ಮುಧೋಳ : ಗ್ಯಾರಂಟಿ ಯೋಜನೆಯಿಂದಾಗಿ ನಮ್ಮ ಸರ್ಕಾರದ ಅವಧಿಯಲ್ಲಿ ಅಭಿವೃದ್ದಿ ಕುಂಠಿತಗೊಳ್ಳುತ್ತದೆ ಎಂಬ ಹುಸಿ ಆರೋಪವನ್ನು ಹಲವರು ಮಾಡುತ್ತಿದ್ದು, ಅಂತವರಿಗೆ ಅಭಿವೃದ್ದಿ ಕಾರ್ಯಗಳ ಮೂಲಕವೇ ಉತ್ತರ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.
ತಾಲೂಕಿನ ಒಂಟಗೋಡಿ ಮಿರ್ಜಿ ಗ್ರಾಮಗಳ ಮಧ್ಯದಲ್ಲಿರುವ ಸೇತುವೆ ಸಂಪರ್ಕ ರಸ್ತೆಗೆ ಬುಧವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಈ ಭಾಗದ ರೈತರಿಗೆ ಅನುಕೂಲವಾಗುವಂತೆ ಹಲವಾರು ಅಭಿವೃದ್ಧಿ ಕಾಮಗಾರಿಗಳ ಯೋಜನೆ ಹಮ್ಮಿಕೊಳ್ಳಲಾಗಿದೆ.
ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಅಭಿವೃದ್ದಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುವ ಮೂಲಕ ತಾಲೂಕಿನ ಶ್ರೇಯೋಭಿವೃದ್ದಿಗೆ ಶ್ರಮಿಸಲಾಗುವುದು ಎಂದು ತಿಳಿಸಿದರು.
ಮುಂಬರುವ ದಿನಗಳಲ್ಲಿ ಉತ್ತೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಭಿವೃದ್ದಿಗೆ 5ಕೋಟಿ ಅನುದಾನ ನೀಡಿ ಮಾದರಿ ಶಾಲೆಯನ್ನಾಗಿ ರೂಪಿಸಲಾಗುವುದು ಎಂದರು.
ಅಭಿವೃದ್ಧಿ ವಿಷಯದಲ್ಲಿ ಪಕ್ಷಾತೀತವಾಗಿ ಕಾರ್ಯನಿರ್ವಹಿಸಿ ನಾವು ಬದ್ದತೆಯಿಂದ ಕೆಲಸ ಮಾಡುತ್ತೇವೆ ಎಂದರು.
ಗುತ್ತಿಗೆದಾರರು ನಿಮಗೆ ನೀಡಿರುವ ಕೆಲಸವನ್ನು ಗುಣಮಟ್ಟದಿಂದ ಹಾಗೂ ಕಾರ್ಯಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಸೂಚಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ, ಕಾಂಗ್ರೆಸ್ ಮುಖಂಡರಾದ ಹನಮಂತ ತಿಮ್ಮಾಪುರ, ಗೋವಿಂದಪ್ಪ ಗುಜ್ಜನ್ನವರ, ಸದುಗೌಡ ಪಾಟೀಲ, ಗಿರೀಶಗೌಡ ಪಾಟೀಲ, ಮುದಕಣ್ಣ ಅಂಬಿಗೇರ, ತಾಪಂ ಇಒ ಉಮೇಶ ಸಿದ್ನಾಳ, ಬಿಇಒ ಎಸ್.ಎಂ. ಮುಲ್ಲಾ, ರಾಜು ಸೇರಿದಂತೆ ಇತರರು ಇದ್ದರು.
ಉದಯವಾಣಿ ಫಲಶೃತಿ : ಸೇತುವೆ ಸಂಪರ್ಕ ರಸ್ತೆ ಬಗ್ಗೆ ಆಗಸ್ಟ್ 13ರಂದು ಉದಯವಾಣಿ ವಿಸ್ತೃತ ವರದಿ ಪ್ರಕಟಿಸಿತ್ತು. ಪ್ರವಾಹ ಉಂಟಾಗ ಸೇತುವೆ ಕೆಳಭಾಗದಲ್ಲಿ ನೀರು ನಿಂತು ವಾಹನ ಸವಾರರಿಗೆ ತೊಂದರೆಯುಂಟಾಗುತಿತ್ತು. ಸಮಸ್ಯೆ ಕುರಿತು ಇದ್ದೂ ಪ್ರವಾಹ ಬಂದ್ರೆ ಇಲ್ಲದಂತಾಗಿರುವ ಸೇತುವೆಗಳು ಎಂಬ ತಕೆಬರಹದಡಿ ವರದಿ ಪ್ರಕಟಿಸಿ ಅಧಿಕಾರಿ ಹಾಗೂ ಜನಪ್ರತಿನಿಧಿಗಳ ಗಮನ ಸೆಳೆದಿತ್ತು. ಇದೀಗ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿದ ಹಿನ್ನೆಲೆ ಪತ್ರಿಕೆ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು.