Advertisement
ಕಳೆದ ಮೂರು ವರ್ಷಗಳ ಅವಧಿಯಲ್ಲಿ ಕೊರೊನಾ ಅಥವಾ ಕೋವಿಡ್ ಉಂಟುಮಾಡಿದ ಅನಾಹುತವನ್ನು ಈ ಕಾಲಮಾನದ ಜನರು ಬದುಕಿಡೀ ಮರೆಯಲಾರರು. ಕಣ್ಣಿಗೆ ಕಾಣದಂಥ ರೋಗಾಣುವಿನ ಮೂಲಕ ಹರಡಿದ ಕಾಯಿಲೆಯೊಂದು ಇಡೀ ಜಗತ್ತಿನ ಜನರನ್ನು ದುಃಸ್ವಪ್ನದಂತೆ ಕಾಡಿದ್ದನ್ನು ವಿವರಿಸಲು ಪದಗಳಿಲ್ಲ. ಕೋವಿಡ್‌ನ ಮೊದಲ ಅಲೆಯ ಸಂದರ್ಭದಲ್ಲಿ ಅಸಹಾಯಕತೆಯೇ ಎಲ್ಲರ ಬದುಕಾಗಿತ್ತು. ಗೆಳೆಯರು, ಬಂಧುಗಳು, ಒಡಹುಟ್ಟಿದವರು ಒಬ್ಬರ ಹಿಂದೊಬ್ಬರು ಸಾಯುತ್ತಿದ್ದಾಗ ಜಗತ್ತು ಒಂದರೆಕ್ಷಣ ಏನು ಮಾಡಲೂ ತೋಚದೆ ಸ್ತಬ್ಧಗೊಂಡಿತ್ತು. ಕೊರೊನಾದಿಂದ ತಪ್ಪಿಸಿಕೊಂಡವರು, ಮುಂದೇನಾದೀತೋ ಎಂಬ ಭಯದಲ್ಲಿ ಅಂಗೈಲಿ ಜೀವ ಹಿಡಿದುಕೊಂಡು ನಿಂತುಬಿಟ್ಟಿದ್ದರು.
Related Articles
Advertisement
ಒಮಿಕ್ರಾನ್ ತಳಿ ಪ್ರಾಣಾಂತಿಕವಲ್ಲ ಎಂದು ಖಚಿತವಾದ ಬಳಿಕ ಮಾಸ್ಕ್ ಧರಿಸುವುದು ಕಡ್ಡಾಯ ಎಂಬ ನಿಯಮವನ್ನು ಹಲವು ರಾಜ್ಯಗಳು ತೆಗೆದುಹಾಕಿವೆ. ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಬೇಕೋ ಬೇಡವೋ ಎಂಬ ವಿಷಯವೂ ಈಗ ಗಂಭೀರ ಚರ್ಚೆಯ ವಸ್ತುವಾಗಿದೆ. ಮಾಸ್ಕ್ ಧರಿಸಿ ಓಡಾಡುವುದು ಸರಿಯೋ ಅಥವಾ ಮಾಸ್ಕ್ ಇಲ್ಲದೇ ಅಡ್ಡಾಡುವುದೇ ಸರಿಯೋ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ವಾಸ್ತವವೇನೆಂದರೆ ನಾವು ಕೋವಿಡ್‌ನಿಂದ ಸಂಪೂರ್ಣವಾಗಿ ಮುಕ್ತರಾಗಿಲ್ಲ. ಈ ಕಾಯಿಲೆ ಇನ್ನೂ ಕೆಲವು ವರ್ಷ ನಮ್ಮೊಂದಿಗೆ ಇರುತ್ತದೆ ಎಂಬುದು ಸ್ಪಷ್ಟ. ಸಮಾಧಾನದ ಸಂಗತಿಯೆಂದರೆ- ಇದು ಮೊದಲಿನಷ್ಟು ತೀವ್ರವಾಗಿರುವುದಿಲ್ಲ. ಕಾರಣಗಳು ಹಲವು. ಅವುಗಳನ್ನು ಹೀಗೆ ಪಟ್ಟಿ ಮಾಡಬಹುದು: 1. ನಮ್ಮ ದೇಶದ ಪ್ರತಿಯೊಬ್ಬರೂ ಕೋವಿಡ್‌ನ ಮೂರು ಅಲೆಗಳ ಪೈಕಿ ಒಂದರ ಸೋಂಕಿಗಾದರೂ ಒಳಗಾಗಿ¨ªಾರೆ. 