ಬೆಂಗಳೂರು: ಬಿಬಿಎಂಪಿ ಮೇಯರ್ ಹುದ್ದೆಗೆ ಕಾಂಗ್ರೆಸ್‌ನಲ್ಲಿ ತೀವ್ರ ಪೈಪೋಟಿ ನಡೆಯುತ್ತಿದ್ದು, ಪ್ರಭಾವಿಗಳಿಗೆ ಮಾತ್ರ
ಮೇಯರ್ ಸ್ಥಾನ ಸಿಗುತ್ತಿದೆ. ನಗರದ ಹೊರವಲಯಗಳ ವಾರ್ಡ್ ಸದಸ್ಯರಿಗೆ ಅನ್ಯಾಯವಾಗುತ್ತಿದೆ ಎಂದು ಸಂಸದ ಡಿ.ಕೆ. ಸುರೇಶ್ ನೇರ ಆರೋಪ ಮಾಡಿದ್ದಾರೆ.
ಈ ಕುರಿತು ಬುಧವಾರ ತುರ್ತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ತಮ್ಮ ಬೆಂಬಲಿಗರಿಗೆ ಮೇಯರ್
ಸ್ಥಾನ ನೀಡುವಂತೆ ಆಗ್ರಹಿಸಿದರು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಾದ ನಂತರ ಹೊರ ವಲಯದ 110 ಹಳ್ಳಿಗಳು ಮಹಾನಗರ ಪಾಲಿಕೆ ವ್ಯಾಪ್ತಿಗೆ ಬಂದಿದ್ದರೂ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಸರ್ಕಾರ ನಗರದ ಹೊರ ಭಾಗವನ್ನು ಕಡೆಗಣಿಸುತ್ತಿದೆ. ಮೇಯರ್ ಚುನಾವಣೆಯಲ್ಲಿ ಬಲಿಷ್ಠರನ್ನು ಮೇಯರ್ ಗಳಾಗಿ ನೇಮಕ ಮಾಡುತ್ತದೆ. ಇದರಿಂದ ಹೊರ ವಲಯದವರಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ವ್ಯಾಪ್ತಿಯ ರಾಜರಾಜೇಶ್ವರಿ ನಗರ ವಾರ್ಡ್‌ನ ವೇಲು ನಾಯಕ್ ಅಥವಾ ಬೇಗೂರು ವಾರ್ಡ್‌ನ ಅಂಜಿನಪ್ಪ ಅವರನ್ನು ಮೇಯರ್ ಹುದ್ದೆಗೆ ಪರಿಗಣಿಸಬೇಕೆಂದು ಆಗ್ರಹಿಸಿರುವ ಸುರೇಶ್, “ಈ ಬಗ್ಗೆ ಪಕ್ಷದ ವೇದಿಕೆಯಲ್ಲೂ ಚರ್ಚಿಸಿದ್ದೇನೆ. ಆದರೆ, ಪಕ್ಷದ ನಾಯಕರು ನಮ್ಮನ್ನು ಕಡೆಗಣಿಸಿದ್ದಾರೆ. ಅಧಿಕಾರ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ,’ ಎಂದು ನೇರವಾಗಿ ಅಸಮಾಧಾನವನ್ನು ಹೊರ ಹಾಕಿದ್ದಾರೆ.
ಹಕ್ಕು ಪ್ರತಿಪಾದಿಸುತ್ತಿದ್ದೇನೆ: “ಈಗಾಗಲೇ ಎರಡು ಬಾರಿ ಮೇಯರ್ ಆಯ್ಕೆ ಮಾಡಿದಾಗಲೂ ನಮ್ಮನ್ನು ಕಡೆಗಣಿಸಿದ್ದಾರೆ. ಈ ಬಾರಿ ನಾನು ಪ್ರತಿನಿಧಿಸುವ ಕ್ಷೇತ್ರಕ್ಕೆ ಆದ್ಯತೆ ನೀಡಬೇಕೆಂದು ನನ್ನ ಹಕ್ಕನ್ನು ಪ್ರತಿಪಾದಿಸುತ್ತಿದ್ದೇನೆ. ನಾವು ಸುಮ್ಮನಾದರೆ ನಮ್ಮ ತಲೆ ಸವರಿ ಬಿಡ್ತಾರೆ. ಅತ್ತರೆ ಹಾಲು ಕುಡಿಸುತ್ತಾರೆ ಎಂಬ ಮಾತಿದೆ. ನಾವಾಗಿಯೇ ಕೇಳದಿದ್ದರೆ, ಅವರು ನಮ್ಮನ್ನು ಪರಿಗಣಿಸುವುದಿಲ್ಲ. ನನ್ನ ಸಹನೆಯ ಕಟ್ಟೆ ಒಡೆಯುತ್ತಿದೆ. ಮುಂದಿನ ದಿನಗಳಲ್ಲಿ ಅದು ದೊಡ್ಡದಾದರೂ ಆಗಬಹುದು,’ ಎಂದು ಡಿ.ಕೆ. ಸುರೇಶ್ ಎಚ್ಚರಿಕೆ ನೀಡಿದ್ದಾರೆ.
