೇವನೆಗೆ ಕಡಿವಾಣ, ಮಾಸ್ಕ್ ಧರಿಸುವ ಬಗ್ಗೆ ಹೆಚ್ಚಿನ ಪ್ರಚಾರ ಮತ್ತು ದಂಡ ವಿಧಿಸುವುದು ಸೇರಿದಂತೆ ವಿವಿಧ ವಿಷಯಗಳ ಕುರಿತಂತೆ ಕರೆ ಮಾಡಿದ ಸಾರ್ವಜನಿಕರು ಗಮನ ಸೆಳೆದರು.

ಕೋವಿಡ್‌-19 ರೋಗ ಲಕ್ಷಣಗಳಾದ ಜ್ವರ, ನೆಗಡಿ, ಕೆಮ್ಮು, ಉಸಿರಾಟದ ತೊಂದರೆ ಕಾಣಿಸಿದಲ್ಲಿ ಸಾರ್ವಜನಿಕರು ತಮ್ಮ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರಿಗೆ ಮಾಹಿತಿ ನೀಡಬೇಕು. ಅಥವಾ ಹತ್ತಿರದ ಆಸ್ಪತ್ರೆಗಳಲ್ಲಿ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ಜಿಲ್ಲಾಡಳಿತ ಕಂಟ್ರೋಲ್‌ ರೂಮ್‌ ಸಂಖ್ಯೆ 08473-253950, ವಾಟ್ಸ್‌ಆ್ಯಪ್‌ ಸಂಖ್ಯೆ:9449933946 ಅಥವಾ 104 ಸಹಾಯವಾಣಿಗೆ ಕರೆ ಮಾಡಿ ಸಹಾಯ ಪಡೆಯಬಹುದು ಎಂದು ಕೋರಿದರು.ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next