2. ಹೆಚ್ಚಿನವರು ಲಸಿಕೆ ತೆಗೆದುಕೊಂಡಿ¨ªಾರೆ. (ಈವರೆಗೆ 180 ಕೋಟಿ ವ್ಯಾಕ್ಸಿನೇಶನ್ ಆಗಿದೆ) 3. 12 ವರ್ಷಕ್ಕಿಂತ ಮೇಲ್ಪಟ್ಟ ವಯೋಮಾನದ ಮಕ್ಕಳಿಗೆ ಕೋವಿಡ್ ಪ್ರತಿರೋಧಕ ಇಂಜೆಕ್ಷನ್ ನೀಡಲಾಗುತ್ತಿದೆ. 4. ಸೋಂಕು ಮತ್ತು ವ್ಯಾಕ್ಸಿನೇಶನ್‌ನ ಕಾರಣದಿಂದ ಜನರಿಗೆ ಹೆಚ್ಚಿನ ಪ್ರತಿರೋಧಕ ಶಕ್ತಿ ಬಂದಿದ್ದು ಗಂಭೀರ ಕಾಯಿಲೆಯ ವಿರುದ್ಧ ಹೋರಾಡಲು ಸಹಕಾರಿಯಾಗಿದೆ. 5. ಒಮಿಕ್ರಾನ್ ತಳಿಯು ಹೆಚ್ಚು ರೂಪಾಂತರಗಳನ್ನು ಹೊಂದಿರುವುದು ನಿಜವಾದರೂ ಹೆಚ್ಚು ಅಪಾಯಕಾರಿಯಲ್ಲ ಮತ್ತು ಹೆಚ್ಚು ಅವಧಿಯವರೆಗೆ ಉಳಿಯುವಂಥದಲ್ಲ ಎಂದೂ ತಿಳಿದುಬಂದಿದೆ. 6. ಭವಿಷ್ಯದ ದಿನಗಳಲ್ಲಿ ಕಾಣಿಸಿಕೊಳ್ಳುವ ರೂಪಾಂತರಿ ತಳಿಗಳೂ ಹೆಚ್ಚಿನಂಶ ಇದೇ ಗುಣವಿಶೇಷ ಹೊಂದಿರುತ್ತವೆ ಎಂದು ಭಾವಿಸಬಹುದಾಗಿದೆ.
ಕೋವಿಡ್‌ನ ಕಾರಣಕ್ಕೆ ಕಳೆದ ಎರಡು ವರ್ಷದಲ್ಲಿ ಎಲ್ಲ ಬಗೆಯ ಔದ್ಯೋಗಿಕ ಚಟುವಟಿಕೆಗಳು ನಿಂತುಹೋಗಿದ್ದರಿಂದ ಆದ ಉದ್ಯೋಗ ನಷ್ಟ, ಆರ್ಥಿಕ ಸಂಕಷ್ಟ, ನಿರುದ್ಯೋಗ ಸಮಸ್ಯೆಗಳಿಂದ ಜತೆಯಾದ ಸಮಸ್ಯೆಗಳು ಈಗಲೂ ಕಣ್ಣೆದುರಿಗೇ ಇವೆ. ಈ ಸಮಸ್ಯೆಗಳಿಂದ ಸ್ವಲ್ಪಮಟ್ಟಿಗಾದರೂ ಪಾರಾಗಬೇಕೆಂದರೆ ಕೋವಿಡ್ ತಡೆಯಲು ಹಾಕಿಕೊಂಡಿದ್ದ ಕಠಿನ ನಿಯಮಗಳನ್ನು ಸ್ವಲ್ಪ ಮಟ್ಟಿಗೆ ಸಡಿಲಿಸುವುದು ಉತ್ತಮ ಎಂಬುದು ನನ್ನ ಅಭಿಪ್ರಾಯ. ಆದರೆ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಸ್( ಪದೇಪದೆ ಕೈ ತೊಳೆದುಕೊಳ್ಳುವುದು) ಮಾಡಿಕೊಳ್ಳುವುದನ್ನು