ಕಲಬುರಗಿ: ಮುಂದಿನ ವರ್ಷ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಗೆಲುವು ಸಾಧಿಸಿ ವಿಧಾನಸೌಧದ ಮೂರನೇ ಮಹಡಿಯಲ್ಲಿ ಕೂರಲಿದ್ದೇವೆ. ಸಮಾವೇಶದಲ್ಲಿ ಪಾಲ್ಗೊಂಡ ಜನಸಾಗರ ನೋಡಿ ಆನೆ ಬಲ ಬಂದಂತಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಒಬಿಸಿ ವಿರಾಟ ಸಮಾವೇಶದಲ್ಲಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ಸಂಕಲ್ಪ ನಮ್ಮದು. 1,500 ಕೋಟಿ ಅನುದಾನವನ್ನು 3 ಸಾವಿರ ಕೋಟಿಗೆ ಈಗಾಗಲೇ ಹೆಚ್ಚಿಸಿದ್ದು, ಮುಂದಿನ ವರ್ಷ ಅದನ್ನು 5 ಸಾವಿರ ಕೋಟಿ ರೂ.ಗೆ ಏರಿಸಲಾಗುವುದು. ಮತ್ತೆ ನಾವೇ ಅಧಿಕಾರಕ್ಕೆ ಬರುವುದರಿಂದ 5 ಸಾವಿರ ಕೋಟಿ ರೂ. ತೆಗೆದಿಡುವಲ್ಲಿ ಯಾವುದೇ ಅನುಮಾನ ಇಲ್ಲ ಎಂದರು.
ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ಹಿಂದುಳಿದ ವರ್ಗಗಳ ರಾಷ್ಟ್ರೀಯ ಅಧ್ಯಕ್ಷ ಡಾ.ಲಕ್ಷ್ಮಣ ಸೇರಿದಂತೆ ರಾಜ್ಯದ ಸಚಿವರು, ನಾಯಕರು, ಮುಖಂಡರು ಹಾಜರಿದ್ದರು.
ನೈಜ ಸಾಮಾಜಿಕ ನ್ಯಾಯ, ಅವಕಾಶ, ಸಮಾನತೆಯನ್ನು ನಾವು ನೀಡುತ್ತಿದ್ದೇವೆ. ಹಿಂದುಳಿದ ವರ್ಗದ ಮೋದಿ ಇದಕ್ಕೆ ಪ್ರೇರಣೆ . ಹಿಂದುಳಿದ ವರ್ಗ ಸೇರಿದಂತೆ ಸಬ್ ಕಾ ಸಾಥ್, ಸಬ್ ಕಾ ವಿಕಾಸ್‌ಗಾಗಿ ಮೋದಿ ಶ್ರಮಿಸುತ್ತಿದ್ದಾರೆ. ಜನರಿಗಾಗಿ ರಾಜಕಾರಣ ಮಾಡುತ್ತೇವೆ. ಒಬಿಸಿ ವರ್ಗಕ್ಕೆ ನ್ಯಾಯ ಕೊಡುತ್ತೇವೆ. ಒಟ್ಟಾರೆ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಬದ್ಧನಿದ್ದೇನೆ.
– ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ
ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ. ಕರ್ನಾಟಕದಲ್ಲಿ ಜನಕಲ್ಯಾಣ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗಲು ಬಿಜೆಪಿಯನ್ನು ಮತ್ತೆ ಗೆಲ್ಲಿಸಿ. ಬಿಜೆಪಿ ಮತ್ತೆ ಅಧಿ ಕಾರ ಪಡೆಯಲಿದೆ ಎಂಬುದಕ್ಕೆ ಇಲ್ಲಿನ ಜನಸಮುದ್ರವೇ ಸಾಕ್ಷಿ.
– ಶಿವರಾಜ್ ಸಿಂಗ್ ಚೌಹಾಣ್, ಮಧ್ಯಪ್ರದೇಶ ಸಿಎಂ