ದೊಡ್ಡಬಳ್ಳಾಪುರ: ಜವಳಿ ಕ್ಷೇತ್ರಕ್ಕೆ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಸಾಕಷ್ಟು ಉತ್ತೇಜಕರ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ನೇಕಾರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಲಾಗುವುದು ಎಂದು ಬಿಜೆಪಿ ರಾಜಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.
ನಗರದ ದತ್ತಾತ್ರೇಯ ಕಲ್ಯಾಣ ಮಂದಿರ ಆವರಣದಲ್ಲಿ ನಡೆದ ದೇವಾಂಗ ಮಹಾಸಮ್ಮೇಳನದಲ್ಲಿ ಮಾತನಾಡಿದರು. ನೇಕಾರರು ಸಂಕಷ್ಟಗಳನ್ನು ಅನುಭವಿಸುತ್ತಿರುವುದು ಗಮನಕ್ಕೆ ಬಂದಿದ್ದು, ಭಾರತೀಯ ಜನತಾ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ನೇಕಾರರ ಅಭಿವೃದ್ಧಿ ನಿಗಮ ಸ್ಥಾಪಿಸಿ 100 ಕೋಟಿ ರೂ. ಅನುದಾನ ಮೀಸಲಿಡಲಾಗುವುದು ಎಂದರು.
ಹಲವು ಅಭಿವೃದ್ಧಿ ಯೋಜನೆ: ದೇವರ ದಾಸಿಮಯ್ಯ ಪೀಠ ಸ್ಥಾಪನೆ, ನೇಕಾರರ ನಿಗಮ ಸ್ಥಾಪನೆ ಸೇರಿದಂತೆ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರಲಾಗುವುದು. ಕೈ ಮಗ್ಗಗಳ ಪಾರ್ಕ್ ಸ್ಥಾಪಿಸಲಾಗುವುದು. ಇವನ್ನು ಸಮರ್ಪಕವಾಗಿ ಬಳಸಿಕೊಳ್ಳಲು ನೇಕಾರರು ಪ್ರಥಮ ಆದ್ಯತೆ ನೀಡಬೇಕು. ನವಕರ್ನಾಟಕ ನಿರ್ಮಾಣದಲ್ಲಿ ನೇಕಾರ ಸಮುದಾಯ ಪ್ರಮುಖ ಪಾತ್ರವಹಿಸಬೇಕು ಎಂದರು.
ಮಾಜಿ ಶಾಸಕ ಜೆ.ನರಸಿಂಹಸ್ವಾಮಿ, ಕೇಂದ್ರ ರೇಷ್ಮೆ ಮಂಡಲಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ, ಬಿಜೆಪಿ ನಗರ ಅಧ್ಯಕ್ಷ ಕೆ.ಎಚ್.ರಂಗರಾಜು ತಾಲೂಕು ಘಟಕಾಧ್ಯಕ್ಷ ಸಿ.ನಾರಾಯಣಸ್ವಾಮಿ, ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಎಚ್.ಎಸ್.ಶಿವಶಂಕರ್, ನಗರ ಘಟಕಾಧ್ಯಕ್ಷ ಬಂತಿ ವೆಂಕಟೇಶ್, ನಗರ ಸಭೆ ಸದಸ್ಯ ಕೆ.ಎಚ್.ವೆಂಕಟರಾಜು, ಡಿ.ಎಂ.ಚಂದ್ರಶೇಖರ್, ಎನ್.ಕೆ.ರಮೇಶ್, ತೆಲುಗು ದೇವಾಂಗ ಸಂಘದ ಗೌರವ ಸಲಹೆಗಾರ ಎಚ್.ಕೆ.ಗೋವಿಂದಪ್ಪ, ಯುವ ಮುಖಂಡ ಲೋಕೇಶ್ ಇದ್ದರು.