Advertisement

ಒಗ್ಗಟ್ಟಿನಿಂದ ಪಕ್ಷವನ್ನು ಅಧಿಕಾರಕ್ಕೆ ತರಲಿದ್ದೇವೆ: ಸಿದ್ದು, ಡಿಕೆಶಿ ಸ್ಪಷ್ಟನೆ

10:22 PM Apr 04, 2023 | Team Udayavani |

ಬೆಂಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಕಾಂಕ್ಷಿಯಾಗುವುದರಲ್ಲಿ ತಪ್ಪೇನಿದೆ? ಮುಖ್ಯಮಂತ್ರಿ ಹುದ್ದೆಗೆ ನಾನೂ ಒಬ್ಬ ಆಕಾಂಕ್ಷಿಯಾಗಿದ್ದೇನೆ. ನನ್ನಂತೆಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಕೂಡ ಆಕಾಂಕ್ಷಿಯಾಗಿದ್ದಾರೆ. ಅಂತಿಮ ಆಯ್ಕೆ ಹೊಸದಾಗಿ ಆಯ್ಕೆಯಾಗುವ ಶಾಸಕರದ್ದಾಗಿರುತ್ತದೆ’.

Advertisement

– ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿರುವ ತಮ್ಮ ಹೇಳಿಕೆ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ನೀಡಿದ ಸ್ಪಷ್ಟನೆ ಇದು. ಖಾಸಗಿ ಸುದ್ದಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಡಿ.ಕೆ. ಶಿವಕುಮಾರ್‌ ಅವರಿಗೆ ಪಕ್ಷದ ಹೈಕಮಾಂಡ್‌ ಮುಖ್ಯಮಂತ್ರಿ ಸ್ಥಾನ ಕೊಡುವುದಿಲ್ಲ. ನನಗೇ ನೀಡಲಿದೆ ಎಂದು ಸಿದ್ದರಾಮಯ್ಯ ಹೇಳಿರುವುದಾಗಿ ಪ್ರಸಾರವಾಗಿತ್ತು.

ದಿಲ್ಲಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸ್ಥಾನಕ್ಕೆ ನಾನು ಮಾತ್ರವಲ್ಲ; ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್‌, ಮಾಜಿ ಉಪ ಮುಖ್ಯಮಂತ್ರಿ ಡಾ| ಜಿ. ಪರಮೇಶ್ವರ ಸೇರಿ ಹಲವರು ಆಕಾಂಕ್ಷಿಗಳಿದ್ದಾರೆ. ಹೈಕಮಾಂಡ್‌ ಅಂತಿಮ ತೀರ್ಮಾನ ಕೈಗೊಳ್ಳಲಿದೆ’ ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ಆಡಳಿತದಿಂದ ಜನ ಬೇಸತ್ತಿದ್ದಾರೆ. 40 ಪರ್ಸೆಂಟ್‌ ಕಮಿಷನ್‌ ಸರಕಾರವು ಭ್ರಷ್ಟಾಚಾರವನ್ನು ಬಿಟ್ಟು ಬೇರೇನೂ ಮಾಡಿಲ್ಲ. ಆಪರೇಷನ್‌ ಕಮಲದಿಂದ ಅಸ್ತಿತ್ವಕ್ಕೆ ಬಂದ ಈ ಸರಕಾರ ರಾಜ್ಯವನ್ನು ಲೂಟಿ ಮಾಡಿದೆ. ಜನತೆ ಬಿಜೆಪಿ ಸರಕಾರವನ್ನು ಕಿತ್ತೂಗೆಯಲು ತೀರ್ಮಾನಿಸಿದ್ದು, ಕಾಂಗ್ರೆಸ್‌ ಮತ್ತೆ ಅಧಿಕಾರ ಹಿಡಿಯಲಿದೆ. ಇದನ್ನೇ ನಾನು ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದು. ಆದರೆ ತಿರುಚಿ ತಪ್ಪಾಗಿ ವರದಿ ಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಒಟ್ಟಾಗಿ ಕೆಲಸ ಮಾಡಲಿದ್ದೇವೆ
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮಾತನಾಡಿ, ಸುದೀರ್ಘ‌ವಾಗಿ ನಡೆದ ಕಾಂಗ್ರೆಸ್‌ ಸ್ಕ್ರೀನಿಂಗ್‌ ಕಮಿಟಿ ಹಾಗೂ ಕೇಂದ್ರ ಚುನಾವಣ ಸಮಿತಿ ಸಭೆಯಲ್ಲಿ ಶೇ. 60ರಿಂದ 70ರಷ್ಟು ಟಿಕೆಟ್‌ಗಳನ್ನು ನಾಯಕರೆಲ್ಲರೂ ಸರ್ವಾನುಮತದಿಂದ ಅಂತಿಮಗೊಳಿಸಿದ್ದೇವೆ. ಉಳಿದ ಸೀಟುಗಳಿಗೆ ಇನ್ನಷ್ಟು ಸಮಯ ಹಿಡಿಯಲಿದೆ. ಮತ್ತೂಂದು ಸುತ್ತಿನ ಚರ್ಚೆಯ ಅನಂತರ ಅವುಗಳಿಗೆ ಟಿಕೆಟ್‌ ಅಂತಿಮಗೊಳಿಸಲಾಗುವುದು. ನಾವೆಲ್ಲ ನಾಯಕರೂ ಒಟ್ಟಾಗಿ ಕೆಲಸ ಮಾಡಲಿದ್ದೇವೆ. ಒಟ್ಟಾಗಿಯೇ ಪಕ್ಷವನ್ನು ಅಧಿಕಾರಕ್ಕೆ ತರಲಿದ್ದೇವೆ. ಇದರಲ್ಲಿ ಯಾವುದೇ ಅನುಮಾನ ಬೇಡ’ ಎಂದರು.

