ಹೊಸದುರ್ಗ: ವೈಯಕ್ತಿಕ ಸ್ವತ್ಛತೆ, ಸಾಮಾಜಿಕ ಅಂತರ, ಮಾಸ್ಕ್ ಧರಿಸುವ ಮೂಲಕ ಕೋವಿಡ್ ಸೋಂಕು ಬರದಂತೆ ನಮ್ಮನ್ನು ರಕ್ಷಣೆ ಮಾಡಿಕೊಳ್ಳಬಹುದಾಗಿದೆ ಎಂದು ಕರ್ನಾಟಕ ರಾಜ್ಯ ಮಿನರಲ್ಸ್ ಕಾರ್ಪೋರೇಷನ್ ಅಧ್ಯಕ್ಷ ಎಸ್.ಲಿಂಗಮೂರ್ತಿ ಹೇಳಿದ್ದಾರೆ.
ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಕೋವಿಡ್ ಸೋಂಕಿತರಿಗೆ ವಿತರಿಸಲು 2000 ಕೋವಿಡ್ ಔಷ ಧ ಕಿಟ್ ಹಸ್ತಾಂತರಿಸಿ ಮಾತನಾಡಿದ ಅವರು, ತಾಲೂಕಿನ ಹಳ್ಳಿಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಜನರು ಕೋವಿಡ್ ಸೋಂಕಿಗೆ ತುತ್ತಾಗಿದ್ದಾರೆ. ವೈಯಕ್ತಿಕ ಸ್ವತ್ಛತೆ, ಸಾಮಾಜಿಕ ಅಂತರ, ಮಾಸ್ಕ್ ಧರಿಸುವ ಮೂಲಕ ಸೋಂಕು ಬರದಂತೆ ಮುನ್ನೆಚ್ಚರಿಕೆ ವಹಿಸಬಹುದಾಗಿದೆ. ಸೋಂಕು ತಗುಲಿರುವುದು ಹಲವಾರು ಜನರಿಗೆ ತಿಳಿಯದೇ ಅವರು ಅನುಭವಿಸುವ ನೋವು ಹೇಳಲ್ಲಿಕ್ಕೂ ಸಾಧ್ಯವಾಗದು. ನಾನು ಸಹ ಸೋಂಕಿಗೆ ತುತ್ತಾಗಿ ಚೇತರಿಸಿಕೊಂಡಿದ್ದೇನೆ. ಸೋಂಕಿಗೆ ತುತ್ತಾಗಿರುವವರು ಭಯ ಮತ್ತು ಆತಂಕದಿಂದ ಹೊರ ಬಂದರೇ ಸೋಂಕಿನಿಂದ ಅರ್ಧ ಗೆಲುವು ಸಾಧಿಸಿದಂತೆ. ಒತ್ತಡ ಮತ್ತು ಭಯ ಮುಕ್ತರಾಗಿ ವೈರಸ್‌ನ್ನು ಎದುರಿಸಬೇಕಿದೆ ಎಂದರು.
