ರಾಂಚಿ: ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ನಿಟ್ಟಿನಲ್ಲಿ ಜಾರ್ಖಂಡ್ ಅಭಿವೃದ್ಧಿಯೂ ಹೆಚ್ಚಿನ ಮಹತ್ವ ಪಡೆದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಇದನ್ನೂ ಓದಿ:Lok Sabha Election: ಯಾರಾಗಲಿದ್ದಾರೆ ಗೋವಾ ಉತ್ತರ, ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ?
ಅವರು ಶುಕ್ರವಾರ (ಮಾರ್ಚ್ 01) ಜಾರ್ಖಂಡ್ ನ ಧನ್ ಬಾದ್ ನ ಸಿಂದ್ರಿಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ನಮ್ಮ ಸರ್ಕಾರ ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಜಾರ್ಖಂಡ್ ಅಭಿವೃದ್ಧಿಗೆ ಆದ್ಯತೆ ನೀಡಿದೆ ಎಂದರು.
ಕಳೆದ ಹತ್ತು ವರ್ಷಗಳಲ್ಲಿ ನಾವು ಜಾರ್ಖಂಡ್ ಗಾಗಿ ಕಾರ್ಯನಿರ್ವಹಿಸಿದ್ದೇವೆ. ಜಾರ್ಖಂಡ್ ನ ಬುಡಕಟ್ಟು ಸಮುದಾಯ, ಬಡವರು, ಯುವಕರು ಮತ್ತು ಮಹಿಳೆಯರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿರುವುದಾಗಿ ಪ್ರಧಾನಿ ಮೋದಿ ಹೇಳಿದರು.
2023ನೇ ಸಾಲಿನ ಅಕ್ಟೋಬರ್ ನಿಂದ ಡಿಸೆಂಬರ್ ವರೆಗಿನ ಆರ್ಥಿಕ ಪ್ರಗತಿಯಲ್ಲಿ ಭಾರತ ಶೇ.8.4ರಷ್ಟು ಏರಿಕೆ ಕಂಡಿದೆ. ಎಲ್ಲಾ ನಿರೀಕ್ಷೆಗಳನ್ನು ಮೀರಿ ಭಾರತ ಜಗತ್ತಿನಲ್ಲಿಯೇ ಅತ್ಯಂತ ವೇಗದ ಆರ್ಥಿಕತೆಯತ್ತ ಹೆಜ್ಜೆ ಹಾಕುತ್ತಿದೆ ಎಂದು ಪ್ರಧಾನಿ ತಿಳಿಸಿದರು.
ವಿಕಸಿತ ಭಾರತದ ಕಲ್ಪನೆಯಲ್ಲಿ ಜಾರ್ಖಂಡ್ ಕೂಡಾ ಅಭಿವೃದ್ಧಿ ಪಥದತ್ತ ಸಾಗಲು ಎಲ್ಲಾ ರೀತಿಯಿಂದಲೂ ಪ್ರಾಮುಖ್ಯತೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ರೈಲು, ಇಂಧನ, ಕಲ್ಲಿದ್ದಲು ಸೇರಿದಂತೆ ಜಾರ್ಖಂಡ್ ನಲ್ಲಿ ಪ್ರಧಾನಿ ಮೋದಿ ಅವರು 35,700 ಕೋಟಿ ರೂಪಾಯಿ ವೆಚ್ಚದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು.