ಚಿತ್ರದುರ್ಗ: ವಾಜಪೇಯಿ ಮತ್ತು ನೆಹರು ಅವರು ಹಿರಿಮೆಯ ನಾಯಕರು. ಇಬ್ಬರೂ ಪ್ರಧಾನಿಗಳಾಗಿ ಕಾರ್ಯ ನಿರ್ವಹಿಸಿದ್ದಾರೆ. ಇಬ್ಬರ ಹೆಸರಿನಲ್ಲಿ ನಡೆಯುತ್ತಿರುವ ವಿವಾದಕ್ಕೆ ತೆರೆ ಎಳೆಯಬೇಕಿದೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಜಪೇಯಿ ಮೊರಾರ್ಜಿ ದೇಸಾಯಿ ಸಂಪುಟದಲ್ಲಿ ವಿದೇಶಾಂಗ ಸಚಿವರಾಗಿದ್ದಾಗ ದೆಹಲಿ ಸೌತ್ ಬ್ಲಾಕ್ ನಲ್ಲಿದ್ದ ನೆಹರು ಪುತ್ಥಳಿ ಸ್ಥಳಾಂತರಿಸಿದ್ದನ್ನು ಗಮನಿಸಿ ಅದೇ ಜಾಗದಲ್ಲಿ ಪುನರ್ ಪ್ರತಿಷ್ಠಾಪನೆ ಮಾಡಿಸಿದ್ದರು ಎಂದರು.
ವಾಜಪೇಯಿ ಮತ್ತು ನೆಹರು ಬಗ್ಗೆ ಮಾತು ಮಿತಿ ಮೀರುತ್ತಿವೆ. ಯಾರನ್ನು ಬೇಕಾದ್ರೂ ಟೀಕೆ ಮಾಡಬಹುದು ಎಂಬುದು ಸರಿಯಲ್ಲ. ಎರಡೂ ಕಡೆಯೂ ಮಾತನಾಡುವುದು ನಿಲ್ಲಿಸಬೇಕು. ಅವರು ಇಲ್ಲದಿದ್ದಾಗ ರಾಜಕಾರಣಕ್ಕಾಗಿ ದೊಡ್ಡವರ ಹೆಸರು ಎಳೆದು ತರುವುದು ಸರಿಯಲ್ಲ ಎಂದು ರಾಮುಲು ಅಭಿಪ್ರಾಯಪಟ್ಟರು.
ಇದನ್ನೂ ಓದಿ:75 ನೇ ಸ್ವಾತಂತ್ರ್ಯ : ಎಲ್ಲಾ ಸೈನಿಕ ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಪ್ರವೇಶ: ಮೋದಿ ಉವಾಚ..!
ಅಧಿಕಾರ ಕಳೆದುಕೊಂಡವರು ಹಗಲುಗನಸು ಕಾಣುತ್ತಿದ್ದಾರೆ. ತಮ್ಮ ಸರ್ಕಾರ ಬರುತ್ತದೆ ಎಂದು ಅವರು ಭಾವಿಸಿದ್ದಾರೆ. ಇವತ್ತು, ನಾಳೆ ಮತ್ತು 2024ಕ್ಕೂ ನಮ್ಮದೇ ಸರ್ಕಾರ ಇರುತ್ತದೆ ಎಂದು ಪರೋಕ್ಷವಾಗಿ ಮಾಜಿ ಸಿಎಂ ಸಿದ್ಧರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಖಾತೆ ಬಗ್ಗೆ ನನಗೆ ಯಾವುದೇ ಅಸಮಾಧಾನ ಇಲ್ಲ. ಪಕ್ಷ ನೀಡಿದ ಜವಾಬ್ದಾರಿಯನ್ನು ನಿಷ್ಠೆಯಿಂದ ನಿಭಾಯಿಸುತ್ತೇನೆ. ಚುನಾವಣೆ ನಡೆಸುವುದು, ಗೆಲ್ಲಿಸುವುದು ಪಕ್ಷ ಅಧಿಕಾರಕ್ಕೆ ತರುವುದು ಮಾತ್ರ ನನ್ನ ಕೆಲಸ ಎಂದು ರಾಮುಲು ಹೇಳಿದರು.