ಗಂಜೀಮಠ ನಿವಾಸಿಯಾಗಿರುವ ಏಕನಾಥ ಶೆಣೈ ಅವರು 1971ರ ಜನವರಿಯಲ್ಲಿ ಸೈನ್ಯಕ್ಕೆ ಸೇರ್ಪಡೆಯಾಗಿದ್ದು ಅದೇ ವರ್ಷ ಬಾಂಗ್ಲಾ ಯುದ್ಧ ನಡೆದಿತ್ತು. ಒಟ್ಟು 17 ವರ್ಷ ಸೇವೆ ಸಲ್ಲಿಸಿದ್ದಾರೆ. ನಾಯ್ಕ ಹುದ್ದೆಗೆ ಪದೋನ್ನತಿಗೊಂಡು ನಿವೃತ್ತರಾದರು.
ಏಕನಾಥ ಶೆಣೈ
ಬಾಂಗ್ಲಾ ಯುದ್ಧ ನಡೆಯುವಾಗ ನನಗೆ 19 ವರ್ಷ. ಆರ್ಮಿ ಮೆಡಿಕಲ್ ಕೋಪ್ಸ್ (ಎಎಂಸಿ) ಆಗಿದ್ದೆ. ತರಬೇತಿಯಲ್ಲಿರುವಾಗಲೇ ಯುದ್ಧ ಘೋಷಣೆಯಾದ ಹಿನ್ನೆಲೆಯಲ್ಲಿ ಸೇವೆ ಆರಂಭಿಸಿದೆವು. ಮೇರಥ್‌ನ ಮಿಲಿಟರಿ ಆಸ್ಪತ್ರೆಯಲ್ಲಿ ಗಾಯಗೊಂಡ ಸೈನಿಕರಿಗೆ ಚಿಕಿತ್ಸೆ ನೀಡುವ ಕೆಲಸ ನಮ್ಮದಾಗಿತ್ತು. ಕೈ, ಕಾಲು, ಕಣ್ಣು ಕಳೆದುಕೊಂಡ ಸೈನಿಕರಿಗೆ ಚಿಕಿತ್ಸೆ ನೀಡುವ ಕೆಲಸವನ್ನು ನಿತ್ಯವೂ ಮಾಡುತ್ತಿದ್ದೆವು. 1,000 ಬೆಡ್‌ಗಳಿದ್ದ ಆಸ್ಪತ್ರೆಯಲ್ಲಿ ಕೆಲವೊಮ್ಮೆ ಬೆಡ್‌ಗಳು ಸಾಕಾಗದೆ ನೆಲದಲ್ಲಿಯೇ ಮಲಗಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
ಜೀವನದಲ್ಲಿ ಮೊದಲ ಬಾರಿಗೆ ಅಂತಹ ದೃಶ್ಯ ನೋಡಿದ್ದೆ. ಸೈನಿಕರಲ್ಲದೆ ಇನ್ನೊಂದು ಬದಿಯಲ್ಲಿ ಯುದ್ದ ಕೈದಿಗಳಿಗೂ ಪ್ರತ್ಯೇಕ ಕ್ಯಾಂಪ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಅವರ ಸುತ್ತ ತಂತಿ ಬೇಲಿ ಹಾಕಲಾಗಿತ್ತು. ಕೃತಕ ಅವಯವಗಳನ್ನು ಜೋಡಿಸುವ ಕೆಲಸಗಳೂ ನಡೆಯುತ್ತಿದ್ದವು. ಆಸ್ಪತ್ರೆಯಲ್ಲಿ ವೈದ್ಯರು, ನರ್ಸ್ ಗಳ ಕೊರತೆ ಇರಲಿಲ್ಲ.
ಯುದ್ಧದ ಹಿನ್ನೆಲೆಯಲ್ಲಿ ರಾತ್ರಿ ಲೈಟ್ ಆಫ್’ ಆದೇಶವಿತ್ತು. ಹಾಗಾಗಿ ಸರಿಯಾದ ಬೆಳಕಿನ ವ್ಯವಸ್ಥೆಯೂ ಇಲ್ಲದ ಪರಿಸ್ಥಿತಿಯಲ್ಲಿ ಸೇವೆ ಮಾಡುವ ಅನಿವಾರ್ಯತೆ ಇತ್ತು. ಆಗಷ್ಟೇ ಕೈ, ಕಾಲುಗಳನ್ನು ಕಳೆದುಕೊಂಡು ಬಂದ ಸೈನಿಕರನ್ನು ನೋಡಿ ಸ್ವಲ್ಪವೂ ಧೃತಿಗೆಡದೆ ಚಿಕಿತ್ಸೆಗೆ ಮುಂದಾಗುತ್ತಿದ್ದೆವು. ಆ ದೃಶ್ಯಗಳು ಈಗಲೂ ಕಣ್ಣ ಮುಂದಿವೆ. ಬಳಿಕ ನಾನು ಮೇರಥ್‌ನಿಂದ ಶ್ರೀನಗರದ ಮಿಲಿಟರಿ ಆಸ್ಪತ್ರೆಗೆ ಸರ್ಜಿಕಲ್ ವಾರ್ಡ್‌ನಲ್ಲಿ ಸೇವೆಗೆ ಸೇರ್ಪಡೆಯಾದೆ. ಅಲ್ಲಿ ಕೂಡ ನೆಲಬಾಂಬ್‌ಗಳಿಂದ ಗಾಯಗೊಂಡ ಸೈನಿಕರು ಚಿಕಿತ್ಸೆಗೆ ಬರುತ್ತಿದ್ದರು.
ನಿರೂಪಣೆ: ಸಂತೋಷ್ ಬೊಳ್ಳೆಟ್ಟು