Advertisement

ಮನೆಯಲ್ಲೂ ಮಾಸ್ಕ್ ಧರಿಸಿ : ಸಾರ್ವಜನಿಕರಿಗೆ ಕೇಂದ್ರ ಸರಕಾರ ಸಲಹೆ

01:38 AM Apr 27, 2021 | Team Udayavani |

ಹೊಸದಿಲ್ಲಿ: “ಈಗ ಮನೆಗಳಲ್ಲೂ ಮಾಸ್ಕ್ ಧರಿಸಿಕೊಂಡೇ ಇರಬೇಕಾದಂಥ ಸಮಯ ಬಂದಿದೆ. ಅದರಲ್ಲೂ ವಿಶೇಷವಾಗಿ ನಿಮ್ಮ ಸುತ್ತಮುತ್ತ ಕೊರೊನಾ ಸೋಂಕಿತರು ಇದ್ದರೆ, ಮಾಸ್ಕ್ ಧರಿಸಿಕೊಂಡಷ್ಟೂ ನೀವು ಸುರಕ್ಷಿತರಾಗಿರುತ್ತೀರಿ’ ಎಂದು ಕೇಂದ್ರ ಸರಕಾರ ಸೋಮವಾರ ದೇಶವಾಸಿಗಳಿಗೆ ಸಲಹೆ ನೀಡಿದೆ.

Advertisement

ಜತೆಗೆ ಕೊರೊನಾ ಸೋಂಕಿನ ಕುರಿತು ಅನಗತ್ಯವಾಗಿ ಆತಂಕಕ್ಕೊಳಗಾಗದಿರಿ. ಇದರಿಂದ ಯಾವುದೇ ಲಾಭವಿಲ್ಲ ಎಂದೂ ಸ್ಪಷ್ಟ ಪಡಿಸಿದೆ. ಇತ್ತೀಚೆಗಷ್ಟೇ ಲ್ಯಾನ್ಸೆಟ್‌ ವರದಿಯು, “ಕೊರೊನಾ ಸೋಂಕು ಗಾಳಿಯ ಮೂಲಕವೂ ಹಬ್ಬುತ್ತದೆ’ ಎಂದು ಹೇಳಿತ್ತು. ಈ ವರದಿಯ ಬೆನ್ನಲ್ಲೇ ಸರಕಾರದಿಂದ ಇಂಥದ್ದೊಂದು ಸಲಹೆ ಕೇಳಿಬಂದಿರುವುದು ಮಹತ್ವ ಪಡೆದಿದೆ.

ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್‌ ಹಾಗೂ ಹಿರಿಯ ಅಧಿಕಾರಿಗಳು, ದೇಶದ ಜನರ ಆತಂಕ ದೂರ ಮಾಡುವ ನಿಟ್ಟಿನಲ್ಲಿ ಕೆಲವು ವಿಚಾರಗಳನ್ನು ತಿಳಿಸಿದ್ದಾರೆ.

“ವೈದ್ಯರ ಸೂಚನೆಯಿಲ್ಲದೇ ಆಸ್ಪತ್ರೆಗೆ ದಾಖಲಾಗಬೇಕಾದ ಅಗತ್ಯವಿಲ್ಲ. ಸುಖಾಸುಮ್ಮನೆ ಉದ್ವೇಗಕ್ಕೆ ಒಳಗಾಗಬಾರದು. ದೇಶದಲ್ಲಿ ಈಗ ಸಾಕಷ್ಟು ವೈದ್ಯಕೀಯ ಆಮ್ಲಜನಕ ಲಭ್ಯವಿದೆ. ಅವುಗಳನ್ನು ಆಸ್ಪತ್ರೆಗಳಿಗೆ ರವಾನಿಸುವುದೇ ಸವಾಲಾಗಿದೆ. ಎಲ್ಲ ಆಸ್ಪತ್ರೆಗಳಿಗೂ ಸಾಕಷ್ಟು ಆಮ್ಲಜನಕ ಪೂರೈಕೆಯಾಗುವಂತೆ ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಅಗರ್ವಾಲ್‌ ಹೇಳಿದ್ದಾರೆ.