ಇವತ್ತಿನ ದಿನ ಜಿಲ್ಲೆಯ ವೈದ್ಯರು ಸೇರಿದಂತೆ ಕೋವಿಡ್ ವಾರಿಯರ್ಸ್‌ಗಳು ಸಮರ್ಪಕವಾಗಿ ಕೆಲಸ ಮಾಡುತ್ತಿದ್ದು, ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ಆಕ್ಸಿಜನ್, ಬೆಡ್‌ಗಳ ಬೇಡಿಕೆ ಜಾಸ್ತಿಯಿದೆ. ಈ ಹಿನ್ನೆಲೆಯಲ್ಲಿ ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ 1.25 ಲಕ್ಷ ರೂ. ವೆಚ್ಚದಲ್ಲಿ ಶಾಶ್ವತ ಆಕ್ಸಿಜನ್ ಉತ್ಪಾದಕ ಘಟಕ ನಿರ್ಮಾಣಕ್ಕೆ ಮೊದಲ ಹಂತವಾಗಿ 50 ಲಕ್ಷ ರೂ. ಚೆಕ್ ಅನ್ನು ಜಿಲ್ಲಾ ಧಿಕಾರಿಗಳಿಗೆ ತಲುಪಿಸಿದ್ದೇನೆ. ಸ್ಥಳ ಪರಿಶೀಲನೆ ನಡೆಸಲಾಗಿದ್ದು, ಸದ್ಯದಲ್ಲಿಯೇ ಭೂಮಿಪೂಜೆ ನೆರವೇರಿಸಲಾಗುವುದು. ಸಚಿವರಾದ ಡಾ.ಸುಧಾಕರ್, ಶ್ರೀರಾಮುಲು, ಸಂಸದ ನಾರಾಯಣಸ್ವಾಮಿ, ಶಾಸಕ ಗೂಳಿಹಟ್ಟಿ ಡಿ.ಶೇಖರ್ ಭಾಗವಹಿಸಲಿದ್ದಾರೆ ಎಂದರು.
ಹತ್ತು ಸಾವಿರ ಕೋವಿಡ್ ಕಿಟ್: ಸೋಂಕಿಗೆ ಒಳಗಾಗುವ ಜನರಿಗೆ ಕೋವಿಡ್ ಕಿಟ್ ಪೂರೈಕೆ ಅಗತ್ಯವಾಗಿದೆ ಎಂದು ಮನಗಂಡು ಮೊದಲ ಹಂತವಾಗಿ ಸರಕಾರ ಸೂಚಿಸಿರುವ 2000 ಕೋವಿಡ್ ಕಿಟ್‌ನ್ನು ಆರೋಗ್ಯ ಇಲಾಖೆಗೆ ಹಸ್ತಾಂತರ ಮಾಡಿದ್ದೇನೆ. ಹಂತ ಹಂತವಾಗಿ ಉಳಿದ 8000 ಸಾವಿರ ಕಿಟ್ ಗಳನ್ನು ಸರಬರಾಜು ಮಾಡಲಾಗುವುದು ಎಂದರು. ಈ ವೇಳೆ ತಾಲೂಕು ವೈದ್ಯಾ ಧಿಕಾರಿ ಡಾ.ಚಂದ್ರಶೇಖರ್ ಕಂಬಾಳಿಮಠ, ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ಗೂಳಿಹಟ್ಟಿ ಜಗದೀಶ್, ಬಿಜೆಪಿ ಮುಖಂಡ ಆರ್.ಡಿ.ಸೀತಾರಾಂ, ಮಂಜುನಾಥ್, ಪುರಸಭೆ ಅಧ್ಯಕ್ಷ ಶ್ರೀನಿವಾಸ್, ಸದಸ್ಯರಾದ ದಾಳಿಂಬೆ ಗಿರೀಶ್, ಪ್ರಶಾಂತ್, ನಾಗರಾಜ್, ದೊಡ್ಡಯ್ಯ ಮತ್ತಿತರಿದ್ದರು
ರಾಜಕೀಯ ವಿರೋ ಧಿಗಳು ಮನೆಯಲ್ಲಿ ಕುಳಿತು ನಮ್ಮ ವಿರುದ್ಧ ಟೀಕೆ ಮಾಡಲಿ. ನಾವು ಮಾತ್ರ ರಾಜಕೀಯ ಮಾಡದೇ ಸಂಕಷ್ಟದ ಸಮಯದಲ್ಲಿ ಜನ ಸಾಮಾನ್ಯರ ಸೇವೆ ಮಾಡೋಣ. ಮುಂದಿನ ದಿನಗಳಲ್ಲಿ ಕಾಲವೇ ಎಲ್ಲದ್ದಕ್ಕೂ ಉತ್ತರ ನೀಡಲಿದೆ. –
ಎಸ್.ಲಿಂಗಮೂರ್ತಿ, ಅಧ್ಯಕ್ಷ, ರಾಜ್ಯ ಖನಿಜ ನಿಗಮ.