ಕಡ್ಡಾಯವಾಗಿ ಉಳಿಸಿಕೊಂಡೇ ಹೆಜ್ಜೆ ಮುಂದಿಡಬೇಕು ಅನ್ನುವುದೂ ನನ್ನ ಸ್ಪಷ್ಟ ಅಭಿಪ್ರಾಯ. ಹೀಗೆ ಮಾಡುವುದರಿಂದ ಇನ್ನೂ ಅಸ್ತಿತ್ವದಲ್ಲಿರುವ ಕೋವಿಡ್ ಸೋಂಕು ಹರಡುವುದನ್ನು ತಡೆಗಟ್ಟಬಹುದು ಮತ್ತು ಉಸಿರಾಟದ ಕಾರಣಕ್ಕೆ ಹರಡುವ ಹಲವು ಸೋಂಕಿನ ಕಾಯಿಲೆಗಳನ್ನು ತಡೆಯಬಹುದಾಗಿದೆ. ಹಾಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಪದೇಪದೆ ಕೈ ತೊಳೆದುಕೊಳ್ಳುವುದು ಮತ್ತಷ್ಟು ದಿನಗಳ ವರೆಗೆ ಎಲ್ಲರೂ ಪಾಲಿಸಬೇಕಾದ ನಿಯಮವೇ ಆಗಿರಲಿ.
ಹೇಳಲೇಬೇಕಾದ ಮಾತೊಂದಿದೆ. ಏನೆಂದರೆ, ಕೋವಿಡ್ ಅನಾಹುತದಿಂದ ಪಾರಾಗಲೇಬೇಕೆಂದರೆ ಹಲವು ಬಗೆಯ ಎಚ್ಚರಿಕೆ ವಹಿಸಬೇಕಿರುವುದು ಅತ್ಯಗತ್ಯ. ಮಾಸ್ಕ್ ಧರಿಸುವುದು, ಸ್ಯಾನಿಟೈಸ್ ಮಾಡಿಕೊಳ್ಳುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಎಲ್ಲ ನಾಗರಿಕರ ಕರ್ತವ್ಯವಾಗಬೇಕೇ ವಿನಾ ಅದು ಯಾರಿಗೂ ಹೊರೆ ಎಂಬಂತೆ ಭಾಸವಾಗಬಾರದು. ಮಾಸ್ಕ್ ಧರಿಸಿಲ್ಲ ಎಂಬ ಕಾರಣಕ್ಕೆ ದಂಡ ವಿಧಿಸುವ ಸಂದರ್ಭ ಉದ್ಭವಿಸಲೇಬಾರದು. ಕೋವಿಡ್‌ನಿಂದ ಸ್ವಯಂ ರಕ್ಷಣೆ ಪಡೆಯುವುದು, ಅದರಿಂದ ಪಾರಾಗುವುದು ಪ್ರತಿಯೊಬ್ಬರ ಗುರಿಯಾಗಬೇಕು. ಉದ್ದೇಶವೂ ಆಗಬೇಕು. ಗುರಿಸಾಧನೆ ಆಗಬೇಕೆಂದರೆ ಕೆಲವು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು. ಆಗ ಮಾತ್ರ ನಮ್ಮ ನೆಲದಿಂದ ಕೋವಿಡ್ ಕಾಲ್ಕಿಳುವಂತೆ ಮಾಡಬಹುದು ಮತ್ತು ಕೋವಿಡ್ ಜಯಿಸಿದೆವು ಎಂಬ ಹಮ್ಮಿನಲ್ಲಿ ತಲೆಯೆತ್ತಿ ತಿರುಗಬಹುದು.
ಲೇಖಕರು: ಮಣಿಪಾಲ್ ಆಸ್ಪತ್ರೆ ಸಮೂಹದ ಮುಖ್ಯಸ್ಥರು.
– ಡಾ| ಸುದರ್ಶನ ಬಲ್ಲಾಳ್