ಇದೇ ವೇಳೆ ಎಲ್ಲ ರಾಜ್ಯಗಳೂ ರಾಜ್ಯಮಟ್ಟದಲ್ಲಿ ಅಥವಾ ಜಿಲ್ಲಾ ಮಟ್ಟದಲ್ಲಿ “ಡ್ಯಾಶ್‌ ಬೋರ್ಡ್‌’ ರಚಿಸುವ ಮೂಲಕ, ಆಸ್ಪತ್ರೆಗಳು, ಹಾಸಿಗೆಗಳು, ಆ್ಯಂಬುಲೆನ್ಸ್‌ ಸಹಿತ ರಾಜ್ಯದಲ್ಲಿರುವ ಸೌಲಭ್ಯಗಳ ಕುರಿತು ಮಾಹಿತಿ ಒದಗಿಸಬೇಕು ಎಂದೂ ಸರಕಾರ ಸೂಚಿಸಿದೆ.

Advertisement

3 ವಲಯಗಳಿಗೆ ವಿನಾಯಿತಿ: ವೈದ್ಯಕೀಯೇತರ ಉದ್ದೇಶಗಳಿಗಾಗಿ ದ್ರವೀಕೃತ ಆಮ್ಲಜನಕ ಬಳಕೆಗೆ ನಿರ್ಬಂಧ ಹೇರಿದ ಬೆನ್ನಲ್ಲೇ ಸರಕಾರವು ಮೂರು ವಲಯಗಳಿಗೆ ಇದರಿಂದ ವಿನಾಯಿತಿ ನೀಡಿದೆ. ಆ್ಯಂಪ್ಯೂಲ್‌ ಮತ್ತು ವಯಲ್‌, ಫಾರ್ಮಾಸುಟಿಕಲ್‌ ಮತ್ತು ರಕ್ಷಣ ಪಡೆಗಳಿಗೆ ಇಂಥ ಆಮ್ಲಜನಕಗಳ ಬಳಕೆಗೆ ಅನುಮತಿ ನೀಡಲಾಗಿದೆ.

ಕೇಂದ್ರ ಸರಕಾರದ ಸೂಚನೆಗಳೇನು?
– ಎಲ್ಲ ರಾಜ್ಯಗಳೂ ರಾಜ್ಯಮಟ್ಟದಲ್ಲಿ ಅಥವಾ ಜಿಲ್ಲಾ ಮಟ್ಟದಲ್ಲಿ “ಮಾಹಿತಿ ಕೋಶ’ವೊಂದನ್ನು ರಚಿಸಲಿ
– ಅದರಲ್ಲಿ ಕೊರೊನಾ ಆರೈಕೆ ಕೇಂದ್ರಗಳು, ಆಸ್ಪತ್ರೆಗಳಲ್ಲಿನ ಹಾಸಿಗೆಗಳು, ಆ್ಯಂಬುಲೆನ್ಸ್‌ಗಳು ಹಾಗೂ ಇತರೆ ಎಲ್ಲ ಸೌಲಭ್ಯಗಳ ಕುರಿತು ಮಾಹಿತಿ ಇರಲಿ.
– ಮನೆಯಲ್ಲಿ ಐಸೋಲೇಷನ್‌ ನಲ್ಲಿರುವ ಸೋಂಕಿತರ ಮೇಲೆ ನಿಗಾ ಇಡಿ
– ನಿರ್ಬಂಧ ಹೇರುವುದಿದ್ದರೆ ಅದರ ಕುರಿತು ಸಾರ್ವಜನಿಕರು ಹಾಗೂ ಸಂಬಂಧಪಟ್ಟವರಿಗೆ ಸ್ಪಷ್ಟ ಮಾಹಿತಿ ನೀಡಿ
– ನಿರ್ದಿಷ್ಟ ಪ್ರದೇಶ, ನಗರ, ಜಿಲ್ಲೆಗಳನ್ನು ಕೇಂದ್ರೀಕರಿಸಿಕೊಂಡು ಸೋಂಕು ನಿಯಂತ್ರಣ ಕ್ರಮ ಕೈಗೊಳ್ಳಿ
– ದೇಶದ ಎಲ್ಲ ಆಸ್ಪತ್ರೆಗಳು ಆಮ್ಲಜನಕವನ್ನು ಜಾಗರೂಕತೆಯಿಂದ, ಸೋರಿಕೆಯಾಗದಂತೆ ಬಳಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next