ಬಂಡಾಯದ ಅಗತ್ಯವಿಲ್ಲ: ದಿನೇಶ್ ಗುಂಡೂರಾವ್ ಬಿಬಿಎಂಪಿ ಮೇಯರ್ ಆಯ್ಕೆ ಕುರಿತಂತೆ ಸಂಸದ ಡಿ.ಕೆ. ಸುರೇಶ್ ಬಂಡಾಯದ ಮಾತನಾಡುವ ಅಗತ್ಯವಿಲ್ಲ. ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಇನ್ನೂ ಯಾವುದೇ ಚರ್ಚೆ ನಡೆದಿಲ್ಲ. ಅವರಿಗೂ ಮೇಯರ್ ಆಯ್ಕೆ ಕುರಿತ ಸಭೆಗೆ ಆಹ್ವಾನ ನೀಡಲಾಗಿತ್ತು. ಆದು ಸಂವಹನ ತೊಂದರೆಯಿಂದ ಅವರಿಗೆ ತಲುಪಿಲ್ಲದಿರಬಹುದು. ಮೇಯರ್ ಗಾದಿಗೆ ಯಾವುದೇ ಭಾಷಿಕರಾದರೂ, ಅವರು ರಾಜ್ಯದಲ್ಲಿರುವುದರಿಂದ ಕನ್ನಡಿಗರೇ ಆಗಿರುತ್ತಾರೆ. ಬಿಬಿಎಂಪಿಗೆ ಆಯ್ಕೆಯಾದ ಮೇಲೆ ಅವರನ್ನು ಭಾಷೆ ಆಧಾರದಲ್ಲಿ ಕಡೆಗಣಿಸುವುದು ಸರಿಯಲ್ಲ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಅನ್ಯಾಯ ಸರಿಪಡಿಸುತ್ತೇವೆ: ಪರಮೇಶ್ವರ್ ಬಿಬಿಎಂಪಿ ಮೇಯರ್ ಆಯ್ಕೆ ಕುರಿತಂತೆ ಸಂಸದ ಡಿ.ಕೆ. ಸುರೇಶ್ ಅವರು ತಮ್ಮ ಹಕ್ಕನ್ನು ಮಂಡಿಸಿದ್ದಾರೆ. ಅವರ ಬೇಡಿಕೆಯನ್ನು ಪರಿಗಣಿಸುತ್ತೇವೆ. ಅವರು ತಮ್ಮ ಹಕ್ಕನ್ನು ಮಂಡಿಸಿದ್ದಾರೆ. ಅವರು ಬಂಡಾಯ ಮಾಡುವುದು ಬೇಡ. ಅನ್ಯಾಯವನ್ನು ಸರಿ ಪಡಿಸುತ್ತೇವೆ. ನಾವು ಇನ್ನೂ ಜೆಡಿಎಸ್ ಜೊತೆಗೆ ಹೊಂದಾಣಿಕೆ ಕುರಿತು ಚರ್ಚೆ ನಡೆಸಿದ್ದೇವೆ.ಅಭ್ಯರ್ಥಿ ಆಯ್ಕೆ ಕುರಿತು ಇನ್ನೂ ಚರ್ಚೆ ನಡೆದಿಲ್ಲ. ಆ ಸಂದರ್ಭದಲ್ಲಿ ಅವರ ಬೇಡಿಕೆಯನ್ನು ಪರಿಗಣಿಸುತ್ತೇವೆ. ಜೆಡಿಎಸ್ ಜೊತೆ ಪಕ್ಷ ಹೊಂದಾಣಿಕೆ ಮಾಡಿಕೊಳ್ಳುತ್ತದೆ. ಅದು ಯಾರೋ ಒಬ್ಬರು ಮಾಡುವ ಕೆಲಸವಲ್ಲ ಎಂದು ಪರಮೇಶ್ವರ್‌ಹೇಳಿದ್ದಾರೆ.