ಬೆಂಗಳೂರು: ಆರ್ .ಆರ್. ನಗರ ಮತ್ತು ಶಿರಾ ಉಪಚುನಾವಣೆಗಳಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದು ಚುನಾವಣೋತ್ತರ ಸಮೀಕ್ಷೆ ಹೇಳಿದರೂ ಎರಡೂ ಕ್ಷೇತ್ರಗಳಲ್ಲೂ ನಾವು ಗೆಲ್ಲುವ ಭರವಸೆ ಇದೆ. ನಾನು ಎರಡೂ ಕಡೆ ಪ್ರಚಾರ ಮಾಡಿದ್ದೇನೆ, ಎರಡೂ ಕಡೆ ಗೆಲ್ಲಲಿದ್ದೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಹಾರದಲ್ಲಿ ಲಾಲು ಮತ್ತು ಕಾಂಗ್ರೆಸ್ ಮಹಾಘಟಬಂಧನ ಗೆಲ್ಲಲಿದೆ ಎಂದು ಬಹುತೇಕ ಸಮೀಕ್ಷೆಗಳು ಹೇಳಿವೆ. ನನಗೂ ಮಹಾಘಟಬಂಧನ ಗೆಲ್ಲುತ್ತದೆ ಎಂದು ಅನಿಸಿದೆ. ಯಾಕೆಂದರೆ ಯುವಕರು ಲಾಲೂ ಪುತ್ರ ತೇಜಸ್ವಿ ಯಾದವ್ ಮಗನ ಕಾರ್ಯಕ್ರಮಗಳಲ್ಲಿ ಭಾಗವಹಿಸ್ತಿದ್ದರು. ತೇಜಸ್ವಿ ಯಾದವ್ ಆಯೋಜಿಸಿದ್ದ ಸಭೆಗಳು ದೊಡ್ಡದಾಗಿ ನಡೆಯುತ್ತಿದ್ದವು. ನಿತೀಶ್ ಕುಮಾರ್ ಅವರ ಸಭೆಗಳೂ ಇಷ್ಟು ದೊಡ್ಡದಾಗಿ ನಡೆಯುತ್ತಿರಲಿಲ್ಲ, ಬಿಹಾರದಲ್ಲಿ ಈ ಸಲ ಜನ ಬದಲಾವಣೆ ಮಾಡಬಹುದು ಎಂದರು.
ಇದನ್ನೂ ಓದಿ:ತಮಿಳುನಾಡು: ಮಾಜಿ ಐಎಎಸ್ ಅಧಿಕಾರಿ ಶಶಿಕಾಂತ್ ಸೆಂಥಿಲ್ ರಾಜಕೀಯ ಪ್ರವೇಶಕ್ಕೆ ವೇದಿಕೆ ಸಜ್ಜು
ಮಾಜಿ ಸಚಿವ ವಿನಯ್ ಕುಲಕರ್ಣಿ ಬಂಧನ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇದು ರಾಜಕೀಯ ಪ್ರೇರಿತ ಪ್ರಕರಣ, ಚಾರ್ಜ್ ಶೀಟ್ ಹಾಕಿದ ಮೇಲೆ ಕೇಸ್ ತೆರೆದಿದ್ದಾರೆ. ಪ್ರಕರಣ ಸಿಬಿಐಗೆ ವಹಿಸಿ ವಿನಯ್ ಕುಲಕರ್ಣಿ ಬಂಧಿಸುವಂತೆ ಮಾಡಿದ್ದಾರೆ. ಬಿಜೆಪಿ ಸರ್ಕಾರ ಲಜ್ಜೆಗೆಟ್ಟ ಸರ್ಕಾರ ಎಂದು ದೂರಿದರು.
ಹಗರಿಬೊಮ್ಮನಹಳ್ಳಿ ಕಾಂಗ್ರೆಸ್ ಶಾಸಕ ಭೀಮಾನಾಯ್ಕ್ ಬಿಜೆಪಿಗೆ ತೋಳು ತಟ್ಟಿ ಸವಾಲ್ ಹಾಕಿದ ವಿಚಾರವಾಗಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಶಾಸಕರ ಕೆಲಸ ಜನಸೇವೆ, ಕುಸ್ತಿಯಲ್ಲ. ಭೀಮಾ ನಾಯ್ಕ್ ತೋಳು ತಟ್ಟಿದರೆ ಅದು ತಪ್ಪು. ನಮ್ಮ ಶಾಸಕ ಅಂತ ನಾವು ಸಮರ್ಥನೆ ಮಾಡುವುದಿಲ್ಲ. ಒಂದು ವೇಳೆ ಭೀಮಾನಾಯ್ಕ್ ಹಾಗೆ ಮಾಡಿದರೆ ಅದು ತಪ್ಪು ಎಂದರು.