ಬೆಂಗಳೂರು: ಖಂಡಿತಾ ಡಾ. ಪರಮೇಶ್ವರ್ ಅವರ ಮಾತು ಕೇಳಿಯೇ ತೀರ್ಮಾನ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಶಿವಕುಮಾರ್ ಹೇಳಿದ್ದಾರೆ. ನವದೆಹಲಿಗೆ ತೆರಳುವ ಮುನ್ನ ಸೋಮವಾರ ರಾತ್ರಿ ಸಭೆ ಸೇರಿದ್ದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್, ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಿಕೊಂಡು ಮಂಗಳವಾರ ಬೆಳಗ್ಗೆ ಒಟ್ಟಿಗೆ ದೆಹಲಿ ತಲುಪಿದರು. ಇದಕ್ಕೂ ಮುನ್ನ ಮಾತನಾಡಿದ ಡಿಸಿಎಂ, ಪರಮೇಶ್ವರ್ ಮಾತು ಕೇಳಿಯೇ ಕೇಳುತ್ತೇವೆ ಎಂದು ಹೇಳಿ ದೆಹಲಿಯತ್ತ ಪ್ರಯಾಣ ಬೆಳೆಸಿದರು.
300ಕ್ಕೂ ಹೆಚ್ಚು ಜನ ಆಕಾಂಕ್ಷಿಗಳಿದ್ದಾರೆ. ಎಲ್ಲ ವರ್ಗದಲ್ಲೂ ಆಕಾಂಕ್ಷಿಗಳು ಇದ್ದಾರೆ. ಎಲ್ಲ ವರ್ಗಕ್ಕೂ ಕೊಡಲಾಗುವುದಿಲ್ಲ. ಇರುವುದೇ 7 ಸ್ಥಾನ. ಹಾಲಿ ಸದಸ್ಯರೂ ಇದ್ದಾರೆ. ಎಲ್ಲರೂ ಪಕ್ಷಕ್ಕಾಗಿ ದುಡಿದವರೇ ಇದ್ದಾರೆ. ಕೆಲವರಿಗೆ ಬ್ಲಾಕ್ ಮಟ್ಟದಲ್ಲಿ ಸ್ಥಾನ ಸಿಕ್ಕಿದೆ, ಕೆಲವರಿಗೆ ಜಿಲ್ಲಾ ಮಟ್ಟದಲ್ಲಿ ಸ್ಥಾನ ಸಿಕ್ಕಿದೆ. ಮಲೆನಾಡಿಗೂ ಕೊಡಬೇಕು, ಕರಾವಳಿಗೂ ಕೇಳುತ್ತಾರೆ, ಕಲ್ಯಾಣ, ಕಿತ್ತೂರು, ಬೆಂಗಳೂರು, ಮೈಸೂರು ಕರ್ನಾಟಕ ಎಲ್ಲ ಕಡೆ ಹಂಚಬೇಕು. ಕಷ್ಟಕರ ಸ್ಥಿತಿ ಇದೆ. ನೋಡೋಣ. ಖಂಡಿತಾ ಪರಮೇಶ್ವರ್ ಅವರ ಮಾತು ಕೇಳಿಯೇ ಕೇಳುತ್ತೇವೆ ಎಂದಷ್ಟೇ ಹೇಳಿದರು.
ಪಕ್ಷಕ್ಕೆ ನಿಷ್ಠೆಯಿಂದ ಕೆಲಸ ಮಾಡಿದವರು, ಸಾಮಾಜಿಕ ನ್ಯಾಯ ಎಲ್ಲವನ್ನೂ ನೋಡಿ ವರಿಷ್ಠರು ತೀರ್ಮಾನ ಮಾಡುತ್ತಾರೆ. ನಮ್ಮದು ದೊಡ್ಡ ಪಕ್ಷ. ಕಾರ್ಯಕರ್ತರು, ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆಕಾಂಕ್ಷಿಗಳೂ ಹೆಚ್ಚಿದ್ದಾರೆ. ಎಲ್ಲರ ಅಭಿಪ್ರಾಯ ಪಡೆದೇ ಆಯ್ಕೆ ಮಾಡುತ್ತಾರೆ. ಎಲ್ಲರಿಗೂ ಅವರವರ ಅಭಿಪ್ರಾಯ ಹೇಳುವ ಅವಕಾಶವೂ ಇದೆ.
– ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