ಮೈಸೂರು: ರಾಷ್ಟ್ರಪಿತ ಅನ್ಯಾಯದ ವಿರುದ್ಧ ದೇಶವನ್ನು ಏಕೀಕರಿಸಿದ ರೀತಿಯಲ್ಲಿಯೇ ಭಾರತವನ್ನು ಏಕೀಕರಣಗೊಳಿಸುವುದಾಗಿ ರಾಹುಲ್ ಗಾಂಧಿ ಹೇಳಿದರು.
ಗಾಂಧಿ ಜಯಂತಿ ದಿನವಾದ ಇಂದು ಭಾರತ್ ಜೋಡೋ ಯಾತ್ರೆಯ ಕರ್ನಾಟಕ ಚರಣದಲ್ಲಿರುವ ರಾಹುಲ್ ಗಾಂಧಿ ಅವರು ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಬದನವಾಳು ಗ್ರಾಮದ ಖಾದಿ ಗ್ರಾಮೋದ್ಯೋಗದಲ್ಲಿರುವ ಮಹಾತ್ಮ ಗಾಂಧಿ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು.
ಮಹಾತ್ಮ ಗಾಂಧಿಯವರು 1927ರಲ್ಲಿ ಚಾಲನೆ ನೀಡಿದ್ದ ಖಾದಿ ಮತ್ತು ಗ್ರಾಮೋದ್ಯೋಗ ಕೇಂದ್ರಕ್ಕೆ ರಾಹುಲ್ ಗಾಂಧಿಯವರೊಂದಿಗೆ ಸಿದ್ದರಾಮಯ್ಯ ಅವರು ಭೇಟಿ ನೀಡಿ ಅಲ್ಲಿಯ ನೇಯ್ಗೆಕಾರರೊಂದಿಗೆ ಮಾತುಕತೆ ನಡೆಸಿದರು.
ಇದನ್ನೂ ಓದಿ:ಅವರು ನಟನಾಗಿದ್ದರೆ ಆಸ್ಕರ್ ಪ್ರಶಸ್ತಿ ಪಡೆಯಬಹುದು: ಡಿಕೆಶಿ ಕಣ್ಣೀರಿಗೆ ಸಿಟಿ ರವಿ ವ್ಯಂಗ್ಯ
“ಬಾಪು ನಮಗೆ ಸತ್ಯ ಮತ್ತು ಅಹಿಂಸೆಯ ಮಾರ್ಗದಲ್ಲಿ ನಡೆಯಲು ಕಲಿಸಿದರು. ಅವರು ಪ್ರೀತಿ, ಸಹಾನುಭೂತಿ, ಸಾಮರಸ್ಯ ಮತ್ತು ಮಾನವೀಯತೆಯ ಅರ್ಥವನ್ನು ವಿವರಿಸಿದರು” ಎಂದು ರಾಹುಲ್ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
“ಇಂದು ಗಾಂಧಿ ಜಯಂತಿಯಂದು, ಅವರು ಅನ್ಯಾಯದ ವಿರುದ್ಧ ದೇಶವನ್ನು ಒಗ್ಗೂಡಿಸಿದಂತೆ ನಾವು ನಮ್ಮ ಭಾರತವನ್ನು ಒಂದುಗೂಡಿಸುವ ಪ್ರತಿಜ್ಞೆಯನ್ನು ತೆಗೆದುಕೊಳ್ಳುತ್ತೇವೆ” ಎಂದು ರಾಹುಲ್ ಗಾಂಧಿ ಹೇಳಿದರು.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿದ್ದು, “ಬಾಪು ಸತ್ಯದ ಉದಾಹರಣೆ. ಬಾಪು ಧೈರ್ಯದ ಜ್ಯೋತಿ. ಬಾಪು ಅವರು ದೇಶದ ಜನರ ನೋವುಗಳನ್ನು ಹಂಚಿಕೊಳ್ಳುವ ಮತ್ತು ಇಡೀ ಭಾರತವನ್ನು ಒಂದುಗೂಡಿಸುವ ಭಾರತ ಯಾತ್ರಿ” ಎಂದು ಹೇಳಿದ್ದಾರೆ.