ಮುಂಬಯಿ : ದೇಶದ ಆರ್ಥಿಕ ಪ್ರಗತಿಯ ಸ್ಥೂಲ ಅಂಕಿ ಅಂಶಗಳು ನಿರಾಶಾದಾಯಕವಾಗಿರುವ ಕಾರಣಕ್ಕೆ ಮುಂಬಯಿ ಶೇರು ಪೇಟೆ ಇಂದು ಬುಧವಾರದ ಆರಂಭಿಕ ವಹಿವಾಟಿನಲ್ಲಿ 105 ಅಂಕಗಳ ಕುಸಿತಕ್ಕೆ ಗುರಿಯಾಯಿತು.
ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಏರಿಕೆ ಮತ್ತು ಏಶ್ಯನ್ ಶೇರು ಶೇರು ಪೇಟೆಗಳಲ್ಲಿ ನಿಸ್ತೇಜ ವಾತಾವಾರಣ ಇರುವುದನ್ನು ಅನುಲಕ್ಷಿಸಿ ಕುಸಿತಕ್ಕೆ ಗುರಿಯಾದ ಮುಂಬಯಿ ಶೇರು ಪೇಟೆಯಲ್ಲಿ ಇಂದಿನ ಆರಂಭಿಕ ವಹಿವಾಟಿನಲ್ಲಿ ಎಫ್ಎಂಸಿಜಿ, ಬ್ಯಾಂಕಿಂಗ್, ಪವರ್ ಮಾತ್ರವಲ್ಲದೆ ಹಲವು ಪ್ರಮುಖ ರಂಗದ ಶೇರುಗಳು ಹಿನ್ನಡೆಗೆ ಗುರಿಯಾದವು. ನಿನ್ನೆಯ ವಹಿವಾಟಿನಲ್ಲಿ ಸೆನ್ಸೆಕ್ಸ್ 227.80 ಅಂಕಗಳ ನಷ್ಟಕ್ಕೆ ಗುರಿಯಾಗಿತ್ತು.
ಬೆಳಗ್ಗೆ 10.50ರ ಹೊತ್ತಿಗೆ ಸೆನ್ಸೆಕ್ಸ್ 49.23 ಅಂಕಗಳ ನಷ್ಟದೊಂದಿಗೆ 33,178.76 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 10.70 ಅಂಕಗಳ ನಷ್ಟದೊಂದಿಗೆ 10,229.50 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಡಾಲರ್ ಎದುರು ಇಂದು ರೂಪಾಯಿ 16 ಪೈಸೆಯಷ್ಟು ಕುಸಿದು 64.56 ರೂ. ಮಟ್ಟಕ್ಕೆ ಇಳಿದದ್ದು ಕೂಡ ಮುಂಬಯಿ ಶೇರು ಪೇಟೆಗೆ ಹೊಡೆತವಾಯಿತು.
ಏಶ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ಎಡಿಬಿ) 2018ರ ಭಾರತದ ಜಿಡಿಪಿ ಅಂದಾಜನ್ನು ಶೇ.6.7ಕ್ಕೆ ಇಳಿಸಿರುವುದು ಮುಂಬಯಿ ಶೇರು ಪೇಟೆಗೆ ಆಘಾತಕಾರಿಯಾಯಿತು.