Advertisement

ಕೇಂದ್ರ ಸರಕಾರ ‘ನೋ’ ಅಂದ್ರೆ ನಾವು ವಿಶ್ವಕಪ್‌ ಆಡೋದಿಲ್ಲ: ಶಾಸ್ತ್ರಿ!

11:52 AM Mar 20, 2019 | Karthik A |

ಮುಂಬಯಿ: ಭಾರತ ಮತ್ತು ಪಾಕಿಸ್ಥಾನದ ನಡುವೆ ಉಂಟಾಗಿರುವ ರಾಜತಾಂತ್ರಿಕ ಬಿಕ್ಕಟ್ಟು ಮುಂಬರುವ ವಿಶ್ವಕಪ್‌ ಕ್ರಿಕೆಟ್‌ ಮೇಲೂ ಪರಿಣಾಮ ಬೀಳುವ ಸಾಧ್ಯತೆಗಳಿವೆಯೇ? ಭಾರತ ಕ್ರಿಕೆಟ್‌ ತಂಡದ ಮುಖ್ಯ ತರಬೇತದಾರ ರವಿಶಾಸ್ತ್ರಿ ಅವರ ಮಾತುಗಳನ್ನು ಕೇಳುತ್ತಿದ್ದರೆ ಆ ರೀತಿಯ ಅನುಮಾನಗಳು ಕ್ರಿಕೆಟ್‌ ಅಭಿಮಾನಿಗಳನ್ನು ಕಾಡದೇ ಇರದು. ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ರವಿಶಾಸ್ತ್ರಿ ಅವರು ಇಂತಹ ಒಂದು ಸಾಧ್ಯತೆಗಳನ್ನು ಅಲ್ಲಗಳೆದಿಲ್ಲ. ‘ಏನಾಗುತ್ತಿದೆ ಎಂಬುದನ್ನು ಬಿಸಿಸಿಐ ಮತ್ತು ಕೆಂದ್ರ ಸರಕಾರವು ಹತ್ತಿರದಿಂದ ಗಮನಿಸುತ್ತಿದೆ, ಮತ್ತು ಈ ಕುರಿತಾದ ನಿರ್ಧಾರವನ್ನು ಅವರೇ ತೆಗೆದುಕೊಳ್ಳುತ್ತಾರೆ. ಇದು ತುಂಬಾ ಸೂಕ್ಷ್ಮವಾದ ವಿಚಾರವಾಗಿರುವ ಕಾರಣ ನೀವು ವಿಶ್ವಕಪ್‌ ಆಡುವುದು ಬೇಡ ಎಂದು ಒಂದುವೇಳೆ ಕೇಂದ್ರ ಸರಕಾರ ನಮಗೆ ಸೂಚನೆ ನೀಡಿದರೆ, ನಾನಂತೂ ಖಂಡಿತವಾಗಿಯೂ ಸರಕಾರದ ನಿರ್ಧಾರವನ್ನು ಬೆಂಬಲಿಸುತ್ತೇನೆ’ ಎಂದು ಅವರು ಹೇಳಿದರು.

Advertisement

ಮತ್ತೂಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, ನಾಯಕ ವಿರಾಟ್‌ ಕೊಹ್ಲಿ ಮತ್ತು ಅನಿಲ್‌ ಕುಂಬ್ಲೆ ನಡುವೆ ಏನಾಗಿತ್ತು ಎಂಬುದು ನನಗೆ ತಿಳಿದಿರಲಿಲ್ಲ ಮತ್ತು ನಾನಂತೂ ಮೊದಲ ಸಲ ಕೋಚ್‌ ಹುದ್ದೆಗೆ ಅರ್ಜಿಯನ್ನೇ ಹಾಕಿರಲಿಲ್ಲ ಎಂದು ರವಿಶಾಸ್ತ್ರಿ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು. ರವಿಶಾಸ್ತ್ರಿ ಅವರ ತರಬೇತಿ ಅಡಿಯಲ್ಲಿ ಪಳಗಿರುವ ‘ಬ್ಲೂ ಬಾಯ್ಸ್’ ಸದ್ಯ ಟೆಸ್ಟ್‌ ರಾಂಕಿಂಗ್‌ ನಲ್ಲಿ ಅಗ್ರಸ್ಥಾನ, ಏಕದಿನ ಮತ್ತು ಟಿ20 ರಾಂಕಿಂಗ್‌ ನಲ್ಲಿ 2ನೇ ಸ್ಥಾನವನ್ನಲಂಕರಿಸಿದೆ. ಮಾತ್ರವಲ್ಲದೇ ಆಸ್ಟ್ರೇಲಿಯಾ ನೆಲದಲ್ಲಿ 71 ವರ್ಷಗಳ ಬಳಿಕ ಏಷ್ಯಾದ ತಂಡವೊಂದು ಟೆಸ್ಟ್‌ ಸರಣಿ ಗೆದ್ದ ಸಾಧನೆಯನ್ನೂ ಕೊಹ್ಲಿ ಪಡೆ ಮಾಡಿದೆ.

ಈ ಬಾರಿಯ ವಿಶ್ವಕಪ್‌ ಮೇ 30ರಂದು ಆಂಗ್ಲರ ನಾಡಿನಲ್ಲಿ ಪ್ರಾರಂಭವಾಗಲಿದೆ. ಇಲ್ಲಿ ಭಾರತ ಮತ್ತು ಪಾಕಿಸ್ಥಾನ ನಡುವಿನ ಪಂದ್ಯಗಳ ಕುರಿತಾಗಿ ಎದ್ದಿರುವ ಗೊಂದಲ ಇನ್ನೂ ಪರಿಹಾರಗೊಂಡಿಲ್ಲ. ಈ ಎಲ್ಲಾ ಹಿನ್ನಲೆಯಲ್ಲಿ ರವಿಶಾಸ್ತ್ರಿ ಅವರ ಮೇಲಿನ ಹೇಳಿಕೆ ಮಹತ್ವದ್ದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next