Advertisement

ಕಂಡವರ ಜೇಬು ಭರ್ತಿ ಮಾಡುವ ‘ನೀಟ್’ ದಂಧೆಗೆ ಚರಮಗೀತೆ ಹಾಡುತ್ತೇವೆ: ಎಚ್ ಡಿ ಕುಮಾರಸ್ವಾಮಿ

01:43 PM Mar 03, 2022 | Team Udayavani |

ಬೆಂಗಳೂರು: 2023ರಲ್ಲಿ ಜೆಡಿಎಸ್ ಸರಕಾರ ಬಂದರೆ ನೀಟ್ ವಿರುದ್ಧ ಅಸೆಂಬ್ಲಿಯಲ್ಲಿ ನಿರ್ಣಯ ಕೈಗೊಳ್ಳುತ್ತೇವೆ. ನಾವು ನೀಟ್ ವಿರೋಧಿಸುತ್ತೇವೆ. ಮಕ್ಕಳ ಜೀವಕ್ಕೆ ಕುಣಿಕೆ ಬಿಗಿದು ಕಂಡವರ ಜೇಬು ಭರ್ತಿ ಮಾಡುವ ಈ ದಂಧೆ ಬೇಕಿಲ್ಲ. ಅದಕ್ಕೆ ಚರಮಗೀತೆ ಹಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಎಚ್ ಡಿಕೆ, ಪ್ರಶ್ನೆ ಮಾಡಿದರೆ ದ್ರೋಹವೇ? ಧನದಾಹವೇ? ಕರ್ನಾಟಕದ ಉನ್ನತ ಶಿಕ್ಷಣ ಸಚಿವರು ಕಟ್ಟಿರುವ ಈ ಹಣಿಪಟ್ಟಿ ಬಗ್ಗೆ ಏನೂ ಹೇಳಬೇಕೋ ಕಾಣೆ. ನೀಟ್ ವಿರೋಧಿಸುವವರು ಧನಧಾಹಿಗಳು, ದ್ರೋಹಿಗಳು ಎಂದು ಅವರು ಯಾರನ್ನು ಉದ್ದೇಶಿಸಿ ಹೇಳಿದ್ದು ಎನ್ನುವುದನ್ನು ಅವರೇ ತಿಳಿಸಬೇಕು ಎಂದಿದ್ದಾರೆ.

ನಾನು ಮೆಡಿಕಲ್ ಕಾಲೇಜು ನಡೆಸುತ್ತಿಲ್ಲ. ಎಂಜಿನಿಯರಿಂಗ್ ಕಾಲೇಜನ್ನೂ ನಡೆಸುತ್ತಿಲ್ಲ. ಕೊನೆಪಕ್ಷ ಒಂದು ಸಣ್ಣ ಕೈಗಾರಿಕೆಯೂ ಇಲ್ಲ. ಬಿಡದಿಯ ತೋಟ ಬಿಟ್ಟರೆ ನನ್ನದೂ ಎನ್ನುವಂಥದ್ದು ಏನೂ ಇಲ್ಲ. ಆದರೂ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ದ್ರೋಹಿಗಳು, ಧನದಾಹಿಗಳು ಎಂದು ನಾಲಿಗೆ ಜಾರಿ, ತಮ್ಮ ಉನ್ನತ ಗುಣವನ್ನು ಜಗಜ್ಜಾಹೀರು ಮಾಡಿಕೊಂಡಿದ್ದಾರೆ ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ:ವೈದ್ಯಕೀಯ ಶಿಕ್ಷಣವನ್ನು ದುಬಾರಿಯನ್ನಾಗಿ ಮಾಡಿದ್ದು ಕಾಂಗ್ರೆಸ್: ಬಿಜೆಪಿ ಆರೋಪ

ಕೇಂದ್ರದ ಒಬ್ಬ ಸಚಿವರು, ನೀಟ್ ಪರೀಕ್ಷೆ ಪಾಸ್ ಮಾಡಲಾಗದ ವಿದ್ಯಾರ್ಥಿಗಳು ವಿದೇಶಕ್ಕೆ ಹೋಗುತ್ತಾರೆ ಎಂದು ಆ ಮಕ್ಕಳ ಸ್ವಾಭಿಮಾನವನ್ನು ಅಪಮಾನಿಸಿದ್ದರೆ, ಉನ್ನತ ಶಿಕ್ಷಣ ಸಚಿವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ದ್ರೋಹದ ಹಣೆಪಟ್ಟಿ ಕಟ್ಟಿ ದೊಡ್ಡತನ ಮೆರೆದಿದ್ದಾರೆ. ನೀಟ್ ಬಂದ ಮೇಲೆ ಬಡ, ಮಧ್ಯಮ ವರ್ಗದ ಮಕ್ಕಳಿಗೆ ಅನ್ಯಾಯ ಆಗಿಲ್ಲವೇ? ಲಕ್ಷ ಲಕ್ಷ ಕಿತ್ತು ಪೋಷಕರ ರಕ್ತ ಹೀರುವ ಟ್ಯೂಷನ್ ಅಂಗಡಿಗಳು ಸರಕಾರದ ಕಣ್ಣಿಗೆ ಕಾಣುತ್ತಿಲ್ಲವೇ? ನೀಟ್ ಸುಳಿಗೆ ಸಿಕ್ಕಿ ಜೀವ ಕಳೆದುಕೊಂಡ ಮಕ್ಕಳ ಅತ್ಮರೋಧನೆ ಕೇಳುತ್ತಿಲ್ಲವೇ? ವಿದ್ಯಾರ್ಥಿಗಳ ಆರ್ತನಾದ ಕೇಳುತ್ತಿಲ್ಲವೆಂದರೆ ಸಚಿವರು ಮತ್ತು ಸರಕಾರಕ್ಕೆ ಕಣ್ಣು, ಕಿವಿ ಇಲ್ಲ ಎಂದು ಭಾವಿಸಬೇಕಾಗುತ್ತದೆ ಎಂದು ಕುಮಾರಸ್ವಾಮಿ ಟೀಕೆ ಮಾಡಿದ್ದಾರೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next