ಬೆಂಗಳೂರು: ಕರಾವಳಿ ಮತ್ತು ಮುಂಬೈ ಕರ್ನಾಟಕ ಭಾಗದಲ್ಲಿ ಬಿಜೆಪಿ ನಡುವೆ ನೇರ ಸೆಣಸಾಟ ಇದ್ದರೂ ನಾವು 20ರಿಂದ 22 ಸೀಟುಗಳನ್ನು ಖಚಿತವಾಗಿ ಗೆಲ್ಲಲಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಟ್ವಿಟ್ಟರ್ ಸಂವಾದಲ್ಲಿ ಮಾತನಾಡಿದ ಅವರು, 28 ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳು 20ರಿಂದ 22 ಸ್ಥಾನಗಳಲ್ಲಿ ಖಚಿತವಾಗಿ ಗೆಲುವು ಸಾಧಿಸಲಿದ್ದಾರೆ ಎಂದು ತಿಳಿಸಿದರು.
ಭಾನುವಾರ ನಡೆಯಲಿರುವ ಜಂಟಿ ಸಮಾವೇಶದಲ್ಲಿ ಮೈತ್ರಿ ಶಕ್ತಿ ಏನು ಎಂಬುದು ತಿಳಿಯಲಿದೆ. ಬೆಂಗಳೂರು ಮತ್ತು ಹೈದರಾಬಾದ್ ಕರ್ನಾಟಕದಲ್ಲಿ ಎಲ್ಲ ಸೀಟುಗಳನ್ನು ಗೆಲ್ಲಿದ್ದೇವೆ. ಕರಾವಳಿ ಮತ್ತು ಮುಂಬೈ ಕರ್ನಾಟಕದಲ್ಲಿ ಬಿಜೆಪಿ ನಡುವೆ ನೇರ ಸ್ಪರ್ಧೆ ಇದೆ. ಸ್ಪಲ್ಪ ಜಾಸ್ತಿ ಪ್ರಯತ್ನಪಟ್ಟರೇ ಅಲ್ಲಿಯೂ ಗೆಲುವು ಸಾಧಿಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನ ಎಲ್ಲರಿಗೂ ಸಿಗಲ್ಲ: ಸಚಿವನಾಗಿ ಒಂದು ಬಾರಿ ಕೆಲಸ ಮಾಡಿದ್ದೇನೆ. ಅನೇಕರಿಗೆ ಸಚಿವರಾಗಿ ಕೆಲಸ ಮಾಡುವ ಅವಕಾಶವೂ ಸಿಗುತ್ತದೆ. ಆದರೆ, ಕೆಪಿಸಿಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುವುದು ಅತ್ಯಂತ ಗೌರವದ ವಿಚಾರ. ಇದು ಎಲ್ಲರಿಗೂ ಸಿಗುವುದಿಲ್ಲ. ಅಧ್ಯಕ್ಷನಾಗಿ ಸೇವೆ ಸಲ್ಲಿಸುತ್ತಿರುವುದಕ್ಕೆ ಹೆಮ್ಮೆ ಇದೆ ಎಂದರು.
ಕಾಂಗ್ರೆಸ್‌ನಲ್ಲಿ ಎಡಪಂಥೀಯರು, ಬಲಪಂಥೀಯರು, ಯಥಾಸ್ಥಿತಿವಾದಿಗಳು, ಪ್ರಗತಿಪರರು ಎಲ್ಲರೂ ಇದ್ದಾರೆ. ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣದಲ್ಲಿ ಯಾರೂ ಆಕ್ರಮಣಕಾರಿಯಾಗಿಲ್ಲ. ಆದರೆ, ಬಿಜೆಪಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕಾರಕ್ಕಾಗಿಯೇ ತಂಡವನ್ನು ಸಿದ್ಧಪಡಿಸುತ್ತಾರೆ. ಕಾಂಗ್ರೆಸ್ ಪಕ್ಷ ಜನ ಸೇವೆ ಹಾಗೂ ದೇಶ ಸೇವೆಗೆ ಸದಾ ಮುಂದಿದೆ ಎಂದು ಹೇಳಿದರು. ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜು ಅವರು ಟ್ವಿಟ್ಟರ್ ಸಂವಾದ ನಡೆಸಿಕೊಟ್ಟರು.