Advertisement

ಒಮ್ಮತದಿಂದ ಅಭ್ಯರ್ಥಿ ಆಯ್ಕೆ: ಸುರ್ಜೇವಾಲ
ಬೆಂಗಳೂರು: ರಾಜ್ಯದಲ್ಲಿ ಬಿಜೆಪಿಯ 8-10 ಶಾಸಕರು, ವಿಧಾನ ಪರಿಷತ್‌ ಸದಸ್ಯರು ಪಕ್ಷ ತೊರೆಯುತ್ತಿರುವುದನ್ನು ನೋಡಿದರೆ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರದಲ್ಲಿ ವಿಶ್ವಾಸವಿಲ್ಲವೆಂಬುದು ಸಾಬೀತಾಗುತ್ತಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲ ಹೇಳಿದರು.

ಮಂಗಳವಾರ ದಿಲ್ಲಿಯಲ್ಲಿ ನಡೆದ ಕೇಂದ್ರ ಚುನಾವಣ ಸಮಿತಿ ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿ, ಡಬಲ್‌ ಎಂಜಿನ್‌ ಸರಕಾರ ರಾಜ್ಯಕ್ಕೆ ದ್ರೋಹ ಬಗೆದಿದೆ. ಬೊಮ್ಮಾಯಿ ಸರಕಾರ ವಿಫ‌ಲವಾಗಿದೆ. ಈ ಸರಕಾರದಲ್ಲಿ ವಿಶ್ವಾಸವಿಲ್ಲವೆಂಬ ಕಾರಣಕ್ಕೆ ಅವರದೇ ಪಕ್ಷದ ಶಾಸಕರು ರಾಜೀನಾಮೆ ಕೊಡುತ್ತಿದ್ದಾರೆ ಎಂದರು.

ಬಿಜೆಪಿ ಸರಕಾರ ರಚನೆಗೆ ಕಾರಣರಾದ ಆ ಪಕ್ಷದ ವಿಧಾನ ಪರಿಷತ್ತಿನ ಸದಸ್ಯರೊಬ್ಬರು ಪ್ರಾಯಶ್ಚಿñತ್ತ ಸತ್ಯಾಗ್ರಹ ನಡೆಸಿದ್ದಾರೆ, ಮತ್ತೂಂದೆಡೆ ಹಲವರು ಬಿಜೆಪಿ ತೊರೆಯುತ್ತಿದ್ದಾರೆ. ಕಾಂಗ್ರೆಸ್‌ ಪಕ್ಷಕ್ಕೆ ಇವೆಲ್ಲಾ ಪಾಸಿಟಿವ್‌ ಅಂಶಗಳಾಗುತ್ತಿವೆ. ನಮ್ಮಲ್ಲಿ ಒಗ್ಗಟ್ಟಿದೆ, ಯಾವುದೇ ಭಿನ್ನಾಭಿಪ್ರಾಯವಿಲ್ಲ, ಅಭ್ಯರ್ಥಿಗಳನ್ನು ಅವಿರೋಧವಾಗಿ ಒಮ್ಮತದಿಂದ ಆಯ್ಕೆ ಮಾಡಿದ್ದೇವೆ. ಚುನಾವಣ ನೀತಿ ಸಂಹಿತೆ ಜಾರಿಯಾಗುವ ಮುನ್ನವೇ 124 ಕ್ಷೇತ್ರಗಳಿಗೆ ಮೊಟ್ಟ ಮೊದಲಿಗೆ ನಾವೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದೇವೆ. 150 ಮಿಷನ್‌ನೊಂದಿಗೆ ನಾವು ಕೆಲಸ ಮಾಡುತ್ತಿದ್ದು ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.